ಬೆಂಗಳೂರು : ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಗಣಿ ಬಾಧಿತ ಪ್ರದೇಶಗಳ 10 ತಾಲ್ಲೂಕುಗಳಲ್ಲಿ 14 ವರ್ಷದ ಹೆಣ್ಣುಮಕ್ಕಳೊಂದಿಗೆ 15 ವರ್ಷ ವಯೋಮಾನದ ಹೆಣ್ಣುಮಕ್ಕಳಿಗೂ ಉಚಿತವಾಗಿ HPV ಲಸಿಕೆ ನೀಡಲು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಗಣಿಬಾಧಿತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ 20 ತಾಲ್ಲೂಕುಗಳಲ್ಲಿ 14 ವರ್ಷದ ಹೆಣ್ಣುಮಕ್ಕಳಿಗೆ HPV ಲಸಿಕೆ ನೀಡಲು ಸರ್ಕಾರ ನಿರ್ಧರಿಸಿತ್ತು. ಅದರ ಭಾಗವಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (KMERC) ₹4.54 ಕೋಟಿ ಅನುದಾನದಲ್ಲಿ 10 ತಾಲ್ಲೂಕುಗಳ 14 ವರ್ಷದ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲು 2025ರ ಜುಲೈನಲ್ಲಿ ಅನುಮೋದನೆ ನೀಡಲಾಗಿತ್ತು.
ಈ ನಡುವೆ ಕೇಂದ್ರ ಸರ್ಕಾರವು 2026ರ ಫೆಬ್ರವರಿ 28ರಿಂದ ದೇಶಾದ್ಯಂತ 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕಾಕರಣ ಅಭಿಯಾನವನ್ನು ಆರಂಭಿಸಿದೆ. ಲಸಿಕಾಕರಣದಲ್ಲಿ ಪುನರಾವರ್ತನೆಯಾಗುವುದನ್ನು ತಪ್ಪಿಸಲು ಮತ್ತು ಲಸಿಕೆಗಳ ಸದುಪಯೋಗಕ್ಕಾಗಿ, ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (NTAGI) ಶಿಫಾರಸಿನ ಮೇರೆಗೆ 15 ವರ್ಷ ವಯೋಮಾನದವರಿಗೂ ಈ ಲಸಿಕೆಯನ್ನು ವಿಸ್ತರಿಸಲು ರಾಜ್ಯ ತಾಂತ್ರಿಕ ಸಲಹಾ ಸಮಿತಿ (STAG) ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಯಾವೆಲ್ಲಾ ತಾಲ್ಲೂಕುಗಳಿಗೆ ಅನ್ವಯ?
ಈಗಾಗಲೇ KMERC ಅಡಿಯಲ್ಲಿ ಬಿಡುಗಡೆಯಾಗಿರುವ ₹4.54 ಕೋಟಿ ಅನುದಾನದಲ್ಲೇ ಈ ಕೆಳಗಿನ 4 ಜಿಲ್ಲೆಗಳ 10 ಗಣಿ ಬಾಧಿತ ತಾಲ್ಲೂಕುಗಳ 14 ಮತ್ತು 15 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗುವುದು.
ತುಮಕೂರು ಜಿಲ್ಲೆ: ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು
ಬಳ್ಳಾರಿ ಜಿಲ್ಲೆ: ಬಳ್ಳಾರಿ, ಸಂಡೂರು
ಚಿತ್ರದುರ್ಗ ಜಿಲ್ಲೆ: ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು
ವಿಜಯನಗರ ಜಿಲ್ಲೆ: ಹೊಸಪೇಟೆ
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಡಿ.ಎಂ. ಅವರು 2026ರ ನವೆಂಬರ್ 24ರಂದು ಅಧಿಕೃತ ಮಾರ್ಪಾಡು ಆದೇಶ ಹೊರಡಿಸಿದ್ದಾರೆ.











