Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ವಿಶೇಷ : ಮೊಬೈಲ್ ಗೀಳಿನ ನಡುವೆ ಪುಸ್ತಕ ಪ್ರೀತಿಗೆ ಸಾಕ್ಷಿಯಾದ ಚಿತ್ರದುರ್ಗದ ಗ್ರಂಥಾಲಯ!

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 15  : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಈ ಸುಸಂದರ್ಭದಲ್ಲಿ ಅಕ್ಷರ ಲೋಕದ ಮಹತ್ವವನ್ನು ಹಾಗೂ ಗ್ರಂಥಾಲಯಗಳು ಸಮಾಜದ ಮೇಲೆ ಬೀರುತ್ತಿರುವ ಸಕಾರಾತ್ಮಕ ಪ್ರಭಾವವನ್ನು ಸ್ಮರಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ, ಚಿತ್ರದುರ್ಗ ಜಿಲ್ಲೆಯ ಪ್ರತಿಷ್ಠಿತ ಗ್ರಂಥಾಲಯದ ಬಗ್ಗೆ ಅಲ್ಲಿನ ಸಕ್ರಿಯ ಓದುಗ, ಮೊಳಕಾಲ್ಮೂರು ತಾಲೂಕಿನ ಚಿಕ್ಕುಂಟಿಯ ಯುಜಿಪಿಎಸ್ ಶಾಲೆಯ ಶಿಕ್ಷಕ ಪ್ರಕಾಶ್ ಅವರ ಅನುಭವದ ಮಾತುಗಳು ಗ್ರಂಥಾಲಯದ ನೈಜ ಮೌಲ್ಯವನ್ನು ನಮ್ಮ ಕಣ್ಮುಂದೆ ತೆರೆದಿಡುತ್ತವೆ.

ಶಿಕ್ಷಕ ಪ್ರಕಾಶ್

ಶತಮಾನದ ಇತಿಹಾಸವುಳ್ಳ ಜ್ಞಾನದ ಅಕ್ಷಯ ಪಾತ್ರೆ
ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಅರ್ಪಿಸಿದ ಅತ್ಯಮೂಲ್ಯ ಕೊಡುಗೆಯೇ ಶ್ರೀಕೃಷ್ಣರಾಜ ನಗರ ಕೇಂದ್ರ ಗ್ರಂಥಾಲಯ 1925ರ ಇಸವಿಯಿಂದಲೂ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಓದುವ ಪ್ರೇರಣೆ ನೀಡುತ್ತಿರುವ ಬ್ರಿಟಿಷ್ ಕಾಲದ ಈ ಭವ್ಯ ಕಟ್ಟಡವು ಇಂದಿಗೂ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿ ಉಳಿದಿದೆ.

ಶಿಕ್ಷಕ ಪ್ರಕಾಶ್ ಅವರು 2016ರಿಂದಲೂ ಈ ಗ್ರಂಥಾಲಯದ ಸಕ್ರಿಯ ಓದುಗರಾಗಿದ್ದು, ತಮ್ಮ ವೃತ್ತಿಯ ಬಿಡುವಿನ ವೇಳೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಪುಸ್ತಕಗಳನ್ನು ಓದುತ್ತಾರೆ. ಇಲ್ಲಿನ ಸಿಬ್ಬಂದಿ ವರ್ಗದವರ ಸಹಕಾರ ಹಾಗೂ ವಿದ್ಯಾರ್ಥಿಗಳ ನಡುವಿನ ಸ್ನೇಹಮಯ ವಾತಾವರಣವು ಓದುಗರಿಗೆ ಅತ್ಯಂತ ಪ್ರಶಂಸನೀಯವಾಗಿದೆ ಎಂಬುದು ಅವರ ಅನುಭವದ ನುಡಿಯಾಗಿದೆ. ಇಲ್ಲಿಗೆ ಆಗಮಿಸುವ ಬಹುಪಾಲು ವಿದ್ಯಾರ್ಥಿಗಳು ಗ್ರಾಮೀಣ ಭಾಗದ, ಮಧ್ಯಮ ವರ್ಗ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಂದ ಬಂದವರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಸೇರಿ ಬಾಡಿಗೆ ಕೊಠಡಿಗಳ ವ್ಯವಸ್ಥೆ ಮಾಡಿಕೊಂಡು, ಒಟ್ಟಾಗಿ ವಿದ್ಯಾಭ್ಯಾಸ ಮಾಡುತ್ತಿರುವುದು ಇಲ್ಲಿನ ಶೈಕ್ಷಣಿಕ ವಾತಾವರಣದ ವಿಶೇಷತೆಯಾಗಿದೆ. ಸ್ಥಳೀಯರು ಮಾತ್ರವಲ್ಲದೆ, ನೆರೆಯ ಇತರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇತರ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿ ಅತ್ಯುತ್ತಮ ಸೌಲಭ್ಯಗಳಿದ್ದು, ಭವಿಷ್ಯದಲ್ಲಿ ಇಲ್ಲಿ ವಸತಿಯುತ ಗ್ರಂಥಾಲಯ ಕೂಡ ನಿರ್ಮಾಣವಾಗುವ ಭರವಸೆಯನ್ನು ಮುಖ್ಯ ಗ್ರಂಥಪಾಲಕರು ನೀಡಿದ್ದಾರೆ.

ಸಾಧಕರನ್ನು ರೂಪಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ತವರೂರು
ಈ ಕೇಂದ್ರ ಗ್ರಂಥಾಲಯವು ಕೇವಲ ಪುಸ್ತಕಗಳನ್ನು ಓದುವ ಸಾಮಾನ್ಯ ತಾಣವಾಗಿ ಉಳಿದಿಲ್ಲ. ಬದಲಾಗಿ, ಸಮಾಜಕ್ಕೆ ಅನೇಕ ಸಾಧಕರನ್ನು, ಅಧಿಕಾರಿಗಳನ್ನು ನೀಡಿದ ಒಂದು ಶಕ್ತಿ ಕೇಂದ್ರವಾಗಿ ರೂಪುಗೊಂಡಿದೆ. ಇತ್ತೀಚೆಗೆ ಪ್ರಕಟವಾದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ಪಟ್ಟಿಯಲ್ಲಿ ಇದೇ ಗ್ರಂಥಾಲಯದಲ್ಲಿ ಕುಳಿತು ವ್ಯಾಸಂಗ ಮಾಡಿದ 10-15 ಜನ ಪ್ರತಿಭಾವಂತ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಈ ಜ್ಞಾನಗುಡಿಯ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಕಾಶ್ ಅವರ ಸ್ನೇಹಿತರ ವಲಯದಲ್ಲೇ ಅನೇಕರು ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಕರಾಗಿ ಆಯ್ಕೆಯಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕೇವಲ ಶಿಕ್ಷಕರು ಮತ್ತು ಪೊಲೀಸ್ ಸಿಬ್ಬಂದಿ ಮಾತ್ರವಲ್ಲದೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಾಧ್ಯಾಪಕರು, ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾದ ಕೆಎಎಸ್ ಅಧಿಕಾರಿಗಳು ಸೇರಿದಂತೆ ಉನ್ನತ ಶ್ರೇಣಿಯ ಅಧಿಕಾರಿಗಳು ಕೂಡ ಇದೇ ಗ್ರಂಥಾಲಯದ ಮಡಿಲಲ್ಲಿ ಓದಿ ರೂಪುಗೊಂಡಿದ್ದಾರೆ. ಪ್ರಸ್ತುತ ವರ್ಷದಲ್ಲಿಯೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ ಹಗಲಿರುಳು ಶ್ರಮಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಕನಿಷ್ಠ 30-50 ಜನ ವಿವಿಧ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಬಲವಾದ ವಿಶ್ವಾಸವನ್ನು ಪ್ರಕಾಶ್ ಅವರು ವ್ಯಕ್ತಪಡಿಸುತ್ತಾರೆ.

ಡಿಜಿಟಲ್ ಜಗತ್ತಿನ ಭರಾಟೆಯ ನಡುವೆ ಪುಸ್ತಕಗಳ ನೈಜ ಸ್ಪರ್ಶ :
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜನರು ಮೊಬೈಲ್ ಹಾಗೂ ಇಂಟರ್ನೆಟ್ ಜಗತ್ತಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ರವಿಬೆಳಗೆರೆ ಅವರ ನುಡಿಗಳನ್ನು ಸ್ಮರಿಸುವ ಪ್ರಕಾಶ್ ಅವರು, ಮುದ್ರಿತ ಪುಸ್ತಕದ ಹಾಳೆಗಳು ಮನುಷ್ಯನ ಭಾವಕೋಶವನ್ನು ಮೀಟಿ ಸಂಸ್ಕಾರದ ಸ್ಪರ್ಶವನ್ನು ನೀಡುತ್ತವೆ ಎಂಬ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ. ಇಂದಿನ ದಿನಗಳಲ್ಲಿ ಮೊಬೈಲ್, ಲ್ಯಾಪ್ಟಾಪ್ ಹಾಗೂ ಟ್ಯಾಬ್ಲೆಟ್ಗಳಂತಹ ಡಿಜಿಟಲ್ ಪರದೆಗಳ ಮೂಲಕ ಹೆಚ್ಚು ಸಮಯ ಓದುವುದರಿಂದ ದೀರ್ಘಕಾಲದಲ್ಲಿ ಮಾನವನ ದೇಹದ ಅಂಗಾಂಗಗಳ ಮೇಲೆ ತೀವ್ರವಾದ ದುಷ್ಪರಿಣಾಮಗಳು ಉಂಟಾಗುತ್ತವೆ. ವಿಶೇಷವಾಗಿ ಕಣ್ಣಿನ ದೃಷ್ಟಿ ಮತ್ತು ಮೆದುಳಿನ ಕಾರ್ಯಕ್ಷಮತೆಯ ಮೇಲೆ ಇವುಗಳ ಪ್ರಭಾವ ಋಣಾತ್ಮಕವಾಗಿರುತ್ತದೆ. ಹಾಗಾಗಿ ತಂತ್ರಜ್ಞಾನದ ಗೀಳಿನಿಂದ ಸ್ವಲ್ಪ ಮಟ್ಟಿಗೆ ಹೊರಬಂದು, ಭೌತಿಕ ಪುಸ್ತಕಗಳನ್ನು ಓದುವತ್ತ ಯುವಜನತೆ ಮುಖ ಮಾಡಬೇಕಾದ ತುರ್ತು ಅಗತ್ಯವಿದೆ. ಭವಿಷ್ಯದ ದೃಷ್ಟಿಯಿಂದ ಇಂಗ್ಲಿಷ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಡಿಜಿಟಲೈಸ್ಡ್ ಲೈಬ್ರರಿ ಸೌಲಭ್ಯಗಳು ಬಂದರೆ ವಿದ್ಯಾರ್ಥಿಗಳಿಗೆ ತಾಂತ್ರಿಕವಾಗಿ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಗ್ಗಿಕೊಳ್ಳಲು ಹೆಚ್ಚು ಅನುಕೂಲವಾಗಲಿದೆ. ಆದರೂ, ಮನುಷ್ಯ ಕೇವಲ ಯಂತ್ರಗಳಿಗೆ ಒಗ್ಗಿಕೊಳ್ಳದೆ ಸಹ ಮನುಷ್ಯರೊಂದಿಗೆ ಬೆರೆಯಬೇಕು ಮತ್ತು ಪುಸ್ತಕಗಳೊಂದಿಗಿನ ನೈಜ ಒಡನಾಟವನ್ನು ಕಳೆದುಕೊಳ್ಳಬಾರದು ಎಂಬುದು ಅವರ ಕಳಕಳಿಯಾಗಿದೆ.

ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಮಾಜಮುಖಿ ವೇದಿಕೆ
ಗ್ರಂಥಾಲಯ ಎಂದರೆ ಕೇವಲ ಪಠ್ಯಪುಸ್ತಕಗಳು, ಉದ್ಯೋಗಾವಕಾಶ ಒದಗಿಸುವ ಕಾಂಪಿಟೇಟಿವ್ ಪುಸ್ತಕಗಳು ಅಥವಾ ಮಾಹಿತಿ ಕೋಶಗಳನ್ನು ಓದುವ ಜಾಗ ಮಾತ್ರವಲ್ಲ. ಇದು ಕನ್ನಡ ಮತ್ತು ಆಂಗ್ಲ ಭಾಷೆಯ ಸಾಹಿತ್ಯ, ಕಾದಂಬರಿಗಳು ಹಾಗೂ ವೈಚಾರಿಕ ಕೃತಿಗಳ ಓದಿನಿಂದ ಮನುಷ್ಯನನ್ನು ಮಾನಸಿಕವಾಗಿ, ಬೌದ್ಧಿಕವಾಗಿ ಪಕ್ವಗೊಳಿಸುವ ಅದ್ಭುತ ತಾಣವಾಗಿದೆ. ಇಲ್ಲಿಗೆ ಜ್ಞಾನಾರ್ಜನೆಗಾಗಿ ಬರುವ ವಿದ್ಯಾರ್ಥಿಗಳು ಮುಂಜಾನೆ 8 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ಒಂದೇ ಸೂರಿನಡಿ ಒಟ್ಟಿಗೆ ಕಳೆಯುತ್ತಾರೆ. ಸುದೀರ್ಘ ಸಮಯದ ಈ ಒಡನಾಟದಿಂದ ಅವರ ನಡುವೆ ಕೇವಲ ಪೈಪೋಟಿ ಬೆಳೆಯುವುದಿಲ್ಲ, ಬದಲಾಗಿ ಪರಸ್ಪರ ಸಹೋದರತ್ವ, ಗಾಢವಾದ ಸ್ನೇಹ, ಸಹಕಾರ ಹಾಗೂ ಪ್ರೀತಿ ವಿಶ್ವಾಸಗಳು ಚಿಗುರೊಡೆಯುತ್ತವೆ. ಓದುವ ಸಮಯದಲ್ಲಿ ಎದುರಾಗುವ ಆರ್ಥಿಕ ಅಥವಾ ಮಾನಸಿಕ ಕಷ್ಟಗಳಿಗೆ ಒಬ್ಬರಿಗೊಬ್ಬರು ನೇರವಾಗಿ ಸ್ಪಂದಿಸುತ್ತಾರೆ. ಈ ಮೂಲಕ ಇಲ್ಲಿನ ವಾತಾವರಣವು ಕೇವಲ ಉದ್ಯೋಗಾರ್ಥಿಗಳನ್ನು ಸೃಷ್ಟಿಸದೆ, ಒಂದು ಅತ್ಯುತ್ತಮ ಸಮಾಜವನ್ನು ಕಟ್ಟುವ ಭದ್ರ ನೆಲೆಯಾಗಿ ರೂಪಗೊಳ್ಳುತ್ತಿದೆ. ಗ್ರಂಥಾಲಯದಲ್ಲಿ ಹುಟ್ಟುವ ಇಂತಹ ಸಮಾಜಮುಖಿ ಚಿಂತನೆಗಳು, ಪರಸ್ಪರ ಒಡನಾಟ ಹಾಗೂ ಸಾಹಿತ್ಯದ ಪ್ರಭಾವವೇ ವಿದ್ಯಾರ್ಥಿಗಳನ್ನು ಭವಿಷ್ಯದ ಅತ್ಯುತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿವೆ ಎಂದು ಪ್ರಕಾಶ್ ಅವರು ಅತ್ಯಂತ ಹೆಮ್ಮೆಯಿಂದ ವಿವರಿಸುತ್ತಾರೆ.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಈ ಹೊತ್ತಿನಲ್ಲಿ, ಇಂತಹ ಜ್ಞಾನ ದೇಗುಲಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now