ದಾವಣಗೆರೆ:ಬೆಳಗಾಗುವುದರೊಳಗೆ ಒಂದಿಲ್ಲೊಂದು ಅಗತ್ಯ ವಸ್ತುವಿನ ಬೆಲೆ ಏರಿಕೆಯಾಗುತ್ತಿದೆ. ದಿನಸಿ, ತರಕಾರಿ, ಹಾಲು, ಮೊಸರು ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ದರ ನಿರಂತರವಾಗಿ ಹೆಚ್ಚುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಬಜೆಟ್ ಮೇಲೆ ಭಾರಿ ಹೊರೆ ಉಂಟುಮಾಡಿದೆ. ಆದಾಯದಲ್ಲಿ ಯಾವುದೇ ಗಮನಾರ್ಹ ಹೆಚ್ಚಳವಿಲ್ಲದಿದ್ದರೂ ಖರ್ಚು ಮಾತ್ರ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಸಾಮಾನ್ಯ ಜನರು ಜೀವನ ನಿರ್ವಹಣೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ದರ ಏರಿಕೆಯಿಂದ ಕಂಗೆಟ್ಟಿರುವ ನಗರದ ನಿವಾಸಿಗಳ ಅಳಲು ಇದಾಗಿದೆ. ಸಾಮಾನ್ಯವಾಗಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಮಧ್ಯಮ ವರ್ಗದ ಕುಟುಂಬವೊಂದರ ಮಾಸಿಕ ನಿರ್ವಹಣಾ ವೆಚ್ಚ ಇತ್ತೀಚಿನ ದಿನಗಳಲ್ಲಿ ಶೇ.15ರಷ್ಟು ಹೆಚ್ಚಾಗಿದೆ. ನವೆಂಬರ್ನಲ್ಲಿ ಇದು ಶೇ.20ಕ್ಕೆ ತಲುಪುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.
ದಿನಸಿ, ತರಕಾರಿ ಬೆಲೆ ಗಗನಮುಖಿ. ಅಕ್ಕಿ, ಜೋಳ, ಗೋಧಿ, ರಾಗಿ, ಬೇಳೆಕಾಳು, ರವೆ, ಸಕ್ಕರೆ, ಅಡುಗೆ ಎಣ್ಣೆ, ಬೆಲ್ಲ ಹಾಗೂ ಮಸಾಲೆ ಪದಾರ್ಥಗಳ ಬೆಲೆ ಅಕ್ಟೋಬರ್ ವೇಳೆಗೆ ಶೇ.10ರಷ್ಟು ಹೆಚ್ಚಾಗಿದೆ. ತರಕಾರಿಗಳ ಬೆಲೆಯಲ್ಲಿಯೂ ಕೆ.ಜಿ.ಗೆ ₹10ರಿಂದ ₹20ರವರೆಗೆ ಏರಿಕೆಯಾಗಿದೆ.
ನವೆಂಬರ್ 1ರಿಂದ ಬಹುತೇಕ ಸಾಮಾನ್ಯ ತರಕಾರಿಗಳ ಬೆಲೆ ಕೆ.ಜಿ.ಗೆ ಸುಮಾರು ₹80ರಷ್ಟಿದೆ. ಬೀನ್ಸ್, ಹೂಕೋಸು, ಗೆಡ್ಡೆಕೋಸು ಹಾಗೂ ಬ್ರೊಕೋಲಿ ಬೆಲೆ ಕೆ.ಜಿ.ಗೆ ₹120ರಿಂದ ₹160ರವರೆಗೆ ತಲುಪಿದೆ. ಟೊಮೆಟೊ ಬೆಲೆ ಕೆ.ಜಿ.ಗೆ ₹25ರಿಂದ ₹40ರ ಆಸುಪಾಸಿನಲ್ಲಿದೆ.ಈರುಳ್ಳಿ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದ್ದು, ಹಿಂದೆ ₹100ಕ್ಕೆ ಮೂರೂವರೆ ಅಥವಾ ನಾಲ್ಕು ಕೆ.ಜಿ. ಸಿಗುತ್ತಿದ್ದ ಈರುಳ್ಳಿ ಈಗ ಎರಡು ಕೆ.ಜಿ. ಮಾತ್ರ ಸಿಗುತ್ತಿದೆ. ಹಾಲು ಮತ್ತು ಮೊಸರಿನ ಬೆಲೆ ₹8ರಿಂದ ₹14ರವರೆಗೆ ಹೆಚ್ಚಳವಾಗಿರುವುದು ಕುಟುಂಬಗಳ ದಿನನಿತ್ಯದ ಖರ್ಚನ್ನು ಮತ್ತಷ್ಟು ಹೆಚ್ಚಿಸಿದೆ.
ಸೊಪ್ಪಿನ ಬೆಲೆಯೂ ಜನಸಾಮಾನ್ಯರಿಗೆ ಹೊರೆಯಾಗಿದೆ. ಈ ಹಿಂದೆ ₹10ಕ್ಕೆ ಮೂರು ಕಟ್ಟು ಅಥವಾ ಕೆಲವೊಮ್ಮೆ ಎರಡು ಕಟ್ಟು ಸಿಗುತ್ತಿದ್ದ ಸೊಪ್ಪು, ಇದೀಗ ₹10ಕ್ಕೆ ಒಂದು ಕಟ್ಟಿನಂತೆ ಮಾರಾಟವಾಗುತ್ತಿದೆ. ಪಾಲಕ್ ಸೊಪ್ಪು ಮಾತ್ರ ಎರಡು ಕಟ್ಟು ಸಿಗುತ್ತಿದೆ.₹6 ಸಾವಿರದಿಂದ ₹12 ಸಾವಿರಕ್ಕೆ ಏರಿದ ಮಾಸಿಕ ಖರ್ಚು!
ನಗರದ ನಿವಾಸಿ ಒಬ್ಬರು ತಮ್ಮ ಕುಟುಂಬದ ಮಾಸಿಕ ಖರ್ಚಿನ ಹೆಚ್ಚಳದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.’ಮೂರ್ನಾಲ್ಕು ತಿಂಗಳ ಹಿಂದೆ ₹6 ಸಾವಿರದಿಂದ ₹8 ಸಾವಿರದೊಳಗೆ ಮಾಸಿಕ ಜೀವನ ನಿರ್ವಹಣೆ ಮಾಡಬಹುದಿತ್ತು. ಆದರೆ ಕಳೆದ ತಿಂಗಳು ಖರ್ಚು ₹10 ಸಾವಿರ ದಾಟಿತ್ತು. ಈ ಬಾರಿ ಹಾಲು, ಮೊಸರು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿರುವುದನ್ನು ಲೆಕ್ಕ ಹಾಕಿದರೆ ತಿಂಗಳಿಗೆ ₹12 ಸಾವಿರವಾದರೂ ಸಾಕಾಗುವುದಿಲ್ಲ ಅನಿಸುತ್ತಿದೆ’ ಎಂದು ತಿಳಿಸಿದ್ದಾರೆ.
ತರಕಾರಿ ವ್ಯಾಪಾರಿಗಳಿಗೂ ಬೆಲೆ ಏರಿಕೆಯ ಬಿಸಿ
ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಮಾತ್ರವಲ್ಲ, ವ್ಯಾಪಾರಿಗಳಿಗೂ ಸಂಕಷ್ಟ ಎದುರಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಖರೀದಿಸಿದರೆ ಮಾರಾಟವಾಗದೆ ಉಳಿಯುವ ಆತಂಕವಿದೆ. ಮಾರಾಟವಾಗದೆ ಮೂರು-ನಾಲ್ಕು ಕೆ.ಜಿ. ತರಕಾರಿ ಉಳಿದರೂ ನಿತ್ಯದ ಕೂಲಿಗೂ ತೊಂದರೆಯಾಗುತ್ತದೆ ಎಂದು ತರಕಾರಿ ವ್ಯಾಪಾರಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ಸಂಬಳ ಹೆಚ್ಚಳಕ್ಕಿಂತ ವೇಗವಾಗಿ ಏರುತ್ತಿದೆ ಖರ್ಚು
ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದ್ದರೂ ಜನರ ಸಂಬಳ ಮತ್ತು ಆದಾಯ ಮಾತ್ರ ಅದೇ ಮಟ್ಟದಲ್ಲಿದೆ. ಖಾಸಗಿ ಸಂಸ್ಥೆಗಳಲ್ಲಿ ವಾರ್ಷಿಕ ವೇತನ ಹೆಚ್ಚಳವಾದರೂ ಹಣದುಬ್ಬರದ ಪರಿಣಾಮವನ್ನು ಎದುರಿಸಲು ಅದು ಸಾಕಾಗುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಹೀಗಾಗಿ ಕುಟುಂಬ ನಿರ್ವಹಣೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ದಿನಸಿ, ತರಕಾರಿ ಹಾಗೂ ಹಾಲು-ಮೊಸರಿನ ಬೆಲೆ ಏರಿಕೆ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಅನ್ನು ಬುಡಮೇಲು ಮಾಡುತ್ತಿದೆ. ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದರಿಂದ ಸಾಮಾನ್ಯ ಜನರು ಸಂಸಾರದ ನೊಗ ಸಾಗಿಸಲು ಪರದಾಡುವಂತಾಗಿದೆ.











