ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ನವೆಂಬರ್ 16 ನೇ ಸೋಮವಾರದಂದು ನೂತನವಾಗಿ ನಿರ್ಮಿಸಿರುವ ಗೃಹ ಪ್ರವೇಶ ವೇಳೆ ತುರುವನೂರು ಮಂಜುನಾಥ ಅವರ ಎರಡು ಕೃತಿಗಳಾದ ಗೌರಮ್ಮ ಕಿರುಕಾದಂಬರಿ ಹಾಗೂ ತುರುವನೂರು ಒಂದು ಸಾಂಸ್ಕೃತಿಕ ಅಧ್ಯಯನ ಕೃತಿಗಳನ್ನು ಪತ್ರಕರ್ತ ಹಾಗೂ ರೈತ ಚಳವಳಿ ಹೋರಾಟಗಾರ ಲಕ್ಷ್ಮಣ ಹೂಗಾರ್ ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಐದು ದಶಕಗಳ ಹೋರಾಟದ ಫಲವಾಗಿ ಚಿತ್ರದುರ್ಗದ ಭಾಗದ ಕೆಲ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ,ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ಜಿಲ್ಲೆಗೆ ಸಂಪೂರ್ಣ ನೀರು ಹರಿಯುವವರೆಗೂ ಹೋರಾಟ ನಿರಂತರವಾಗಿರಿತ್ತದೆ ಎಂದು ಅವರು ಹೇಳಿದರು.
ಮಂಜುನಾಥ ಅವರು ಈಗ ಬೆಂಗಳೂರು ತೊರೆದು ತಮ್ಮ ಊರಲ್ಲೆ ನೆಲೆಸುತ್ತಿದ್ದು ಸಾಹಿತ್ಯ, ಪತ್ರಿಕೋದ್ಯಮ ಜೊತೆಗೆ ಕೃಷಿಯಲ್ಲಿ ತೊಡಗಿದ್ದು, ಇನ್ನೂ ಮುಂದೆ ಅವರು ರೈತರ ಸಮಸ್ಯೆಗಳಿಗೂ ಧ್ವನಿಯಾಗಬೇಕು ಎಂದರು.
ತಮ್ಮ ಊರಿನ ಋಣತೀರಿಸಲು ತುರುವನೂರು ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಊರಿನ ಇತಿಹಾಸ , ಇಲ್ಲಿನ ಆಚರಣೆ ಕುರಿತು ಸಮಗ್ರವಾಗಿ ಚಿತ್ರಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಎರಡು ಕೃತಿಗಳನ್ನು ಕುರಿತು ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾದ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವೈ ಸೋಮಶೇಖರ್ ತುರುವನೂರು ಇತಿಹಾಸವನ್ನು ಮಂಜುನಾಥ ಅವರು ಸಮಗ್ರವಾಗಿ ಪರಿಚಯಿಸಿದ್ದು,ಇಲ್ಲಿನ ಆಚರಣೆ, ದೇವಸ್ಥಾನಗಳು,ಅಕ್ಷರ ಸಾಧಕರು,ಶಿಕ್ಷಕರ ಸಾಧನೆಗಳು ಕುರಿತಂತೆ ತುಂಬಾ ವಿಭಿನ್ನವಾಗಿ ಚಿತ್ರಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ತುರುವನೂರು ಈಚಲ ಮರ ಚಳವಳಿ ಕುರಿತಂತೆ ಅಲ್ಲದೆ ಆ ಸಂದರ್ಭದ ವಿಶೇಷಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪರಿಚಯಿಸಿದ್ದಾರೆ ಎಂದರು.
ಗೌರಮ್ಮ ಕಿರು ಕಾದಂಬರಿ ರಾಜಕಾರಣಿ ದಿವಂಗತ ಎನ್ ತಿಪ್ಪಣ್ಣ ಅವರ ಧರ್ಮಪತ್ನಿ ಗೌರಮ್ಮ ಅವಿಭಕ್ತ ಕುಟುಂಭವನ್ನು ನಿರ್ವಹಿಸಿದ ಬಗ್ಗೆ ತಮ್ಮ ಕಾದಂಬರಿಯಲ್ಲಿ ವಿಶಿಷ್ಟ ವಾಗಿ ಚಿತ್ರಿಸಿದ್ದಾರೆ ಎಂದರು..
ನೂತನ ಗೃಹಪ್ರವೇಶದ ಈ ಸಂದರ್ಭದಲ್ಲಿ ಕೃತಿಗಳ ಲೋಕಾರ್ಪಣೆ ವಿಶೇಷ ಗಮನಸೆಳೆದಿದ್ದು ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಲಿಂಗಾಯತ ಸಂಘಟನೆಯ ಮಹಡಿ ಶಿವಮೂರ್ತಿ, ಕೃತಿಕಾರ ತುರುವನೂರು ಮಂಜುನಾಥ ಮತ್ತು ಸರ್ವಮಂಗಳ ಮಂಜುನಾಥ ಪಾಲ್ಗೊಂಡಿದ್ದರು.












