ಹೊಸದುರ್ಗ, (ಮೇ.10): ತಾಲೂಕಿನ ನಾಕೀಕೆರೆ ಗ್ರಾಮದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಯ ಅಗ್ನಿಕುಂಡ ಮಹೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವಗಳು ಮಂಗಳವಾರ ವಿಜೃಂಭಣೆಯಿಂದ ಜರುಗಿದವು.
ಬಸವ ಜಯಂತಿಯ ನಂತರದ ಮಂಗಳವಾರ ಅಗ್ನಿಕುಂಡ ಮಹೋತ್ಸವ ನಡೆಸುವದು ವಾಡಿಕೆಯಾಗಿದ್ದು, ಈ ಬಾರಿ ಕೋವಿಡ್ ನಂತರದ ವರ್ಷವಾದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಸೋಮವಾರ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಆರಂಭವಾದ ಅಗ್ನಿಕುಂಡ ಮಹೋತ್ಸವದ ಕೈಂಕರ್ಯಗಳು ಮಂಗಳವಾರ ರಾತ್ರಿ ನಡೆದ ಅಡ್ಡಪಲ್ಲಕ್ಕಿ ಉತ್ಸವದ ನಂತರ ತೆರೆಕಂಡವು.
ಶ್ರೀ ಕಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಗಂಗಾಪೂಜೆ ಆನಂತರ ಅಗ್ನಿಕುಂಡ ಮಹೋತ್ಸವ ಹಾಗೂ ಮಹಾಮಂಗಳಾರತಿ ನಡೆಯಿತು.
ಅಗ್ನಿಕುಂಡ ಮಹೋತ್ಸವಕ್ಕೆ ಮುನ್ನ ನಂದಿ ಪೂಜೆ ಸಲ್ಲಿಸಿದ ಭಕ್ತರು, ಮಂಗಳವಾರ ನಸುಕಿನಲ್ಲಿ ಅಗ್ನಿಕುಂಡಕ್ಕೆ ಕಟ್ಟಿಗೆ ಹಾಕಿ ಕೆಂಡ ಸಿದ್ಧಪಡಿಸಿದ್ದರು. ಗಂಗಾಪೂಜೆ ಮುಗಿಸಿ ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ದೇವರನ್ನು ಕರೆತರಲಾಯಿತು. ಈ ವೇಳೆ ವೀರಗಾಸೆ, ಚಮ್ಮಾಳ, ನಂದಿ ಧ್ವಜ ಕುಣಿತ ಸೇರಿದಂತೆ ಭಕ್ತರು ಕುಣಿದು ಸಂಭ್ರಮಿಸಿದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಂಡ ಹಾಯ್ದ ಯುವ ಕಾರ್ಯಕ್ರಮ ನಡೆಯಿತು. ನಂತರ ಹೂವಿನ ಹಾರದ ಹರಾಜು ನಡೆಯಿತು.
ಅಗ್ನಿಕುಂಡ ಮಹೋತ್ಸವಕ್ಕೆ ಚನ್ನಗಿರಿ ತಾಲೂಕಿನ ಬನ್ನಿಹಟ್ಟಿ, ಅಗರ ಬನ್ನಿಹಟ್ಟಿ, ಚಿತ್ರದುರ್ಗ ತಾಲೂಕಿನ ಗೊಡಬನಾಳ್, ಸೊಂಡೆಕೊಳ ಸೇರಿದಂತೆ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಾಗವಹಿಸಿದ್ದ ಭಕ್ತಾದಿಗಳಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಇನ್ನೂ ಸಂಜೆ 7 ಗಂಟೆಗೆ ಆರಂಭವಾದ ಅಡ್ಡಪಲ್ಲಕ್ಕಿ ಉತ್ಸವ 11 ಗಂಟೆಯವರೆಗೆ ಜರುಗಿತು.