ನವದೆಹಲಿ: 2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರಾಠೀ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ದೆಹಲಿಯ ನ್ಯಾಯಾಲಯವು ಸೋಮವಾರ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.
‘ಐ ಸಪೋರ್ಟ್ ನರೇಂದ್ರ ಮೋದಿ’ (I Support Narendra Modi) ಫೇಸ್ಬುಕ್ ಪುಟದ ಸಂಸ್ಥಾಪಕ ವಿಕಾಸ್ ಪಾಂಡೆ (ವಿಕಾಸ್ ಸಂಕೃತ್ಯಾಯನ್) ಅವರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ದೆಹಲಿಯ ಸಾಕೇತ್ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅನಮ್ ರಯೀಸ್ ಖಾನ್ ಅವರು ಈ ಆದೇಶ ಹೊರಡಿಸಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಭಾರತದಿಂದ ತೆರಳಿರುವ ಧ್ರುವ್ ರಾಠೀ ಸದ್ಯ ಜರ್ಮನಿಯಲ್ಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಧ್ರುವ್ ರಾಠೀ ಅವರು “ಬಿಜೆಪಿ ಐಟಿ ಸೆಲ್ ಭಾಗ-2” (BJP IT Cell Part II) ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ತಮ್ಮ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಿಕಾಸ್ ಪಾಂಡೆ ದೂರಿನಲ್ಲಿ ಆರೋಪಿಸಿದ್ದಾರೆ. ಈ ವಿಡಿಯೋದಲ್ಲಿನ ಆರೋಪಗಳಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸುವ ಮುನ್ನ, ನ್ಯಾಯಾಲಯವು ರಾಠೀ ಅವರಿಗೆ ಸಮನ್ಸ್ ಹಾಗೂ ಎರಡು ಬಾರಿ ಜಾಮೀನು ಸಹಿತ ವಾರಂಟ್ಗಳನ್ನು ಜಾರಿ ಮಾಡಿತ್ತು. ಆದರೆ, ನ್ಯಾಯಾಲಯದ ಮುಂದೆ ಅವರ ಹಾಜರಾತಿ ಮತ್ತು ವಾರಂಟ್ಗಳ ಜಾರಿಗೆ ಸಂಬಂಧಿಸಿದ ತೊಡಕುಗಳ ಹಿನ್ನೆಲೆಯಲ್ಲಿ ನ್ಯಾಯಾಲಯವು ಇದೀಗ ಜಾಮೀನು ರಹಿತ ವಾರಂಟ್ ಆದೇಶ ನೀಡಿದೆ.









