ಮಹಾನ್ ವಿದ್ವಾಂಸ ಮತ್ತು ರಾಜನೀತಿಜ್ಞ ಆಚಾರ್ಯ ಚಾಣಕ್ಯರು ತಮ್ಮ ‘ಚಾಣಕ್ಯ ನೀತಿ’ಯಲ್ಲಿ ಮನುಷ್ಯನ ಜೀವನ, ಸಮಾಜ, ಸ್ನೇಹ ಮತ್ತು ಸಂಬಂಧಗಳ ಕುರಿತು ಪ್ರಮುಖ ಪಾಠಗಳನ್ನು ವಿವರಿಸಿದ್ದಾರೆ. ಇತರರಿಗೆ ಸಹಾಯ ಮಾಡುವುದು ಮಾನವೀಯ ಗುಣವೇ ಆದರೂ, ಕೆಲವೊಂದು ಸ್ವಭಾವದ ಜನರಿಗೆ ಸಹಾಯ ಮಾಡುವುದರಿಂದ ನಮಗೆ ನಾವೇ ತೊಂದರೆ ಆಹ್ವಾನಿಸಿಕೊಂಡಂತಾಗುತ್ತದೆ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಅಂತಹ ವ್ಯಕ್ತಿಗಳು ಯಾರು ಎಂಬ ವಿವರ ಇಲ್ಲಿದೆ.
ಅವಶ್ಯಕತೆ ಇದ್ದಾಗ ಮಾತ್ರ ನೆನಪಿಸಿಕೊಳ್ಳುವ ಸ್ವಾರ್ಥಿಗಳು:
ತಮಗೆ ಅಗತ್ಯ, ಸಂಕಷ್ಟ ಅಥವಾ ಸಹಾಯ ಬೇಕಾದಾಗ ಮಾತ್ರ ನಿಮ್ಮ ಬಳಿಗೆ ಬಂದು, ಕೆಲಸ ಮುಗಿದ ನಂತರ ಕನಿಷ್ಠ ಮಾತನಾಡಿಸದೆ ತಿರುಗಿ ನೋಡದ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡಬೇಡಿ. ಇಂತಹವರು ಇತರರನ್ನು ತಮ್ಮ ಸ್ವಾರ್ಥಕ್ಕಾಗಿಯೇ ಬಳಸಿಕೊಳ್ಳುತ್ತಾರೆ.
ಮಾಡಿದ ಉಪಕಾರ ಮರೆತು, ಎಲ್ಲದರಲ್ಲೂ ತಪ್ಪು ಹುಡುಕುವವರು:
ನೀವು ಎಷ್ಟೇ ಕಷ್ಟಪಟ್ಟು ಒಳ್ಳೆಯದನ್ನು ಮಾಡಿದರೂ, ಅದರಲ್ಲಿ ಕೃತಜ್ಞತೆ ಕಾಣದೆ ಕೇವಲ ನ್ಯೂನತೆಗಳನ್ನು ಮತ್ತು ತಪ್ಪುಗಳನ್ನು ಹುಡುಕುವ ಸ್ವಭಾವದ ಜನರಿಗೆ ಎಂದಿಗೂ ಸಹಾಯ ಮಾಡಬಾರದು. ಇಂತವರಿಗೆ ಉಪಕಾರ ಮಾಡಿದರೆ ಪ್ರತಿಯಾಗಿ ನಿಂದನೆ, ಅಪಮಾನಗಳೇ ದೊರೆಯುತ್ತವೆ.
ಕೃತಘ್ನರು ಹಾಗೂ ವಂಚಕ ಸ್ವಭಾವದವರು:
ಇತರರನ್ನು ನಿರಂತರವಾಗಿ ವಂಚಿಸುತ್ತಾ ತಮ್ಮ ಲಾಭಕ್ಕಾಗಿ ನಿಮ್ಮನ್ನು ದಾಳವಾಗಿ ಬಳಸಿಕೊಳ್ಳುವವರು, ಸಹಾಯ ಪಡೆದ ನಂತರ ಕೃತಜ್ಞತೆಯನ್ನೇ ಮರೆಯುವವರು ಹಾಗೂ ತಮ್ಮ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳದೆ ಸದಾ ಇತರರನ್ನೇ ದೂಷಿಸುವ ಜನರಿಂದ ದೂರವಿರುವುದೇ ಕ್ಷೇಮ. ಇಂತಹವರ ಜೊತೆ ನಿಗದಿತ ಗಡಿ ಮತ್ತು ಅಂತರ ಕಾಯ್ದುಕೊಳ್ಳುವುದು ಮುಖ್ಯ.












