ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಅರ್ಹ ಪುರುಷ ನೌಕರರಿಗೆ ನಿಗಮವು ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ನಿಗಮದ ಪುರುಷ ನೌಕರರು ತಮ್ಮ ಪತ್ನಿಯ ಹೆರಿಗೆಯ ಸಂದರ್ಭದಲ್ಲಿ 15 ದಿನಗಳ ಪಿತೃತ್ವ ರಜೆಯನ್ನು (Paternity Leave) ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಕೆ.ಬಿ. (ಭಾ.ಆ.ಸೇ) ಅವರು ನವೆಂಬರ್ 24, 2026 ರಂದು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ರಜೆ ಅವಧಿ: ಅರ್ಹ ಪುರುಷ ನೌಕರರಿಗೆ ಪತ್ನಿಯ ಹೆರಿಗೆಯ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಲಾಗುವುದು.
ನಿಯಮ ತಿದ್ದುಪಡಿ: ಕರಾರಸಾ ಸಂಸ್ಥೆಯ ನೌಕರರ ರಜಾ ನಿಯಮಗಳು 1964 ರ ನಿಯಮ 20 ರಡಿ ’20ಎ’ ಎಂದು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ.
ಅನುಮೋದನೆ: 2021ರ ಡಿಸೆಂಬರ್ 28ರಂದು ನಡೆದ ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿತ್ತು. ಇದಕ್ಕೆ ಸರ್ಕಾರವು 2026ರ ಅಕ್ಟೋಬರ್ 27ರಂದು ಅಧಿಕೃತ ಅನುಮೋದನೆ ನೀಡಿದೆ.
ತಕ್ಷಣದಿಂದ ಜಾರಿ: ಈ ನೂತನ ತಿದ್ದುಪಡಿ ಸುತ್ತೋಲೆಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಚೇರಿ ಸೂಚಿಸಿದೆ.
ಈ ನಿರ್ಧಾರದಿಂದ ಸಾರಿಗೆ ನಿಗಮದ ಸಾವಿರಾರು ಪುರುಷ ನೌಕರರಿಗೆ ತಮ್ಮ ಕುಟುಂಬದ ಪ್ರಮುಖ ಸಂದರ್ಭದಲ್ಲಿ ನೆರವಾಗಲು ಅನುಕೂಲವಾಗಲಿದೆ.










