Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆಯಲ್ಲಿ ಜಿಲ್ಲಾ ಲೇಖಕಿಯರ ಬಳಗದಿಂದ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಆಚರಣೆ

---Advertisement---

ಸುದ್ದಿಒನ್, ಚಳ್ಳಕೆರೆ, ನವೆಂಬರ್. 29 : ಜಿಲ್ಲಾ ಲೇಖಕಿಯರ ಬಳಗ, ಚಿತ್ರದುರ್ಗ ವತಿಯಿಂದ ಚಳ್ಳಕೆರೆಯ ಕನ್ನಡ ಕೌಸ್ತುಭ ನಿಲಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಮರಡಿಹಳ್ಳಿ ಅವರು, ಕನ್ನಡ ಏಕೀಕರಣ ಚಳುವಳಿಯ ಮಹತ್ವವನ್ನು ಸ್ಮರಿಸಿದರು. ಅಲ್ಲದೆ, ಲೇಖಕಿಯರ ಬಳಗದ ಹಿನ್ನೆಲೆ, ಉದ್ದೇಶ ಹಾಗೂ ಸಂಘವು ಇದುವರೆಗೆ ಸಾಗಿಬಂದ ಸಾಧನೆಯ ಹಾದಿಯನ್ನು ಸವಿವರವಾಗಿ ಪರಿಚಯಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಕವಿ ತಿಪ್ಪಣ್ಣ ಮರಿಕುಂಟೆ ಅವರು ಮಾತನಾಡಿ, ಉತ್ತಮ ಓದುಗನಾದಾಗ ಮಾತ್ರ ಉತ್ತಮ ಬರಹಗಾರನಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕನ್ನಡ ವರ್ಣಮಾಲೆಯ ವಿಶೇಷತೆ, ಸೂಕ್ತ ಪದ ಪ್ರಯೋಗ, ಕಾವ್ಯ ಕಟ್ಟುವ ಕಲೆ ಹಾಗೂ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಕೊಡುಗೆಗಳ ಕುರಿತು ತಮ್ಮ ಅನುಭವದ ಹಿತನುಡಿಗಳನ್ನು ಹಂಚಿಕೊಂಡರು.

ಮತ್ತೋರ್ವ ಹಿರಿಯ ಸಾಹಿತಿ ಶ್ರೀಮತಿ ಶಕುಂತಲಾ ಆಚಾರ್ಯ ಅವರು ‘ನಾಡೋಜ ಗೀತಾ ನಾಗಭೂಷಣ ಅವರ ಬದುಕು ಮತ್ತು ಬರಹ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗೀತಾ ನಾಗಭೂಷಣ ಅವರ ಕೃತಿಗಳಲ್ಲಿನ ‘ದುರ್ಗಿ’ ಪಾತ್ರದ ಜೀವನದ ತಿರುವುಗಳು, ವಿವಾಹದ ಸನ್ನಿವೇಶಗಳು ಹಾಗೂ ಸಾಮಾಜಿಕ ಸಂಘರ್ಷಗಳ ಕುರಿತು ಅಮೂಲಾಗ್ರವಾಗಿ ವಿಶ್ಲೇಷಿಸಿದರು. ಉಪನ್ಯಾಸದ ಬಳಿಕ ನೆರೆದಿದ್ದ ಸಾಹಿತ್ಯಾಸಕ್ತರ ನಡುವೆ ಕೃತಿಯ ಪಾತ್ರಗಳು ಮತ್ತು ಆಶಯಗಳ ಕುರಿತು ಪರ-ವಿರೋಧದ ಆರೋಗ್ಯಕರ ಚರ್ಚೆ ಹಾಗೂ ಸಂವಾದ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಬ್ರೀನ್ ಅವರು, ಹಾಡಿನ ಮೂಲಕವೇ ಗಂಡು-ಹೆಣ್ಣು ಎಂಬ ಲಿಂಗಭೇದದ ವಿರುದ್ಧ ಧ್ವನಿ ಎತ್ತಿ ಗಮನ ಸೆಳೆದರು. ‘ಅರಿವಿನ ಪಯಣ’ ಮಹಿಳಾ ತಂಡದ ನೇತೃತ್ವದಲ್ಲಿ ಪ್ರದರ್ಶನಗೊಂಡ ರೂಪಕ ಹಾಗೂ ಅರ್ಥಪೂರ್ಣ ಗೀತೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಹಿರಿಯೂರಿನ ಸಹ ಶಿಕ್ಷಕಿ ಸ್ವಪ್ನ ಆರ್.ಎ. ಸೇರಿದಂತೆ ಜಿಲ್ಲಾ ಲೇಖಕಿಯರ ಬಳಗದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now