ಚಿಕ್ಕಮಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ (Government Schools) ಮುಂಬರುವ ಶೈಕ್ಷಣಿಕ ವರ್ಷದಿಂದ ಕನ್ನಡದ ಜತೆಗೆ ಇಂಗ್ಲಿಷ್ ಮಾಧ್ಯಮದಲ್ಲೂ (English Medium) ಬೋಧನೆ ನಡೆಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕನ್ನಡದೊಂದಿಗೆ ಆಂಗ್ಲ ಮಾಧ್ಯಮದ ದ್ವಿಭಾಷಾ ಬೋಧನೆಯನ್ನು ಜಾರಿಗೆ ತರುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೂ ಗುಣಮಟ್ಟದ ಆಂಗ್ಲ ಶಿಕ್ಷಣ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.
ಚಿಕ್ಕಮಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾಮಟ್ಟದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು. ಪ್ರಸ್ತುತ ರಾಜ್ಯದ ಸುಮಾರು 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್ ಮಾಧ್ಯಮ ಬೋಧನೆ ಯಶಸ್ವಿಯಾಗಿ ನಡೆಯುತ್ತಿದೆ. ದ್ವಿಭಾಷಾ ಬೋಧನೆ ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಹೆಚ್ಚಾಗಿದ್ದು, ಉಳಿದ ಜಿಲ್ಲೆಗಳಲ್ಲೂ ಈ ವ್ಯವಸ್ಥೆ ಜಾರಿಗೆ ತರಬೇಕೆಂಬ ಸಾರ್ವಜನಿಕ ಒತ್ತಾಯ ವ್ಯಕ್ತವಾಗಿದೆ. ಹೀಗಾಗಿ, ಉಳಿದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೂ ಶೀಘ್ರದಲ್ಲೇ ಅನುಮೋದನೆ ನೀಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ಸಮಗ್ರವಾಗಿ ದ್ವಿಭಾಷಾ ಬೋಧನೆ ಆರಂಭಿಸಲಾಗುವುದು ಎಂದು ತಿಳಿಸಿದರು
ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕುರಿತು ಗಂಭೀರವಾಗಿ ಚರ್ಚೆ ನಡೆದವು. ಸಭೆಯಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು ಅಮೂಲ್ಯ ಸಲಹೆ ನೀಡಿದರು.
ನಮ್ಮ ಇಲಾಖೆಯ ಬಹುಮುಖ್ಯ ಉಪಕ್ರಮವಾದ ʻ ನಮ್ಮ ಶಾಲೆ – ನಮ್ಮ ಜವಾಬ್ದಾರಿʼ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕುರಿತೂ ಚರ್ಚೆ ನಡೆಯಿತು. ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಬಗ್ಗೆ, ಪೂರ್ವ ಪ್ರಾಥಮಿಕ ವಿಭಾಗಗಳನ್ನು ಪ್ರಾರಂಭಿಸುವ ಕುರಿತು, ಶಿಕ್ಷಕರ ನೇಮಕಾತಿ, ತರಬೇತಿ, ಮಕ್ಕಳ ಹಾಜರಾತಿ ಹೀಗೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿ, ಜಿಲ್ಲೆಯಲ್ಲಿ ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಸಂಬಂಧ ಸಲಹೆಗಳನ್ನು ನೀಡಿದ್ದಾರೆ.
ಮಧ್ಯಾಹ್ನದ ಬಿಸಿ ಊಟ ಯೋಜನೆಯನ್ನು ಯಾವುದೇ ದೋಷವಿಲ್ಲದೆ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ದೇಶದ ಗಮನ ಸೆಳೆದ ನಮ್ಮ ಇಲಾಖೆಯ ಕಾರ್ಯಕ್ರಮವಾದ ʻಮೊಬೈಲ್ ಬಿಡಿ ಪುಸ್ತಕ ಹಿಡಿʼ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ತಿಳಿಸಿದ್ದಾರೆ
ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಚ್.ಡಿ. ತಮ್ಮಯ್ಯ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ. ರಾಜೇಗೌಡ, ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ.ಹೆಚ್ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಗಾಯತ್ರಿ ಶಾಂತೇಗೌಡ, ಶ್ರೀ ಎಸ್.ಎಲ್ ಭೋಜೇಗೌಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಸಿ ಶಿವಾನಂದ, ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎ.ಎನ್ ಮಹೇಶ್, ಜಿಲ್ಲಾ ಪಂಚಾಯತಿ ಸಿಇಒ ಮೀನಾಕ್ಷಿ ಆರ್ಯ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಡಿಡಿಪಿಐ ಶ್ರೀ ತಿಮ್ಮರಾಜು, ಡಿಡಿಪಿಯು ಶ್ರೀಮತಿ ಮಂಜುಳಾ ಸೇರಿದಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.













