Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನಕ ಜಯಂತಿ ವಿಶೇಷ: ‘ಶ್ರೀ.ಕೆ ಲಿಂಗಯ್ಯ’ ಅವರು ಕಂಡ ಕನಕದಾಸರು : ಅಧ್ಯಾತ್ಮ ಮತ್ತು ಮಾನವೀಯತೆಯ ಅಪೂರ್ವ ಸಂಗಮ

---Advertisement---

ಮಾಹಿತಿ : ಎಂ.ಎಲ್. ತಿಪ್ಪೇಸ್ವಾಮಿ,          ತುರುವನೂರು, ಚಿತ್ರದುರ್ಗ ತಾ.ಜಿ.                            ಮೊ : 9008166000

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 27 : ಕೆಲವರು ಕೇವಲ ಬದುಕನ್ನು ಕಳೆಯುತ್ತಾರೆ. ಇನ್ನೂ ಕೆಲವರು ತಮ್ಮ ಬದುಕಿನ ಆದರ್ಶಗಳ ಮೂಲಕವೇ ಇತರರಿಗೆ ಬೆಳಕಾಗುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವವೇ ಚಿತ್ರದುರ್ಗ ಜಿಲ್ಲೆಯ ತುರುವನೂರಿನ ಕವಿ, ಅಧ್ಯಾತ್ಮ ಸಾಧಕ ಹಾಗೂ ಆದರ್ಶ ಶಿಕ್ಷಕ ಶ್ರೀ ಕೆ. ಲಿಂಗಯ್ಯನವರು (ಶ್ರೀ ಲಿಂಗಾರ್ಯ). ಕನಕ ಜಯಂತಿಯ ಈ ಶುಭ ಸಂದರ್ಭದಲ್ಲಿ, ಲಿಂಗಯ್ಯನವರ ಬದುಕು, ಸಾಮಾಜಿಕ ಸುಧಾರಣೆ ಹಾಗೂ ಅವರು ರಚಿಸಿರುವ ‘ಶ್ರೀ ಕನಕದಾಸರ ಚರಿತ್ರೆ’ಯ ಅಂತರಂಗವನ್ನು ಸ್ಮರಿಸುವುದು ಅತ್ಯಂತ ಅರ್ಥಪೂರ್ಣವಾಗಿದೆ.

ಆದರ್ಶ ಶಿಕ್ಷಕ ಮತ್ತು ಸಾಮಾಜಿಕ ಕ್ರಾಂತಿಕಾರಿ

1905ರ ನವೆಂಬರ್ 6ರಂದು ತುರುವನೂರಿನಲ್ಲಿ ಜನಿಸಿದ ಕೆ. ಲಿಂಗಯ್ಯನವರು, ಕಿತ್ತು ತಿನ್ನುವ ಬಡತನ ಹಾಗೂ ಸಂಸಾರದ ಕಷ್ಟಗಳ ನಡುವೆಯೂ ವಿದ್ಯೆ ಮತ್ತು ಅಧ್ಯಾತ್ಮದ ಮೂಲಕ ಪುಟವಿಟ್ಟ ಬಂಗಾರದಂತೆ ಬೆಳೆದರು. 1920ರಲ್ಲಿ ಶಿಕ್ಷಕ ವೃತ್ತಿಗೆ ಪದಾರ್ಪಣೆ ಮಾಡಿದ ಅವರು, ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದರು. ಕೇವಲ ಅಕ್ಷರ ಕಲಿಸುವುದಷ್ಟೇ ಶಿಕ್ಷಣವಲ್ಲ, ಮನುಷ್ಯನೊಳಗಿನ ವಿವೇಕವನ್ನು ಎಚ್ಚರಿಸುವುದೇ ನಿಜವಾದ ಶಿಕ್ಷಣ ಎಂಬುದು ಅವರ ನಿಲುವಾಗಿತ್ತು. ಹಳ್ಳಿಯ ಬಡ ಮಕ್ಕಳನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು ವಿದ್ಯಾಭ್ಯಾಸ ನೀಡಿದ ಅವರ ಮಾನವೀಯತೆ ಅನನ್ಯ. ಅವರು ‘ಗೋವಿನಗೀತೆ’ ಪಾಠ ಮಾಡುವಾಗ ವಿದ್ಯಾರ್ಥಿಗಳ ಕಣ್ಣುಗಳು ಒದ್ದೆಯಾಗುತ್ತಿದ್ದವು. ಇವರ ಬೋಧನಾ ಶೈಲಿಗೆ ಮೆಚ್ಚಿದ ಅಂದಿನ ಜಿಲ್ಲಾ ಶಿಕ್ಷಣಾಧಿಕಾರಿಗಳು ವಿಶೇಷ ಬಡ್ತಿ ನೀಡಿ ಗೌರವಿಸಿದ್ದರು.

ಕೇವಲ ಅಧ್ಯಾತ್ಮ ಚಿಂತಕರಷ್ಟೇ ಆಗಿರದೆ, ಮೌಢ್ಯಗಳ ವಿರುದ್ಧವೂ ಲಿಂಗಯ್ಯನವರು ಸಿಡಿದೆದ್ದಿದ್ದರು. ತಮ್ಮ 14ನೇ ವಯಸ್ಸಿನಲ್ಲೇ ತುರುವನೂರಿನ ಮಾರಿಜಾತ್ರೆಯಲ್ಲಿ ನಡೆಯುತ್ತಿದ್ದ ಪ್ರಾಣಿಬಲಿಯನ್ನು ವಿರೋಧಿಸಿ, ಪುರಪ್ರಮುಖರ ಮನವೊಲಿಸಿ ಸಾತ್ವಿಕ ಸಿಹಿ ಭೋಜನದ ಮೂಲಕ ಜಾತ್ರೆ ಆಚರಿಸುವ ಕ್ರಾಂತಿಕಾರಿ ಹೆಜ್ಜೆ ಇಟ್ಟರು. ‘ಮಾರಿಜಾತ್ರೆ’ ಕೃತಿ ರಚಿಸಿ ಮೈಸೂರು ರಾಜ್ಯದ ಗಮನ ಸೆಳೆದರು.

ತತ್ವಪದಗಳ ಸಾಹಿತ್ಯ ಕೃಷಿ

ಶ್ರೀ ಶಾಂಕರ ಅದ್ವೈತ ಪರಂಪರೆಯ ಶ್ರೀ ನರಹರಿ ಸದ್ಗುರುಗಳ ಪರಮಶಿಷ್ಯರಾದ ಲಿಂಗಯ್ಯನವರು, ‘ಶ್ರೀ ನರಹರಿ’ ಅಂಕಿತನಾಮದಲ್ಲಿ ಸಾವಿರಾರು ತತ್ವಪದಗಳನ್ನು ರಚಿಸಿದ್ದಾರೆ. ಷಟ್ಪದಿ, ತ್ರಿಪದಿ, ಲಾವಣಿ, ಕಂದಪದ್ಯ, ನಾಟಕ, ಹರಿಕಥೆ ಸೇರಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ‘ಶ್ರೀ ಲಿಂಗಾರ್ಯ’ ಕಾವ್ಯನಾಮದಲ್ಲಿ ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇವರ ಸುಮಾರು 800 ತತ್ವಪದಗಳನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರವು ಜಂಟಿಯಾಗಿ ಎರಡು ಭಾಗಗಳಲ್ಲಿ ಪ್ರಕಟಿಸಿ ಗೌರವಿಸಿದೆ.

‘ಶ್ರೀ ಕನಕದಾಸರ ಚರಿತ್ರೆ’ಯ ಅಂತರಂಗ : 

ಲಿಂಗಾರ್ಯರ ಅಮೂಲ್ಯ ಕೃತಿಗಳಲ್ಲಿ ‘ಶ್ರೀ ಕನಕದಾಸರ ಚರಿತ್ರೆ’ ಅತ್ಯಂತ ವಿಶಿಷ್ಟವಾದುದು. ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿ, ಸರಳ ಗದ್ಯಾನುವಾದವನ್ನೂ ಹೊಂದಿರುವ ಈ ಕೃತಿಯು ಒಬ್ಬ ವೀರ ನಾಡಗೌಡನಾಗಿದ್ದ ತಿಮ್ಮಪ್ಪ ನಾಯಕನು, ಐಶ್ವರ್ಯ ಮತ್ತು ಅಧಿಕಾರವನ್ನು ತ್ಯಜಿಸಿ ಮಹಾನ್ ಸಂತ ಕನಕದಾಸರಾದ ಪರಿವರ್ತನೆಯ ಕಥೆಯನ್ನು ಮನೋಜ್ಞವಾಗಿ ಕಟ್ಟಿಕೊಡುತ್ತದೆ.

ಗುರು ವ್ಯಾಸರಾಯರು ಶಿಷ್ಯರಿಗೆ ಬಾಳೆಹಣ್ಣು ನೀಡಿ “ಯಾರೂ ನೋಡದ ಸ್ಥಳದಲ್ಲಿ ತಿಂದು ಬನ್ನಿ” ಎಂದಾಗ, “ದೇವರಿಲ್ಲದ ಸ್ಥಳವೇ ಇಲ್ಲ” ಎಂದು ಹಣ್ಣನ್ನು ಮರಳಿಸಿದ ಕನಕನ ನಿಷ್ಕಲ್ಮಶ ಭಕ್ತಿ, ಹಾಗೂ “ನಾನು ಹೋದರೆ ಮುಕ್ತಿಗೆ ಹೋದೇನು” ಎಂಬ ಮಾತಿನ ಹಿಂದಿರುವ ಅಹಂಕಾರ ತ್ಯಾಗದ ತತ್ವವನ್ನು ಲಿಂಗಯ್ಯನವರು ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಾರೆ. ಉಡುಪಿಯಲ್ಲಿ ಶ್ರೀಕೃಷ್ಣನು ಕನಕನ ಭಕ್ತಿಗೆ ಒಲಿದು ದರ್ಶನ ನೀಡಿದ ಪ್ರಸಂಗವೂ ಇಲ್ಲಿ ಸುಂದರವಾಗಿ ಮೂಡಿಬಂದಿದೆ.

ಮನುಷ್ಯನನ್ನು ಆತನ ಹುಟ್ಟು, ಕುಲ ಅಥವಾ ಸಂಪತ್ತಿನಿಂದ ಅಳೆಯದೆ, ಆತನ ಭಕ್ತಿ, ಜ್ಞಾನ ಮತ್ತು ಮಾನವೀಯತೆಯಿಂದ ಗುರುತಿಸಬೇಕು ಎಂಬುದೇ ಕನಕದಾಸರ ಬದುಕಿನ ಸಂದೇಶ. ಇದೇ ಸಂದೇಶವನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡಿದ್ದ ನಿಷ್ಕಾಮ ಕರ್ಮಯೋಗಿ ಶ್ರೀ ಕೆ. ಲಿಂಗಯ್ಯನವರ ‘ಶ್ರೀ ಕನಕದಾಸರ ಚರಿತ್ರೆ’, ಓದುಗರ ಅಂತರಂಗದ ಅಜ್ಞಾನವನ್ನು ಕಳೆದು ಅರಿವಿನ ಬೆಳಕನ್ನು ಚೆಲ್ಲುವ ಶಾಶ್ವತ ಕಾವ್ಯಕೃತಿಯಾಗಿದೆ.

ಮಾಹಿತಿ : ಎಂ.ಎಲ್. ತಿಪ್ಪೇಸ್ವಾಮಿ,          ತುರುವನೂರು, ಚಿತ್ರದುರ್ಗ ತಾ.ಜಿ. ಮೊ : 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now