ಬೆಂಗಳೂರು : ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಮೇ. 30, 31 ಹಾಗೂ ಜೂನ್ 1 ರವರೆಗೆ ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ರಾಜ್ಯದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಮೇ 30 ರ ಸೋಮವಾರ ಸಂಜೆ 4.30ಕ್ಕೆ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು ಸಚಿವ ಸಂಪುಟದ ಹಲವು ಸಚಿವರುಗಳು, ಗಣ್ಯರು, ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರ ಸಂಘಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಬೆಂಗಳೂರಿನ ರಾಜ್ಯ ಪರಿಷತ್ ಸದಸ್ಯರು, ತಾಲೂಕು ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ರಾಷ್ಟ್ರ (ALL INDIA CIVIL SERVICE SPORTS)ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು, ಸರ್ಕಾರಿ ನೌಕರರು ಭಾಗವಹಿಸಲಿದ್ದಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ಟ್ರಾಕ್ಸೂಟ್ ಮತ್ತು ಕ್ಯಾಪ್ ವಿತರಿಸಲಾಗುವುದು.
ಎಲ್ಲಾ ಕ್ರೀಡಾಪಟುಗಳಿಗೂ ಮೂರು ದಿನಗಳ ಕಾಲ ಶುಚಿ-ರುಚಿಯಾದ ಊಟೋಪಹಾರ ಕಲ್ಪಿಸಲಾಗುವುದು.
ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ವಿಶೇಷ ನೆನಪಿನ ಕಾಣಿಕೆ ನೀಡಲಾಗುವುದು.
ಅಖಿಲ ಭಾರತ ನಾಗರಿಕ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳನ್ನು ಅಭಿನಂದಿಸಲಾಗುವುದು.
ಮೇ. 30 ರಂದು 6:00 ಗಂಟೆಗೆ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೇ.31 ರಂದು ಸಂಜೆ 6:00 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಾಯೋಜಿತ ಜನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಕೇಂದ್ರ ಸಂಘದ ONLINE ಮುಖಾಂತರ ನೊಂದಣಿ ಮಾಡಿಕೊಂಡಿರುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘದ ರಾಜ್ಯಾಧ್ಯಕ್ಷ
ಸಿ.ಎಸ್. ಷಡಕ್ಷರಿ ಮತ್ತು ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.