ದಾವಣಗೆರೆ : ಎಚ್ಐವಿ ಸೋಂಕು ತಡೆಗಟ್ಟಲು ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಮತ್ತು ಆರೋಗ್ಯ ತಪಾಸಣಾಗಳನ್ನು ಕೈಗೊಂಡು ವರದಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ವಸತಿ ನಿಲಯಗಳು ಮತ್ತು ಎಸ್ಎಸ್ಎಂ ಹಾಗೂ ಹೈ-ರಿಸ್ಕ್ ಗುಂಪುಗಳಿಗೆ ಸಮಗ್ರ ಆರೋಗ್ಯ ತಪಾಸಣೆ ಮತ್ತು ಕೌನ್ಸಿಲಿಂಗ್ ನಡೆಸಲು ಕ್ರಮ ಕೈಗೊಳ್ಳಬೇಕು ಮತ್ತು ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ಸಂಪೂರ್ಣವಾಗಿ ತಡೆಯಲು ಕ್ರಮವಹಿಸುವಂತೆ ತಿಳಿಸಿದರು.
ಆರೋಗ್ಯ ಇಲಾಖೆಯ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣಾಧಿಕಾರಿ ಡಾ.ಮುರಳೀಧರ್ ಅವರು ಮಾತನಾಡಿ, 95-95-99 ಮಾದರಿಯಲ್ಲಿ ಅಂದರೆ ಮೊದಲ 95 ಶೇಕಡಾ 95ರಷ್ಟು ಎಚ್ಐವಿ ಸೋಂಕಿತರನ್ನು ಗುರುತಿಸುವುದು. ಎರಡನೇ 95 ಗುರುತಿಸಲ್ಪಟ್ಟ ಸೋಂಕಿತರಿಗೆ ತಕ್ಷಣವೇ ಕಡ್ಡಾಯ ಚಿಕಿತ್ಸೆ (ART) ಆರಂಭಿಸುವುದು. ಮೂರನೇ 99 ಚಿಕಿತ್ಸೆ ಪಡೆಯುತ್ತಿರುವವರಲ್ಲಿ ವೈರಲ್ ಲೋಡ್ (Viral Load) ದಮನಗೊಂಡು ಸೋಂಕು ಹರಡದಂತೆ ತಡೆಯುವಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಜಿಲ್ಲೆಯಲ್ಲಿ ಹೆಚ್.ಐ.ವಿ ಸೋಂಕಿನ ಪ್ರಮಾಣ 0.35 ಇದೆ , 2026 ರ ಜನವರಿ ಮಾಹೆಯಿಂದ ಇಲ್ಲಿಯವರಿಗೆ 166 ಪ್ರಕರಣಗಳು ಪತ್ತೆ ಹಚ್ಚಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಮಾತನಾಡಿ ಜಿಲ್ಲೆಯಲ್ಲಿ ಅನಧಿಕೃತ ರಕ್ತದಾನ ಕೇಂದ್ರಗಳನ್ನು ಕೂಡಲೇ ಮುಚ್ಚಿ ಕಾನೂನು ಕ್ರಮವಹಿಸಿ, ಬೆಸ್ಕಾಂ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ನೌಕರರು ಹಾಗೂ ಜಿಎಂಐಟಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲಿದ್ದಾರೆ ಆದುದರಿಂದ ಕೂಡಲೇ ರಕ್ತದಾನ ಶಿಬಿರವನ್ನು ಏರ್ಪಡಿಸಲು ಕ್ರಮವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಾ.ಶಶಧರ್ ಅವರು ಮಾತನಾಡಿ, ಮಕ್ಕಳು ಹದಿಹರೆಯದಲ್ಲೇ ತಂಬಾಕು ಸೇವನೆ ಮಾಡುವ ಪ್ರಮಾಣ ಹೆಚ್ಚಾಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ತಂಬಾಕು ಒಂದು ಪ್ರಮುಖ ಸಾವಿಗೆ ಕಾರಣವಾಗಿದೆ. ತಂಬಾಕು ಮುಕ್ತ ಯುವ ಅಭಿಯಾನದಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಲು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ವಿಶೇಷ ಅಭಿಯಾನಗಳನ್ನು ನಡೆಸಬೇಕು ಎಂದು ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಮಾತನಾಡಿ ಜಿಲ್ಲೆಯ ಪ್ರತಿ ಶಾಲಾ ಕಾಲೇಜುಗಳ ಬಳಿ ಇರುವ ತಂಬಾಕು ಮಾರಾಟ ಮಳಿಗೆಗಳನ್ನು ಪರಿಶೀಲಿಸಿ ದಂಡ ವಿಧಿಸಲು ಶಿಕ್ಷಣ ಇಲಾಖೆ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಜಂಟಿ ಕಾರ್ಯನಿರ್ಹಿಸಲು ಕ್ರಮವಹಿಸಿ, ಶಾಲಾ ಕಾಲೇಜುಗಳ ಬಳಿ ತಂಬಾಕು ಮುಕ್ತ ಶಾಲಾ ಕಾಲೇಜು ಎಂದು ನಾಮಫಲಕ ಅಳವಡಿಸಲು ಕ್ರಮವಹಿಸಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲು ಸೂಚನೆ ನೀಡಿದರು.
ಕ್ಷಯರೋಗ ಮಾತ್ರೆಗಳನ್ನು ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಮೆಡಿಕಲ್ ಸ್ಟೋರ್ಸ್ ನಲ್ಲಿ ಮಾರಾಟ ಮಾಡಿದ ವಿವರಗಳನ್ನು ನಿಕ್ಷಯ್ ಆನ್ ಲೈನ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಔಷದಿ ನಿಯಂತ್ರಕರು ಈ ಕುರಿತು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷಯರೋಗ ತಡೆಗಟ್ಟುವ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.













