ನವದೆಹಲಿ: ಪಿಎಫ್ (PF) ಖಾತೆ ಬ್ಲಾಕ್ ಆಗುವುದು ಅನೇಕ ಉದ್ಯೋಗಿಗಳಿಗೆ ಎದುರಾಗುವ ಸಾಮಾನ್ಯ ಸಮಸ್ಯೆಯಾಗಿದೆ. ಯುಎಎನ್ (UAN) ಸಂಖ್ಯೆ ಅಥವಾ ಪಾಸ್ವರ್ಡ್ ಅನ್ನು ಐದು ಬಾರಿಗಿಂತ ಹೆಚ್ಚು ತಪ್ಪಾಗಿ ನಮೂದಿಸಿದಾಗ ಭದ್ರತಾ ದೃಷ್ಟಿಯಿಂದ ಖಾತೆ ತಾತ್ಕಾಲಿಕವಾಗಿ ಬ್ಲಾಕ್ ಆಗುತ್ತದೆ. ಅಲ್ಲದೆ, ಇ-ನಾಮಿನೇಷನ್ (e-Nomination) ವಿವರಗಳನ್ನು ಅಪ್ಡೇಟ್ ಮಾಡದಿದ್ದರೂ ಪಿಎಫ್ ಖಾತೆ ಬ್ಲಾಕ್ ಅಥವಾ ಸೀಮಿತಗೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಪಿಎಫ್ ಕ್ಲೈಮ್ಗಳು ಮತ್ತು ಇತರ ಆನ್ಲೈನ್ ಸೇವೆಗಳಿಗೆ ಅಡ್ಡಿಯಾಗುತ್ತದೆ.
ಈ ಸಮಸ್ಯೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಈಗ ಸುಲಭ ಪರಿಹಾರ ನೀಡಿದೆ. ಬ್ಲಾಕ್ ಆದ ಪಿಎಫ್ ಖಾತೆಯನ್ನು ನಿಮ್ಮ ಮೊಬೈಲ್ ಮೂಲಕವೇ ಸುಲಭವಾಗಿ ಅನ್ಲಾಕ್ ಮಾಡಿಕೊಳ್ಳಬಹುದು.
ಪಿಎಫ್ ಖಾತೆಯನ್ನು ಅನ್ಲಾಕ್ (ಆಕ್ಟಿವ್) ಮಾಡುವುದು ಹೇಗೆ?
ಮೊದಲನೆಯದಾಗಿ ಅಧಿಕೃತ EPFO ಪೋರ್ಟಲ್ಗೆ ಭೇಟಿ ನೀಡಿ.
ಅಲ್ಲಿ ‘ಸೈನ್ ಇನ್’ (Sign In) ಬಟನ್ ಕೆಳಗೆ “ಅನ್ಲಾಕ್ ಅಕೌಂಟ್” (Unlock Account) ಎಂಬ ಆಯ್ಕೆಯನ್ನು ಗಮನಿಸಿ.
ಈ ಆಯ್ಕೆ ಕಾಣಿಸಿದರೆ ಅದರ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ.
ಒಂದು ವೇಳೆ ತಕ್ಷಣಕ್ಕೆ ಈ ಆಯ್ಕೆ ಕಾಣಿಸದಿದ್ದರೆ ಪುಟವನ್ನು (Page) ರಿಫ್ರೆಶ್ ಮಾಡಿ. ಕೆಲವೊಮ್ಮೆ ಈ ಆಯ್ಕೆ ಕಾಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಆಗಲೂ ಆಯ್ಕೆ ಕಾಣಿಸದಿದ್ದರೆ ಒಂದು ಗಂಟೆಯ ನಂತರ ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿ. ಈ ಸರಳ ವಿಧಾನದ ಮೂಲಕ ಬ್ಲಾಕ್ ಆದ ನಿಮ್ಮ ಪಿಎಫ್ ಖಾತೆಯನ್ನು ಮರಳಿ ಪಡೆಯಬಹುದು.
ಇ-ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ?
ನಿಮ್ಮ ಖಾತೆಯಲ್ಲಿ ಇ-ನಾಮಿನೇಷನ್ ವಿವರಗಳು ಇಲ್ಲದಿದ್ದರೆ ಆನ್ಲೈನ್ ಸೇವೆಗಳಿಗೆ ತೊಂದರೆಯಾಗಬಹುದು. ಇದನ್ನು ಅಪ್ಡೇಟ್ ಮಾಡಲು ಇಪಿಎಫ್ಒ ಹೋಮ್ ಪೇಜ್ನಲ್ಲಿ ಲಾಗಿನ್ ಆಗಿ “ಮ್ಯಾನೇಜ್” (Manage) ಆಯ್ಕೆಯನ್ನು ಆರಿಸಿ.
ನಂತರ ನಿಮ್ಮ ನಾಮಿನಿಯ ಹೆಸರು, ವಯಸ್ಸು, ಫೋಟೋ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ ಸಬ್ಮಿಟ್ ಮಾಡಿ.
ಇ-ನಾಮಿನೇಷನ್ ಪೂರ್ಣಗೊಳಿಸುವುದರಿಂದ ನಿಮ್ಮ ಖಾತೆ ಬ್ಲಾಕ್ ಆಗುವುದನ್ನು ತಡೆಯಬಹುದು. ಅಷ್ಟೇ ಅಲ್ಲದೆ, ಉದ್ಯೋಗದಲ್ಲಿರುವಾಗ ಖಾತೆದಾರರು ಅಕಾಲಿಕ ಮರಣ ಹೊಂದಿದರೆ, ನಾಮಿನಿಗಳು ಪಿಎಫ್ ಹಣವನ್ನು ಹಿಂಪಡೆಯಲು ಮತ್ತು ಜೀವ ವಿಮಾ ಸೌಲಭ್ಯವನ್ನು ಸುಲಭವಾಗಿ ಪಡೆಯಲು ಇದು ನೆರವಾಗುತ್ತದೆ. ಇದರಿಂದ ಕುಟುಂಬಸ್ಥರು ಇಪಿಎಫ್ಒ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ.












