ಬೆಂಗಳೂರು : ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಉದ್ಯೋಗಗಳನ್ನು ಸಮರೋಪಾದಿಯಲ್ಲಿ ಭರ್ತಿಮಾಡುವ ಬದಲು, ಕರ್ನಾಟಕ ರಾಜ್ಯ ಸರ್ಕಾರವು ಉದ್ಯೋಗಾಂಕ್ಷಿ ಯುವಜನರನ್ನು ಮರಳುಗೊಳಿಸಲು ಹೊಸ ಉದ್ಯೋಗ ನೀತಿಯನ್ನು ಜಾರಿಗೊಳಿಸುತ್ತಿದೆ.
ಸರ್ಕಾರ ಹೊಸ ಉದ್ಯೋಗ ನೀತಿಯ ಮೂಲಕ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ಸಿಗುತ್ತವೆ ಎಂಬ ಬಣ್ಣದ ಮಾತನ್ನು ಆಡುತ್ತಿದೆ. ಈ ನೀತಿಯಲ್ಲಿ 1 ಕೋಟಿ ಬಂಡವಾಳ ಹೂಡುವ ಉದ್ದಿಮೆದಾರರು ಕನಿಷ್ಠ ಒಂದು ಉದ್ಯೋಗ ಸೃಷ್ಟಿ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.
ಈ ಮೊದಲು 10 ಕೋಟಿ ಬಂಡವಾಳ ಹೂಡಿಕೆಗೆ ಕೇವಲ 7 ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು, ಈಗ 10 ಉದ್ಯೋಗಗಳು ಸೃಷ್ಟಿಯಾಗುತ್ತವೆ, ಇದು ಹಿಂದಿಗಿಂತ ಪ್ರತಿಶತ 25ರಷ್ಟು ಅಧಿಕವಾಗುತ್ತದೆ ಎಂದು ಹೇಳಲಾಗಿದೆ. ಈ ಹೊಸ ಉದ್ಯೋಗ ನೀತಿಯಿಂದ ಸುಮಾರು 7.5 ಲಕ್ಷ ಉದ್ಯೋಗಗಳು ಹೊಸದಾಗಿ ಸೃಷ್ಟಿಯಾಗುತ್ತವೆ ಎಂದೂ ರಾಜ್ಯ ಸರ್ಕಾರ ಹೇಳಿದೆ. ಇದೂ ಕೂಡ ಕೇಂದ್ರ ಸರ್ಕಾರದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಹುಸಿ ಭರವಸೆಯಂತೆಯೇ!
ಏಕೆಂದರೆ ಮುಂದಿನ ಮೂರು ವರ್ಷಕ್ಕೆ 7.5ಲಕ್ಷ ಉದ್ಯೋಗ ಸೃಷ್ಟಿಯಾಗಬೇಕೆಂದರೆ ಸುಮಾರು 7.5ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಬೇಕು. ಈ ಹಿಂದೆ ನಡೆದ ಹೂಡಿಕೆದಾರರ ಸಮಾವೇಶಗಳಲ್ಲಿ ಕೂಡ ಲಕ್ಷಾಂತರ ಹುದ್ದೆಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದ್ದ ಭರವಸೆಗಳು ಸುಳ್ಳಾಗಿವೆ. ನಿರೀಕ್ಷಿತ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯೂ ಆಗಿಲ್ಲ, ಉದ್ಯೋಗಗಳೂ ಸೃಷ್ಟಿಯಾಗಲಿಲ್ಲ. ಬದಲಿಗೆ ಇದರ ಹೆಸರಿನಲ್ಲಿ ಹೂಡಿಕೆದಾರ ಬಂಡವಾಳಗಾರರಿಗೆ ಪುಕ್ಕಟ್ಟೆಯಾಗಿ ಭೂಮಿ, ವಿದ್ಯುತ್, ನೀರು ನೀಡಿ ಜೊತೆಗೆ ತೆರಿಗೆ ವಿನಾಯಿತಿಯನ್ನೂ ಕೊಟ್ಟು ಬಂಡವಾಳಶಾಹಿಗಳು ಬೆಳೆಯಲು ಅವಕಾಶ ಮಾಡಲಾಗಿದೆ. ಈಗ ತಂದಿರುವ ಉದ್ಯೋಗ ನೀತಿಯೂ ಕೂಡ ಬಂಡವಾಳಶಾಹಿಗಳ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ.
ಸರಕಾರಕ್ಕೆ ನಿಜವಾಗಿಯೂ ನಿರುದ್ಯೋಗಿ ಯುವಕರ ಕುರಿತು ಕಾಳಜಿ ಇದ್ದರೆ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 3 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕಿತ್ತು. ಅದಕ್ಕಾಗಿ ಒಂದು ಸಮಗ್ರವಾದ ರಚನಾತ್ಮಕವಾದ ಉದ್ಯೋಗ ನೀತಿಯನ್ನು ಅವಶ್ಯಕವಾಗಿ ತರಬೇಕಿತ್ತು. ಬದಲಿಗೆ ರಾಜ್ಯ ಸರ್ಕಾರ ಹೊಸ ಉದ್ಯೋಗ ನೀತಿಯ ಹೆಸರಿನಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಪೂರಕವಾದ ನೀತಿಯನ್ನು ಜಾರಿಗೊಳಿಸುತ್ತಾ ಯುವಜನರ ದಿಕ್ಕುತಪ್ಪಿಸುತ್ತಿದೆ.
ಆದ್ದರಿಂದ ಎಐಡಿವೈಓ ಕರ್ನಾಟಕ ರಾಜ್ಯ ಸಮಿತಿಯು ಈ ಹೊಸ ಉದ್ಯೋಗ ನೀತಿಯನ್ನು ಖಂಡಿಸುತ್ತದೆ. ಈಗಾಗಲೇ ಸರ್ಕಾರದ ಶಿಕ್ಷಣ, ಆರೋಗ್ಯ ಇನ್ನಿತರ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿಮಾಡಬೇಕೆಂದು ಆಗ್ರಹಿಸುತ್ತದೆ. ರಾಜ್ಯದ ಯುವಜನತೆ ಈ ಕುಟಿಲ ನೀತಿಯನ್ನು ಹಿಮ್ಮೆಟ್ಟಿಸಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡುತ್ತದೆ.