Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಾಲ್ಲೂಕು ಮಟ್ಟದ ಕಾರ್ಯಪಡೆ ಸಮಿತಿ ಸಭೆ ಪ್ರತಿ ತಿಂಗಳು ಕಡ್ಡಾಯ : ಎಡಿಸಿ ಬಿ.ಟಿ.ಕುಮಾರಸ್ವಾಮಿ

---Advertisement---

 

ಚಿತ್ರದುರ್ಗ. ನ.04: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಗಳನ್ನು ಕಡ್ಡಾಯವಾಗಿ ಪ್ರತಿ ತಿಂಗಳು ನಡೆಸಿ, ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಕಾರ್ಯಪಡೆ ಮತ್ತು ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಂದಾಯ, ಪೊಲೀಸ್, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ಸಭೆಗಳು ಪ್ರತಿ ತಿಂಗಳು ಕಡ್ಡಾಯವಾಗಿ ನಡೆಯಬೇಕು. ಆದರೆ ಕೆಲವು ತಾಲ್ಲೂಕುಗಳಲ್ಲಿ ಕಳೆದ ಎಂಟು ತಿಂಗಳುಗಳಿಂದ ಎರಡು-ಮೂರು ಸಭೆಗಳನ್ನು ಮಾತ್ರ ನಡೆಸಲಾಗಿದೆ. ನಿಯಮಿತವಾಗಿ ಸಭೆ ನಡೆಸದ ಕಾರ್ಮಿ ನಿರೀಕ್ಷಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಹೋಟೆಲ್, ಡಾಬಾ, ಗ್ಯಾರೇಜ್, ವರ್ಕ್‍ಶಾಪ್, ಕಟ್ಟಡ ನಿರ್ಮಾಣ ಸ್ಥಳಗಳು ಹಾಗೂ ಬೇಕರಿಗಳಿಗೆ ನಿರಂತರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಬಾಲಕಾರ್ಮಿಕರು ಕಂಡುಬಂದರೆ ತಕ್ಷಣವೇ ಅವರನ್ನು ರಕ್ಷಿಸಿ, ಪುನರ್ವಸತಿ ಕಲ್ಪಿಸಬೇಕು. ನಿಯಮ ಉಲ್ಲಂಘಿಸುವ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.
ಕಾರ್ಮಿಕ ಅಧಿಕಾರಿ ಎಸ್.ಆರ್.ಅರವಿಂದ ಮಾತನಾಡಿ, ಇತ್ತೀಚೆಗೆ ಜಿಲ್ಲೆಯ ವಿವಿಧ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್ ಹಾಗೂ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಬಾಲಕಾರ್ಮಿಕ ಕಾಯ್ದೆ 1986ರ ಕಲಂ 16 ಮತ್ತು 17ರ ಅಡಿಯಲ್ಲಿ ಮಾಸಿಕ ಕನಿಷ್ಠ 15 ತಪಾಸಣೆಗಳನ್ನು ನಡೆಸಲಾಗಿದೆ. ಈ ತಪಾಸಣೆಗಳ ಸಂದರ್ಭದಲ್ಲಿ ಒಟ್ಟು 20 ಮಕ್ಕಳನ್ನು ಗುರುತಿಸಿ, ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟವರಲ್ಲಿ 16 ಕಿಶೋರ ಕಾರ್ಮಿಕರು ಹಾಗೂ 4 ಬಾಲಕಾರ್ಮಿಕರಿದ್ದಾರೆ ಎಂದು ಮಾಹಿತಿ ನೀಡಿದರು.

ರಕ್ಷಣೆ ಮಾಡಿದ ನಂತರ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದು ಮಾತ್ರ ಪುನರ್ವಸತಿಯಲ್ಲ. ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆಯೇ, ಕುಟುಂಬದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಬೇಕು. ಮಕ್ಕಳ ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಬೇಕು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.
ತಪಾಸಣೆ ವೇಳೆ ಹೊರರಾಜ್ಯದ ಮಕ್ಕಳಿದ್ದಲ್ಲಿ, ಅವರು ಪೋಷಕರ ಜೊತೆಗಿದ್ದರೆ ಸೂಕ್ತ ತನಿಖೆ ನಡೆಸಿ ದಾಖಲಿಸಿಕೊಳ್ಳಬೇಕು. ನಮ್ಮ ಜಿಲ್ಲೆಯ ಮಕ್ಕಳಾಗಿದ್ದಲ್ಲಿ ಅವರಿಗೆ ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ವಸತಿ ಶಾಲೆಗಳಲ್ಲಿ ಶೇ.10ರಷ್ಟು ಮೀಸಲಾತಿಯಡಿ ಉಚಿತ ಪ್ರವೇಶ ಕೊಡಿಸಲು ಪೋಷಕರ ಒಪ್ಪಿಗೆ ಪಡೆದು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಾಕೀತು ಮಾಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಎಲ್ಲ ಕಾರ್ಮಿಕ ನಿರೀಕ್ಷಕರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಅಗತ್ಯಬಿದ್ದರೆ ಗೂಗಲ್ ಮೀಟ್ ಮೂಲಕ ಸಭೆ ನಡೆಸಿ, ಯಾವ ತಾಲೂಕಿನಲ್ಲಿ ಎಷ್ಟು ದಾಳಿಗಳಾಗಿವೆ ಮತ್ತು ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ವರದಿ ಪಡೆಯಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧವೇ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶಾಲೆಯಿಂದ ಸತತ 15 ದಿನಗಳ ಕಾಲ ಗೈರುಹಾಜರಾಗುವ ಅಥವಾ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಇಂತಹ ಮಕ್ಕಳು ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ಬಿಇಒ, ಸಿಡಿಪಿಒ, ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹಾಗೂ ಅಪ್ರಾಪ್ತರ ಗರ್ಭಧಾರಣೆಯಂತಹ ಪ್ರಕರಣಗಳು ಸಮಾಜಕ್ಕೆ ಕಳಂಕವಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಎಲ್ಲ ಇಲಾಖೆಗಳು ಬದ್ಧತೆಯಿಂದ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬಾಲಕಾರ್ಮಿಕತೆ ನಿರ್ಮೂಲನೆ, ಮಕ್ಕಳ ಸಹಾಯವಾಣಿ, ಮಕ್ಕಳ ಮಾರಾಟ ಶಿಕ್ಷರ್ಹ ಅಪರಾಥ ಹಾಗೂ ಮಕ್ಕಳ ದತ್ತು ಮಾರ್ಗಸೂಚಿ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮಮ್ಮ, ಕಾರ್ಮಿಕ ಅಧಿಕಾರಿ ಎಸ್.ಆರ್.ಅರವಿಂದ್, ಮಹಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಕಾರ್ಮಿಕ ನಿರೀಕ್ಷಕರಾದ ರಾಜಣ್ಣ, ಅಲ್ಲಾ ಭಕ್ಷಿ,  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ವಿ.ವೀಣಾ, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now