ಬೆಂಗಳೂರು : ಗ್ರಾಮೀಣ ಭಾಗದ ಜನರ ದಶಕಗಳ ಕನಸಾದ ಆಸ್ತಿ ಹಕ್ಕುಪತ್ರ ವಿತರಣೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ‘ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನ’ಕ್ಕೆ ಚಾಲನೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ, ಇದನ್ನು ಸರ್ಕಾರದ 6ನೇ ಗ್ಯಾರಂಟಿ ಎಂದು ಹೇಳಿದ್ದಾರೆ.
ಚುನಾವಣಾ ಪೂರ್ವದ 5 ಗ್ಯಾರಂಟಿಗಳ ಯಶಸ್ವಿ ಜಾರಿಯ ಬೆನ್ನಲ್ಲೇ, ಇದೀಗ ಡಿಸೆಂಬರ್ 31ರೊಳಗೆ 80 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ವಿತರಿಸುವ ಗುರಿ ಹೊಂದಲಾಗಿದೆ.
ನಿಯಮಗಳ ಸರಳೀಕರಣ ಮತ್ತು ಕಂದಾಯ ಭೂಮಿಗೂ ಅನ್ವಯ
ರಾಜ್ಯದ ಶೇ.61ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಇ-ಸ್ವತ್ತು ಪಡೆಯುವಲ್ಲಿ ಎದುರಾಗುತ್ತಿದ್ದ ವಿಳಂಬವನ್ನು ತಪ್ಪಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಬೆಂಗಳೂರು ನಗರ, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒಗಳನ್ನು ಒಳಗೊಂಡ ಪಂಚ ಸದಸ್ಯರ ಸಮಿತಿಯ ಶಿಫಾರಸಿನಂತೆ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025’ಕ್ಕೆ ತಿದ್ದುಪಡಿ ಮಾಡಲಾಗಿದೆ.
ರಾಜ್ಯದಲ್ಲಿರುವ ಸುಮಾರು 1,50,69,090 ಗ್ರಾಮೀಣ ಆಸ್ತಿಗಳ ಪೈಕಿ ಈಗಾಗಲೇ 42,92,484 ಆಸ್ತಿಗಳಿಗೆ ನಮೂನೆ 11 ಹಾಗೂ 10,16,730 ಸ್ವತ್ತುಗಳಿಗೆ ನಮೂನೆ ಬಿ ವಿತರಿಸಲಾಗಿದೆ. ಬಾಕಿ ಉಳಿದಿರುವ 97,59,867 ಆಸ್ತಿಗಳ ಪೈಕಿ ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿಲ್ಲದ ಸ್ವತ್ತುಗಳಿಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗುತ್ತಿದೆ. ಇದರೊಂದಿಗೆ ಕಂದಾಯ ಭೂಮಿಯಲ್ಲಿ ಭೂಪರಿವರ್ತನೆಯಾಗಿರುವ ಮತ್ತು ಬಿ-ಖರಾಬು ಇಲ್ಲದ ಸರ್ವೆ ನಂಬರ್ ಸ್ವತ್ತುಗಳಿಗೂ ಇ-ಸ್ವತ್ತು ಲಭ್ಯವಾಗಲಿದ್ದು, ಭೂಪರಿವರ್ತನೆಯಾಗದ ಜಮೀನುಗಳಲ್ಲಿನ ಮನೆಗಳಿಗೂ ಕೆಲವೇ ತಿಂಗಳಲ್ಲಿ ನಿಯಮ ಮಾರ್ಪಾಡು ಮಾಡಿ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ತಲೆಮಾರುಗಳಿಂದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು, ಪ್ರವಾಹ, ಮಳೆ, ಬೆಂಕಿ ಅನಾಹುತ ಅಥವಾ ಗೆದ್ದಲು ಹಿಡಿದು ಆಸ್ತಿ ದಾಖಲೆಗಳನ್ನು ಕಳೆದುಕೊಂಡಿರುವವರಿಗೆ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಅಂತಹವರು ಏಪ್ರಿಲ್ 7, 2025ರ ಪೂರ್ವದ ವಿದ್ಯುತ್ ಬಿಲ್ ಸಲ್ಲಿಸಿದರೆ, ಅಧಿಕಾರಿಗಳು ಸ್ಥಳ ಮಹಜರು ನಡೆಸಿ, ಆಕ್ಷೇಪಣೆ ಸಲ್ಲಿಸಲು 21 ದಿನಗಳ ಕಾಲಾವಕಾಶ ನೀಡಿ ನಂತರ ಇ-ಸ್ವತ್ತು ವಿತರಿಸಲಿದ್ದಾರೆ. ಇನ್ನು ಮಲೆನಾಡು ಭಾಗದ ವಿಶಿಷ್ಟ ವಾಸಸ್ಥಳಗಳಾದ ಕಣಮನೆ ಮತ್ತು ಮನೆದಳ ಆಸ್ತಿಗಳಿಗೂ ಇ-ಸ್ವತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಜಮೀನಿನಲ್ಲಿ ವಾಸಕ್ಕಾಗಿ ಅಥವಾ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿಕೊಂಡಿರುವ 4,000 ಚದರ ಅಡಿಯವರೆಗಿನ ಕಟ್ಟಡಗಳಿಗೆ ನೋಂದಾಯಿತ ದಾಖಲೆಗಳಿಲ್ಲದಿದ್ದರೂ ನಿಯಮಾನುಸಾರ ಇ-ಸ್ವತ್ತು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
ಶೀಘ್ರದಲ್ಲೇ ‘ಇ-ಸ್ವತ್ತು 3.0’ ಮತ್ತು ಪ್ರತ್ಯೇಕ ಮೋಜಣಿ ವಿಭಾಗ
ಸದ್ಯ ಚಾಲ್ತಿಯಲ್ಲಿರುವ ಇ-ಸ್ವತ್ತು 2.0 ತಂತ್ರಾಂಶವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿ ‘ಇ-ಸ್ವತ್ತು 3.0’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹೊಸ ತಂತ್ರಾಂಶವು ಕಂದಾಯ ಇಲಾಖೆಯ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯಲಿದ್ದು, ಸರ್ಕಾರಿ ಆಸ್ತಿ ಹಾಗೂ ಬಿ-ಖರಾಬು ಭೂಮಿಗೆ ಅಕ್ರಮವಾಗಿ ಇ-ಸ್ವತ್ತು ನೀಡುವುದನ್ನು ಸಂಪೂರ್ಣವಾಗಿ ತಡೆಯಲಿದೆ. ಇದರೊಂದಿಗೆ ಗ್ರಾಮೀಣ ಜಮೀನುಗಳ ಅಳತೆ ಸಮಸ್ಯೆಯನ್ನು ಬಗೆಹರಿಸಲು ಇಲಾಖೆಯಲ್ಲೇ ಪ್ರತ್ಯೇಕ ಮೋಜಣಿ ವಿಭಾಗ ಆರಂಭಿಸಲು ಹಾಗೂ ಸಿಬ್ಬಂದಿಗೆ ತರಬೇತಿ ನೀಡಿ ರೋವರ್ಗಳ ಮೂಲಕ ಸರ್ವೆ ನಡೆಸಲು ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಖಂಡ್ರೆ ತಿಳಿಸಿದ್ದಾರೆ.
ಗ್ರಾಮೀಣ ನಾಗರಿಕರಿಗೆ ಸುರಕ್ಷಿತ, ನಿಖರ ಹಾಗೂ ಡಿಜಿಟಲೀಕರಿಸಿದ ಆಸ್ತಿ ದಾಖಲೆಗಳನ್ನು ಒದಗಿಸುವ ಈ ಅಭಿಯಾನದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಎದುರಾದರೆ ಸಹಾಯವಾಣಿ ಸಂಖ್ಯೆ 9483476000 ಅನ್ನು ಸಂಪರ್ಕಿಸಬಹುದು. ಸರ್ಕಾರಿ ಆಸ್ತಿಯ ಸಂರಕ್ಷಣೆಯ ಜವಾಬ್ದಾರಿಯೊಂದಿಗೆ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕತೆ, ದಕ್ಷತೆ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.











