Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿಭಾಷಾ ಮಾಧ್ಯಮ ಜಾರಿ : ಸಚಿವ ಎಸ್. ಮಧು ಬಂಗಾರಪ್ಪ

---Advertisement---

ಶಿವಮೊಗ್ಗ : ಸರ್ಕಾರಿ ಶಾಲೆಗಳ ಬಲವರ್ಧನೆ ಮತ್ತು ಖಾಸಗಿ ಶಾಲೆಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಆಂಗ್ಲ (ಇಂಗ್ಲಿಷ್) ಮಾಧ್ಯಮವನ್ನು ಒಳಗೊಂಡ ‘ದ್ವಿಭಾಷಾ ಮಾಧ್ಯಮವನ್ನು (ಬೈಲಿಂಗ್ವಲ್ ಮೀಡಿಯಂ) ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಮಂಗಳವಾರ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಸುಧಾರಣೆಗಳು ಹಾಗೂ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಮತ್ತು ಭೂಹಕ್ಕು ಸಮಸ್ಯೆಗಳ ಕುರಿತು ವಿವರಿಸಿದರು.

ಕೆಪಿಎಸ್ ಶಾಲೆಗಳ ಉನ್ನತೀಕರಣ ಮತ್ತು ಉಚಿತ ಬಸ್ ವ್ಯವಸ್ಥೆ: ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣಕ್ಕಾಗಿ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಅಭಿವೃದ್ಧಿ ಮಂಡಳಿಗಳು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ತನ್ನದೇ ಬಜೆಟ್ ಮೂಲಕ ಬೃಹತ್ ಅನುದಾನವನ್ನು ಕ್ರೋಢೀಕರಿಸುತ್ತಿದ್ದು, ಎಡಿಬಿ ರೂ.2500 ಕೋಟಿ ನೀಡಲಿದೆ. ಸರ್ಕಾರ ಪ್ರತಿ ಶಾಲೆಗೆ ಸರಾಸರಿ ರೂ.2 ರಿಂದ 4 ಕೋಟಿ ವೆಚ್ಚ ಮಾಡಲಿದೆ.

ಕರ್ನಾಟಕ ಪಬ್ಲಿಕ್ ಶಾಲೆಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸಲಿಸಬೇಕೆಂಬ ಆಸೆ ಮತ್ತು ವಿಶ್ವಾಸವಿದೆ. ಕೆಪಿಎಸ್ ಶಾಲೆಗಳಲ್ಲಿ ಸುಸಜ್ಜಿತ ಕಟ್ಟಡಗಳು, ಸ್ಮಾರ್ಟ್ ಕ್ಲಾಸ್‌ಗಳು, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು, ಗ್ರಂಥಾಲಯ, ಶುದ್ಧ ಕುಡಿಯುವ ನೀರು ಹಾಗೂ ಉತ್ತಮ ಶೌಚಾಲಯದ ವ್ಯವಸ್ಥೆ ಇರಲಿದೆ.

ಅಲ್ಲದೆ, ಮುಂಬರುವ ಜೂನ್ ಮಾಹೆಯಿಂದ ರಾಜ್ಯದ ಎಲ್ಲಾ 1,600 ಕೆಪಿಎಸ್ ಶಾಲೆಗಳ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಬಸ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು.

ಇದೇ ವೇಳೆ, ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಸಿಇಟಿ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಶರಾವತಿ ಸಂತ್ರಸ್ತರು ಮತ್ತು ಬಗರ್‌ಹುಕುಂ ಸಾಗುವಳಿದಾರರ ಪರ ಹೋರಾಟ:

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದ್ದು, ಇನ್ನು 10 ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಅಧಿಕೃತ ವರದಿ ಸಲ್ಲಿಸಲಾಗುವುದು. ಅರಣ್ಯ ಹಕ್ಕು ಕಾಯ್ದೆಯಡಿ (ಎಫ್ ಆರ್ ಎ) ಅರಣ್ಯ ಜಮೀನನ್ನು ಸಾಮಾನ್ಯ ವರ್ಗದವರು 75 ವರ್ಷ ಹಾಗೂ ಪರಿಶಿಷ್ಟ ಪಂಗಡದವರು 5 ವರ್ಷ ಉಳುಮೆ ಮಾಡಿರಬೇಕು ಎಂಬ ನಿಯಮವಿದೆ; ಆದರೆ  ಇದುವರೆಗೆ ಯಾರಿಗೂ ಹಕ್ಕುಪತ್ರ ನೀಡಲಾಗಿಲ್ಲ. ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಸರ್ವೆ ನಡೆಸಿ, ಗ್ರಾಮ ಸಭೆಗಳನ್ನು ಮಾಡಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಶಿವಮೊಗ್ಗ, ಕಾರವಾರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಈ ಸಮಸ್ಯೆಯಿದೆ.

ಹಿಂದಿನ ಸರ್ಕಾರ ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳನ್ನು ತಿರಸ್ಕರಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮರುಸರ್ವೆ ನಡೆಸಿ ಅರ್ಹ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಭರವಸೆ ನೀಡಿದರು.

ವಿಮಾನ ನಿಲ್ದಾಣ ಅಭಿವೃದ್ಧಿ:

ಶಿವಮೊಗ್ಗ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ರಾಜ್ಯ ಸರ್ಕಾರ ರೂ.23 ಕೋಟಿ ವೆಚ್ಚ ಮಾಡುತ್ತಿದ್ದು, ಈಗಾಗಲೇ ಶೇ. 90ರಷ್ಟು ಕೆಲಸ ಪೂರ್ಣಗೊಂಡಿದೆ. ಉಡಾನ್ ಯೋಜನೆಯಡಿ ಹೆಚ್ಚಿನ ವಿಮಾನಗಳ ಹಾರಾಟಕ್ಕೆ ಹಾಗೂ ಏವಿಯೇಷನ್ ತರಬೇತಿ ಕೇಂದ್ರವನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ  ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್, ಸೂಡಾ ಅಧ್ಯಕ್ಷ ಮಧುಸೂದನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಸಧ್ಯಕ್ಷ ಎಸ್.ಟಿ. ಹಾಲಪ್ಪ, ಮುಖಂಡರಾದ ಯೋಗೀಶ್, ವಸಂತಕುಮಾರ್, ದೇವರಾಜ್, ಕಲಗೋಡು ರತ್ನಾಕರ್, ದೇವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now