ಬೆಂಗಳೂರು: ರಾಜ್ಯದ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಿ, ಮುಂದಿನ ಪೀಳಿಗೆಗೂ ಸುರಕ್ಷಿತವಾಗಿ ಲಭ್ಯವಾಗುವಂತೆ ಮಾಡುವ ‘ಭೂಸುರಕ್ಷಾ’ ಯೋಜನೆಗೆ ಹೆಚ್ಚಿನ ವೇಗ ನೀಡಲು ನಿರ್ಧರಿಸಲಾಗಿದೆ. ಯೋಜನೆಯಡಿ ಬಾಕಿ ಉಳಿದಿರುವ 31.92 ಕೋಟಿ ಪುಟಗಳ ಭೂ ದಾಖಲೆಗಳ ಡಿಜಿಟಲೀಕರಣವನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಯೋಜನೆಯಡಿ ಒಟ್ಟು 136.26 ಕೋಟಿ ಪುಟಗಳ ಭೂ ದಾಖಲೆಗಳಿದ್ದು, ಈವರೆಗೆ 104.33 ಕೋಟಿ ಪುಟಗಳನ್ನು ಯಶಸ್ವಿಯಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಪರಮೇಶ್ವರ್, “ಭೂ ದಾಖಲೆಗಳು ರೈತರು ಮತ್ತು ಭೂಮಾಲೀಕರ ಪಾಲಿಗೆ ಅತ್ಯಂತ ಮಹತ್ವದ ಆಸ್ತಿಯಾಗಿವೆ. ಹಳೆಯ ಮೂಲ ದಾಖಲೆಗಳು ಹಾಳಾಗದಂತೆ ಸಂರಕ್ಷಿಸುವುದು, ಅಗತ್ಯವಿದ್ದಾಗ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಹಾಗೂ ದಾಖಲೆಗಳ ಸುರಕ್ಷತೆಯನ್ನು ಖಾತರಿಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದ್ದಾರೆ.
ಈ ಮಹತ್ವದ ಕಾರ್ಯದಲ್ಲಿ ಯಾವುದೇ ವಿಳಂಬವಾಗದಂತೆ ಅಧಿಕಾರಿಗಳು ನಿಗದಿತ ಗುರಿಯಂತೆ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿರುವ ಅವರು, ನಿಗದಿತ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಕಂದಾಯ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹಿರಿಯ ಅಧಿಕಾರಿಗಳು ನಿರಂತರವಾಗಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಿದ್ದು, ತಾವೂ ಖುದ್ದಾಗಿ ಈ ಕಾರ್ಯದ ಮೇಲೆ ನಿಗಾ ವಹಿಸುವುದಾಗಿ ಹೇಳಿದ್ದಾರೆ. ತಂತ್ರಜ್ಞಾನದ ನೆರವಿನೊಂದಿಗೆ ಭೂ ದಾಖಲೆಗಳ ಸಂರಕ್ಷಣೆ ಹಾಗೂ ಕಂದಾಯ ಸೇವೆಗಳನ್ನು ಇನ್ನಷ್ಟು ಸುಲಭಗೊಳಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.










