ಸುದ್ದಿಒನ್, ಚಿತ್ರದುರ್ಗ, ನ. 23: ರಾಜಕಾರಣಿಯಾದವರು ಕೇವಲ ರಾಜಕೀಯ ಮಾಡುವುದಕ್ಕೆ ಸೀಮಿತವಾಗದೆ, ಕ್ಷೇತ್ರದ ಜನರ ಕ್ಷೇಮಾಭಿವೃದ್ಧಿ ಹಾಗೂ ಅವರ ಬದುಕಿನ ಸುಧಾರಣೆಯನ್ನು ಬಯಸುವ ಮನೋಭಾವ ಹೊಂದಿರಬೇಕು. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸುವವನೇ ನಿಜವಾದ ರಾಜಕಾರಣಿಯಾಗುತ್ತಾನೆ. ಈ ನಿಟ್ಟಿನಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ತಿಳಿಸಿದರು.
ತಾಲೂಕಿನ ಚೋಳಘಟ್ಟ ಮತ್ತು ಸಾಸಲುಹಟ್ಟಿ ಗ್ರಾಮಗಳಲ್ಲಿ ಸೋಮವಾರ 2025-26ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೇ ಕ್ಷೇತ್ರದ ಪ್ರಗತಿಯ ಪ್ರಮುಖ ಮಾನದಂಡವಾಗಿದೆ. ಹಳ್ಳಿಗಳಲ್ಲಿ ಉತ್ತಮ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ಗ್ರಾಮೀಣ ಭಾಗದ ಜನರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅವರ ಜೀವನಮಟ್ಟ ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಸಮಾನ ಆದ್ಯತೆ ನೀಡುವ ಉದ್ದೇಶದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ ಭೇದಭಾವವಿಲ್ಲದೆ ಅರ್ಹತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಜನಪರ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಅಭಿವೃದ್ಧಿ ಕಾರ್ಯಗಳ ಮೂಲಕ ಪ್ರತಿಫಲ ನೀಡುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳು ಕೇವಲ ಉದ್ಘಾಟನೆ ಮತ್ತು ಭೂಮಿಪೂಜೆಗೆ ಸೀಮಿತವಾಗದೆ, ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬAಧಪಟ್ಟ ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟದ ಬಗ್ಗೆ ವಿಶೇಷ ಗಮನಹರಿಸಬೇಕು. ಗ್ರಾಮಸ್ಥರು ಕೂಡ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಚೋಳಗಟ್ಟ ಗ್ರಾಮ ಪಂಚಾಯಿತಿ ಬಳಿರುವ ಸಿಸಿ ರಸ್ತೆ ಸುಮಾರು 40 ಲಕ್ಷ ವಚನದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಮತ್ತು ಸಾಸಲಹಟ್ಟಿ ಗ್ರಾಮದಿಂದ ಡಿಎಸ್ ಹಳ್ಳಿ ವರೆಗೆ 3 ಕೋಟಿ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಭೂಮಿ ಪೂಜೆ ಒಟ್ಟು 3 ಕೋಟಿ 90 ಲಕ್ಷ ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಫಾತಿಮಾ, ಪಿಡಬ್ಲ್ಯೂಡಿ ಎ.ಇ.ಇ ಲಾಲ್ ಸಾಬ್, ಎ.ಇ ಪವನ್, ಮಂಜುನಾಥ್, ಲ್ಯಾಂಡರ್ ಇಂಜಿನಿಯರ್ ಶರತ್, ಕೆಡಿಪಿ ಸದಸ್ಯರಾದ ಸಂತೋಷ್, ಚೋಳಘಟ್ಟ ಪಿಡಿಒ ವೀರೇಶ್, ಮಾಜಿ ಚೋಳಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರಪ್ಪ ಹಾಗೂ ಮುಖಂಡರಾದ ಕುರಿ ನಾಗರಾಜ್, ಕಾಂತರಾಜ್, ಮಾರುತಿ ಗೌಡ್ರು, ಹನುಮಂತ , ವೀರೇಶ್, ಸಂತೋಷ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.











