ಚಿತ್ರದುರ್ಗ, (ಏ.19) : ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಸಲ್ಲದು. ಖಾಸಗಿ ಹಾಗೂ ಕೆಎಸ್‍ಆರ್‍ಟಿಸಿ ವಾಹನ ಚಾಲಕರು ರಸ್ತೆ ಸುರಕ್ಷಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ವಾಹನ ಚಾಲನೆ ಮಾಡುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾಸಗಿ ಬಸ್‍ಗಳಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣಿಕರನ್ನು ಟಾಪ್‍ನಲ್ಲಿ ಕುರಿಸಿಕೊಂಡು ಓಡಾಟ ನೆಡೆಸಬಾರದು. ಖಾಸಗಿ ಹಾಗೂ ಕೆಎಸ್‍ಆರ್‍ಟಿಸಿ ಚಾಲಕರು ಅಪಾಯಕಾರಿ ರೀತಿಯಲ್ಲಿ, ಪೈಪೋಟಿಗೆ ಬಿದ್ದಂತೆ ಬಸ್ ಓಡಿಸುತ್ತಾರೆ, ಇಂತಹ ಘಟನೆಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಸಾರಿಗೆ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಖಾಸಗಿ ಜಾಹೀರಾತು ಪ್ರದರ್ಶನಕ್ಕೆ ವಾರ್ಷಿಕವಾಗಿ ಸಣ್ಣವಾಹನಗಳಿಗೆ ರೂ.750, ಬಸ್ ಸೇರಿದಂತೆ ಇತರೆ ದೊಡ್ಡ ವಾಹನಗಳಿಗೆ ರೂ.2000 ಶುಲ್ಕ ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರದ್ದು ಪಡಿಸಿದ ರಹದಾರಿಗಳನ್ನು ಪುನರ್‍ಪರಿಶೀಲಿಸಿ, ರಹದಾರಿಗಳನ್ನು ಪುನಃ ನೀಡುವಂತೆ ಖಾಸಗಿ ಬಸ್ ಮಾಲೀಕರು ಸಭೆಯಲ್ಲಿ ಜಿಲ್ಲಾಧಿಕಾರಿಗಳಲ್ಲಿ ಕೋರಿದರು.
ನಿಗಧಿತ ದಂಡ ಹಾಗೂ ಶುಲ್ಕ ಪಡೆದು ರಹದಾರಿ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಕೆಲವು ಖಾಸಗಿ ಮಾಲೀಕರು ರಹದಾರಿ ರದ್ದತಿಗೆ ಸ್ವಯಂ ಅರ್ಜಿಗಳನ್ನು ಪ್ರಾಧಿಕಾರ ಸಭೆಯಲ್ಲಿ ಮಂಡಿಸಿದರು.
ರಹದಾರಿ ವರ್ಗಾವಣೆಯನ್ನು ಕಾನೂನಾತ್ಮಕವಾಗಿಕೈಗೊಳ್ಳಲು ಹಾಗೂ ಖಾಸಗಿ ಮತ್ತು ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರದ ವೇಳಾ ಪಟ್ಟಿಯನ್ನು ಪರಿಷ್ಕರಿಸಲು ಪ್ರಾಧಿಕಾರದಿಂದ ಸಭೆಯಲ್ಲಿ ಅನುಮತಿ ನೀಡಲಾಯಿತು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸದಸ್ಯರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಪ್ರಾಧಿಕಾರದ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಾಲಕೃಷ್ಣ, ಕೆ.ಎಸ್.ಆರ್.ಟಿ.ಸಿ ಚಿತ್ರದುರ್ಗ ವಿಭಾಗೀಯ ಅಧಿಕಾರಿ ಕೆ.ಸತ್ಯಸುಂದರಂ, ಖಾಸಗಿ ಬಸ್ ಮಾಲೀಕರು, ನ್ಯಾಯವಾದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.