ಬೆಂಗಳೂರು : ಪ್ರಸ್ತುತ ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಸುರಕ್ಷತೆ ಮತ್ತು ಜವಾಬ್ದಾರಿಯುತ ಡಿಜಿಟಲ್ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಅನ್ವಯ ಶಿಕ್ಷಣದಲ್ಲಿ ತಂತ್ರಜ್ಞಾನದ ಸಮನ್ವಯ ಹಾಗೂ ಡಿಜಿಟಲ್ ಸಾಕ್ಷರತೆಗೆ ಒತ್ತು ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಆನ್ಲೈನ್ ಗೌಪ್ಯತೆ, ಸೈಬರ್ ಬೆದರಿಕೆಗಳು ಮತ್ತು ಡಿಜಿಟಲ್ ವೇದಿಕೆಗಳ ಸುರಕ್ಷಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಮಗ್ರ ಶಿಕ್ಷಣ ಕರ್ನಾಟಕ ಸೂಚಿಸಿದೆ.
ಎನ್ಸಿಇಆರ್ಟಿಯಿಂದ ಪ್ರತಿ ತಿಂಗಳು ನೇರ ಪ್ರಸಾರ
ಸೈಬರ್ ಸುರಕ್ಷತೆ ಮತ್ತು ಭದ್ರತೆಯ ಕುರಿತು ಉದ್ಭವಿಸುತ್ತಿರುವ ಹೊಸ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಎನ್ಸಿಇಆರ್ಟಿ (NCERT) ವತಿಯಿಂದ ಪ್ರತಿ ತಿಂಗಳು “ಸೈಬರ್ ಜಾಗೃತಿ ದಿವಸ್” ಅಂಗವಾಗಿ “ಸೈಬರ್ ಸುರಕ್ಷತೆ ಮತ್ತು ಭದ್ರತಾ ಜಾಗೃತಿ” ಕುರಿತು ನೇರ ಪ್ರಸಾರ ಉಪನ್ಯಾಸಗಳ ಸರಣಿಯನ್ನು ಆಯೋಜಿಸಲಾಗಿದೆ. ಈ ಉಪನ್ಯಾಸಗಳು ಪ್ರತಿ ತಿಂಗಳ ಮೊದಲ ಬುಧವಾರ ಇಂಗ್ಲಿಷ್ ಭಾಷೆಯಲ್ಲಿ ಹಾಗೂ ಮೊದಲ ಗುರುವಾರ ಹಿಂದಿ ಭಾಷೆಯಲ್ಲಿ ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಪ್ರಸಾರಗೊಳ್ಳಲಿವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮವನ್ನು ಎನ್ಸಿಇಆರ್ಟಿ ಅಧಿಕೃತ ಯೂಟ್ಯೂಬ್ ಚಾನೆಲ್ ಹಾಗೂ ಪಿಎಂ ಇ-ವಿದ್ಯಾ ಡಿಟಿಎಚ್ ಟಿವಿ (ಡಿಡಿ ಫ್ರೀಡಿಶ್) ಚಾನೆಲ್ಗಳ ಮೂಲಕ ವೀಕ್ಷಿಸಬಹುದಾಗಿದೆ.
ಕಾರ್ಯಕ್ರಮದ ಉದ್ದೇಶ ಹಾಗೂ ವರದಿ ಸಲ್ಲಿಕೆ ಕಡ್ಡಾಯ
ಈ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಡಿಜಿಟಲ್ ವೇದಿಕೆಗಳನ್ನು ಸುರಕ್ಷಿತವಾಗಿ ಬಳಸುವ ಬಗ್ಗೆ ಮತ್ತು ಸೈಬರ್ ಅಪರಾಧಗಳನ್ನು ಎದುರಿಸುವ ಕುರಿತು ವಯೋಮಾನಕ್ಕೆ ಅನುಗುಣವಾದ ಪ್ರಾಯೋಗಿಕ ಜ್ಞಾನವನ್ನು ಒದಗಿಸಲಾಗುವುದು. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಯೋಜನಾ ನಿರ್ದೇಶಕಿ ಕೆ. ವಿದ್ಯಾಕುಮಾರಿ ಅವರು ಸುತ್ತೋಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, ಕಾರ್ಯಕ್ರಮ ವೀಕ್ಷಿಸಿದ ಕುರಿತು ಫೋಟೋ ಸಹಿತ ಕ್ರೋಢೀಕೃತ ವರದಿಯನ್ನು ssknasinh@gmail.com ಇಮೇಲ್ ವಿಳಾಸಕ್ಕೆ ಕಡ್ಡಾಯವಾಗಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.











