Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2027ರಿಂದ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ರಾಜ್ಯಮಟ್ಟದಲ್ಲೇ ಏಕರೂಪದ ಪ್ರಶ್ನೆ ಪತ್ರಿಕೆ

---Advertisement---

ಬೆಂಗಳೂರು: ರಾಜ್ಯದಲ್ಲಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇನ್ಮುಂದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯೇ (KSEAB) ರಾಜ್ಯಮಟ್ಟದಲ್ಲಿ ಏಕರೂಪದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಕಾಲೇಜುಗಳಿಗೆ ವಿತರಿಸಲಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.

ಇದುವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಕಾಲೇಜು ಹಂತದಲ್ಲೇ ಸಿದ್ಧಪಡಿಸಿ, ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದರಿಂದಾಗಿ ಕಾಲೇಜಿನಿಂದ ಕಾಲೇಜಿಗೆ ಪ್ರಶ್ನೆಪತ್ರಿಕೆಯ ಗುಣಮಟ್ಟ, ಕಠಿಣತೆ ಹಾಗೂ ಮೌಲ್ಯಮಾಪನದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದವು. ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಮತ್ತು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಮೌಲ್ಯಮಾಪನ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ರಾಜ್ಯದ ಎಲ್ಲಾ ಪಿಯು ಕಾಲೇಜುಗಳಿಗೂ ಈ ನಿಯಮ ಅನ್ವಯವಾಗಲಿದೆ.

ಸರ್ಕಾರದ ಪ್ರಮುಖ ಮಾರ್ಗಸೂಚಿಗಳು  

ಏಕರೂಪದ ಪ್ರಶ್ನೆಪತ್ರಿಕೆ ಮತ್ತು ವೇಳಾಪಟ್ಟಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ರಾಜ್ಯದ ಎಲ್ಲಾ ಕಾಲೇಜುಗಳಿಗೆ ಅನ್ವಯವಾಗುವಂತೆ ಏಕರೂಪದ ಪರೀಕ್ಷಾ ವೇಳಾಪಟ್ಟಿ ಹಾಗೂ ಡಿಜಿಟಲ್ ರೂಪದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಒದಗಿಸಲಿದೆ.

ಡಿಜಿಟಲ್ ರವಾನೆ: ಪರೀಕ್ಷಾ ವೇಳಾಪಟ್ಟಿಯಂತೆ ಗೌಪ್ಯತೆಯನ್ನು ಕಾಯ್ದುಕೊಂಡು ಡಿಜಿಟಲ್ ರೂಪದಲ್ಲೇ ಸಂಬಂಧಿಸಿದ ಕಾಲೇಜುಗಳಿಗೆ ಪ್ರಶ್ನೆಪತ್ರಿಕೆಗಳನ್ನು ರವಾನಿಸಲಾಗುತ್ತದೆ.

ಪ್ರಾಯೋಗಿಕ ಪರೀಕ್ಷೆ: ಪ್ರಾಯೋಗಿಕ ಪರೀಕ್ಷೆಗಳನ್ನು ಜಿಲ್ಲಾ ಉಪನಿರ್ದೇಶಕರ (DDPU) ನೇತೃತ್ವದಲ್ಲಿ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ.

ಕಾಲೇಜು ಹಂತದಲ್ಲೇ ಮೌಲ್ಯಮಾಪನ: ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಆಯಾ ಕಾಲೇಜುಗಳ ಪ್ರಾಂಶುಪಾಲರ ಮೇಲ್ವಿಚಾರಣೆಯಲ್ಲೇ ನಡೆಯಲಿದೆ.

ಅಂಕಗಳ ದಾಖಲಾತಿ: ಪ್ರಾಯೋಗಿಕ ಹಾಗೂ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಇಲಾಖೆಯ ನಿಗದಿತ ತಂತ್ರಾಂಶದಲ್ಲಿ (Software) ಕಾಲಮಿತಿಯೊಳಗೆ ಕಡ್ಡಾಯವಾಗಿ ನಮೂದಿಸಬೇಕು.

ಫಲಿತಾಂಶ ಪ್ರಕಟಣೆ: ಕಾಲೇಜುಗಳು ಸಿದ್ಧಪಡಿಸಿದ ಫಲಿತಾಂಶವನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ಅನುಮೋದಿಸಿದ ಬಳಿಕವಷ್ಟೇ ಪ್ರಕಟಿಸಬೇಕಾಗುತ್ತದೆ.

Join WhatsApp

Join Now

Join Telegram

Join Now