ಬೆಂಗಳೂರು : ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಯ ಇ-ಸ್ವತ್ತು ದಾಖಲೆಗಳನ್ನು ಸುಲಭವಾಗಿ, ಪಾರದರ್ಶಕವಾಗಿ ಮತ್ತು ಡಿಜಿಟಲ್ ರೂಪದಲ್ಲಿ ಪಡೆಯಲು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಅವಕಾಶ ಕಲ್ಪಿಸಿದೆ. ಭೂ ಗ್ಯಾರಂಟಿ ಯೋಜನೆಯಡಿ ನಡೆಯುತ್ತಿರುವ ಈ ಇ-ಸ್ವತ್ತು ಅಭಿಯಾನದಲ್ಲಿ ಆಸ್ತಿ ಮಾಲೀಕರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಆಸ್ತಿಗಳಿಗೆ ‘ನಮೂನೆ 11ಎ’ ಪಡೆದುಕೊಳ್ಳುವಂತೆ ಇಲಾಖೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
ನಮೂನೆ 11ಎ ಅಡಿ ಆಸ್ತಿಗಳ ವರ್ಗೀಕರಣದಂತೆ, ಗ್ರಾಮಠಾಣಾ ವ್ಯಾಪ್ತಿಯಲ್ಲಿ ನೋಂದಾಯಿತ ದಾಖಲೆಗಳು ಲಭ್ಯವಿರುವ ನಿವೇಶನಗಳು ಹಾಗೂ ಕಟ್ಟಡಗಳ ಮಾಲೀಕರು ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ:

ದಿಶಾಂಕ್ / ತಹಶೀಲ್ದಾರರ ಗ್ರಾಮ ಠಾಣಾ ನಕ್ಷೆ: ಈ ದಾಖಲೆಯನ್ನು ಒದಗಿಸುವುದು ಕಡ್ಡಾಯವಾಗಿದೆ.
ಮಾಲೀಕತ್ವದ ದಾಖಲೆಗಳು (ಕಡ್ಡಾಯ): ಸೇಲ್ ಡೀಡ್, ಪಿತ್ರಾರ್ಜಿತ ಆಸ್ತಿ ದಾಖಲೆ, ಆಸ್ತಿ ವಿಭಜನೆ, ಗಿಫ್ಟ್ ಡೀಡ್, ವಿಲ್, ಹಕ್ಕುಪತ್ರ, ರಿಲೀಜ್ ಡೀಡ್, ವರ್ಗಾವಣೆ, ಸೆಟ್ಲಮೆಂಟ್, ನ್ಯಾಯಾಲಯದ ಆದೇಶ, ಒಟ್ಟುಗೂಡಿಸು, ವಿಭಾಗ ಪತ್ರ ಅಥವಾ ಅದಲು ಬದಲು ಪತ್ರಗಳಲ್ಲಿ ಸಂಬಂಧಪಟ್ಟ ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಋಣಭಾರ ಪ್ರಮಾಣ ಪತ್ರ: ಈ ದಾಖಲೆಯನ್ನು ಸಲ್ಲಿಸುವುದು ಐಚ್ಛಿಕವಾಗಿರುತ್ತದೆ.
ಇತರೆ ಕಡ್ಡಾಯ ವಿವರಗಳು ಮತ್ತು ಸಹಾಯವಾಣಿ
ಇ-ಸ್ವತ್ತು ಅರ್ಜಿ ಸಲ್ಲಿಸುವ ವೇಳೆ ಆಸ್ತಿ ಮಾಲೀಕರ ಆಧಾರ್ ಕಾರ್ಡ್, ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಜಿಪಿಎಸ್ (GPS) ಆಧಾರಿತ ಸ್ವತ್ತಿನ ಛಾಯಾಚಿತ್ರವನ್ನು ನೀಡುವುದು ಕಡ್ಡಾಯವಾಗಿದೆ. ಅರ್ಜಿದಾರರು ಇಲಾಖೆಯ ಪ್ರಕಟಣೆಯಲ್ಲಿರುವ ಕ್ಯೂ ಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಕುರಿತು ಹೆಚ್ಚಿನ ಮಾಹಿತಿ ಅಥವಾ ಮಾರ್ಗದರ್ಶನಕ್ಕಾಗಿ ಸಾರ್ವಜನಿಕರು ಇ-ಸ್ವತ್ತು ಸಹಾಯವಾಣಿ ಸಂಖ್ಯೆ 9483476000 ಅನ್ನು ಸಂಪರ್ಕಿಸಬಹುದು.










