ಸುದ್ದಿಒನ್, ಚಿತ್ರದುರ್ಗ, ನವೆಂಬರ್. 02 : ಕೆಲವು ವ್ಯಕ್ತಿಗಳು ತಮ್ಮ ಕಾಯಕದ ಹಿರಿಮೆಯಿಂದಷ್ಟೇ ಗುರುತಿಸಿಕೊಳ್ಳುವುದಿಲ್ಲ. ಬದಲಿಗೆ ತಮ್ಮ ಮಾತು, ನಡವಳಿಕೆ, ಸಜ್ಜನಿಕೆ ಮತ್ತು ಅಪ್ರತಿಮ ವ್ಯಕ್ತಿತ್ವದಿಂದ ಸಮಾಜದ ಮನದಾಳದಲ್ಲಿ ಶಾಶ್ವತವಾಗಿ ನೆಲೆಸಿಬಿಡುತ್ತಾರೆ. ಅಂತಹ ಅಪರೂಪದ ಸಾಂಸ್ಕೃತಿಕ ರಾಯಭಾರಿಗಳಲ್ಲಿ ಚಿತ್ರದುರ್ಗದ ಹೆಮ್ಮೆಯ ಕೆ. ವೆಂಕಣ್ಣಾಚಾರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಕೋಟೆನಾಡಿನ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವಗಳೆಂದರೆ ಅಲ್ಲಿ ದೇಶಭಕ್ತಿಯ ಜೊತೆಜೊತೆಗೆ ಇವರ ಕಂಚಿನ ಕಂಠದ ಕನ್ನಡದ ಕಂಪು ಮುಗಿಲು ಮುಟ್ಟುತ್ತಿತ್ತು. ತಮ್ಮ ಸಾಹಿತ್ಯಿಕ ಶ್ರೀಮಂತಿಕೆ, ಗಂಭೀರ ಧ್ವನಿ ಹಾಗೂ ಶುದ್ಧ ಭಾಷಾ ಪ್ರಯೋಗದ ಮೂಲಕ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಒಂದು ವಿಶಿಷ್ಟ ಗಾಂಭೀರ್ಯ ಮತ್ತು ಮೆರುಗು ತಂದುಕೊಟ್ಟ ಹಿರಿಮೆ ಇವರದ್ದು.
1972ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿ ಐತಿಹಾಸಿಕ ಚಿತ್ರದುರ್ಗಕ್ಕೆ ಕಾಲಿಟ್ಟ ವೆಂಕಣ್ಣಾಚಾರ್ ಅವರು ಬಹುಬೇಗನೆ ಈ ನೆಲದ ಸಾಂಸ್ಕೃತಿಕ ನಾಡಿಯಾದರು. 1973ರ ಜನವರಿ 26ರ ಗಣರಾಜ್ಯೋತ್ಸವದಂದು ಮೊದಲ ಬಾರಿಗೆ ಅಧಿಕೃತವಾಗಿ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ಹೊತ್ತರು. ಅದೇ ವರ್ಷದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲೂ ಧ್ವನಿ ವಿವರಣೆ ನೀಡುವ ಮೂಲಕ ಆರಂಭವಾದ ಇವರ ಪಯಣ, ಮುಂದಿನ ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸಾಗಿತು. ಸರ್ಕಾರಿ ನೌಕರಿಯ ಒಂದು ಭಾಗವಾಗಿ ಆರಂಭವಾದ ಈ ಕಾರ್ಯ, ಕಾಲಕ್ರಮೇಣ ಕನ್ನಡ ಭಾಷೆಯ ಮೇಲಿನ ಅಪಾರ ಪ್ರೇಮ ಮತ್ತು ನಾಡು-ನುಡಿಯ ಬಗೆಗಿನ ಪರಮ ಭಕ್ತಿಯ ಸಾಂಸ್ಕೃತಿಕ ಮಹಾಯಜ್ಞವಾಗಿ ಮಾರ್ಪಟ್ಟಿತು. ಇಷ್ಟೇ ಅಲ್ಲದೇ ಅವರು ಚಿತ್ರದುರ್ಗ ದರ್ಶಿನಿ ಮತ್ತು ಐತಿಹಾಸಿಕ ಚಿತ್ರದುರ್ಗ ಪುಸ್ತಕ ಗಳನ್ನು ರಚಿಸಿದ್ದಾರೆ.
ಅವಿಭಜಿತ ಚಿತ್ರದುರ್ಗ ಜಿಲ್ಲೆಯಾಗಿದ್ದಾಗ (ಚಿತ್ರದುರ್ಗ ಮತ್ತು ದಾವಣಗೆರೆ ಒಟ್ಟಾಗಿದ್ದ ಸಂದರ್ಭದಲ್ಲಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕೆ. ವೆಂಕಣ್ಣಾಚಾರ್ ಅವರು ಸುಮಾರು 8 ರಿಂದ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಂದಿನ ಸಚಿವರಾಗಿದ್ದ ರವೀಂದ್ರನಾಥ್ ಅವರ ಅವಧಿಯಲ್ಲಿ ಪಿಯು ಕಾಲೇಜಿನಿಂದ ಡೆಪ್ಯುಟೇಶನ್ ಮೇಲೆ ಇಲಾಖೆಗೆ ನಿಯೋಜನೆಗೊಂಡಿದ್ದ ಅವರು, ನಿವೃತ್ತಿಯವರೆಗೂ ಅದೇ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಗಮನಾರ್ಹ ಕೆಲಸ ಮಾಡಿದ್ದರು. ಅವರ ಅಧಿಕಾರಾವಧಿಯಲ್ಲಿ ಎರಡೂ ಜಿಲ್ಲೆಗಳಲ್ಲಿ ನೂರಾರು ಅಧಿಕೃತ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ದಾವಣಗೆರೆಯ ‘ಕಲಾಕುಂಚ’ ಸೇರಿದಂತೆ ಹಲವಾರು ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಇವರು ಅಡಿಪಾಯ ಹಾಕಿಕೊಟ್ಟಿದ್ದರು.
ವೆಂಕಣ್ಣಾಚಾರ್ ಅವರು ರಾಜ್ಯಶಾಸ್ತ್ರ ಉಪನ್ಯಾಸಕರಾಗಿದ್ದರೂ, ಹೆಣ್ಣು ಮಕ್ಕಳ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಸ್ವತಃ ಹಾಡು ಮತ್ತು ಸಂಗೀತ ತರಬೇತಿ ನೀಡುತ್ತಿದ್ದರು. ಕನ್ನಡ ಗೀತೆಗಳನ್ನು ಕಲಿಸಿ ನೂರಾರು ವಿದ್ಯಾರ್ಥಿನಿಯರನ್ನು ಗಾಯಕಿಯರನ್ನಾಗಿ ರೂಪಿಸಿದ್ದರು. ಅವರ ಬಳಿ ಕಲಿತ ಅನೇಕರು ಪ್ರಸ್ತುತ ರಾಜ್ಯದ ವಿವಿಧೆಡೆ ಶಿಕ್ಷಕಿಯರಾಗಿ ಹಾಗೂ ಕಲಾವಿದೆಯರಾಗಿ ಗುರುತಿಸಿಕೊಂಡಿದ್ದಾರೆ.
ರಾಷ್ಟ್ರೀಯ ಹಬ್ಬಗಳೆಂದರೆ ಕೇವಲ ಸಭೆ, ಧ್ವಜಾರೋಹಣ, ಪರೇಡ್ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳ ಸರಣಿಯಲ್ಲ. ಅವು ನಾಡಿನ ಇತಿಹಾಸ, ತ್ಯಾಗ-ಬಲಿದಾನಗಳ ಸ್ಮರಣೆ, ಭಾರತ ಸಂವಿಧಾನದ ಮೌಲ್ಯಗಳು ಹಾಗೂ ಅಖಂಡ ರಾಷ್ಟ್ರೀಯತೆಯ ಭಾವನೆಗಳನ್ನು ಯುವ ಪೀಳಿಗೆಯ ರಕ್ತಗತವಾಗಿಸುವ ಪವಿತ್ರ ಸಂದರ್ಭಗಳು. ಈ ಗಂಭೀರ ಕ್ಷಣಗಳನ್ನು ಜನಸಾಮಾನ್ಯರಿಗೆ ಅತ್ಯಂತ ಆಪ್ತವಾಗಿ ತಲುಪಿಸಿದ ಶ್ರೇಯಸ್ಸು ವೆಂಕಣ್ಣಾಚಾರ್ ಅವರಿಗೆ ಸಲ್ಲುತ್ತದೆ. ಇವರ ಪ್ರತಿಯೊಂದು ಮಾತಿನಲ್ಲೂ ದೇಶಭಕ್ತಿಯ ಮಿಡಿತವಿರುತ್ತಿತ್ತು ಮತ್ತು ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಅಪೂರ್ವ ಕಲೆ ಇವರಿಗಿತ್ತು.
ವೆಂಕಣ್ಣಾಚಾರ್ ಅವರ ಮಾತುಗಳಲ್ಲಿ ಭಾಷೆಯ ಪ್ರೌಢಿಮೆಯಿತ್ತು, ಪದಗಳ ಜೋಡಣೆಯಲ್ಲಿ ಕಾವ್ಯದ ಲಯವಿತ್ತು, ಧ್ವನಿಯಲ್ಲಿ ಅಪ್ರತಿಮ ತೇಜಸ್ಸಿತ್ತು. ಮೈದಾನದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕುತ್ತಿದ್ದ ಎನ್ಸಿಸಿ, ಸೇವಾದಳ, ಸ್ಕೌಟ್ಸ್-ಗೈಡ್ಸ್ ಮತ್ತು ಶಾಲಾ ವಿದ್ಯಾರ್ಥಿಗಳ ಪಥಸಂಚಲನವನ್ನು ವರ್ಣಿಸುವಾಗ ಅವರ ಧ್ವನಿಯಲ್ಲಿ ನವೋತ್ಸಾಹ ಪುಟಿದೇಳುತ್ತಿತ್ತು. ವಿವಿಧ ಕಲಾತಂಡಗಳ ಜಾನಪದ ನೃತ್ಯ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರೇಕ್ಷಕರ ಎದುರು ಜೀವಂತ ದೃಶ್ಯಕಾವ್ಯದಂತೆ ನಿಲ್ಲಿಸುತ್ತಿದ್ದರು. ವೇದಿಕೆಗೆ ಬರುವ ಅತಿಥಿಗಳ ಪರಿಚಯವನ್ನೂ ಕೇವಲ ಸಂಪ್ರದಾಯಬದ್ಧ ವಾಕ್ಯಗಳಿಗೆ ಸೀಮಿತಗೊಳಿಸದೆ, ಅವರ ಸಾಧನೆ ಮತ್ತು ಸಮಾಜಮುಖಿ ಕೊಡುಗೆಯನ್ನು ಅತ್ಯಂತ ಗೌರವಯುತವಾಗಿ ಜನರಿಗೆ ದಾಟಿಸುತ್ತಿದ್ದರು.
ಮೈಕ್ರೋಫೋನ್ ಮುಂದೆ ನಿಲ್ಲುವ ಮುನ್ನ ಅವರು ನಡೆಸುತ್ತಿದ್ದ ಪೂರ್ವಸಿದ್ಧತೆ ಇಂದಿನ ಪೀಳಿಗೆಗೆ ದೊಡ್ಡ ಮಾರ್ಗದರ್ಶಿ. ಮಾಹಿತಿ ಸಂಗ್ರಹ, ದಿನದ ಮಹತ್ವದ ಕುರಿತಾದ ನಿಖರ ಅಧ್ಯಯನ, ಸಂದರ್ಭಕ್ಕೆ ತಕ್ಕಂತೆ ಹೊಸ ಪದಪುಂಜಗಳ ಬಳಕೆ ಮತ್ತು ಸಮಯಪ್ರಜ್ಞೆ ಅವರ ವೃತ್ತಿಬದ್ಧತೆಯ ಹೆಗ್ಗುರುತುಗಳಾಗಿದ್ದವು. ಹೀಗಾಗಿ ಅವರ ಧ್ವನಿ ಕೇವಲ ವಿವರಣೆಯಾಗಿ ಉಳಿಯದೆ, ಸಭಿಕರಿಗೆ ಅಪಾರ ಜ್ಞಾನ, ಭಾಷಾ ಸೊಬಗು ಮತ್ತು ಚಿಂತನೆಗಳನ್ನು ಉಣಬಡಿಸುವ ಸಾಹಿತ್ಯಿಕ ರಸದೌತಣವಾಗಿ ಮಾರ್ಪಡುತ್ತಿತ್ತು.
ಚಿತ್ರದುರ್ಗದ ಹಳೆಯ ಮಾಧ್ಯಮಿಕ ಶಾಲಾ ಮೈದಾನದಿಂದ ಹಿಡಿದು, ಐತಿಹಾಸಿಕ ಒನಕೆ ಓಬವ್ವ ಕ್ರೀಡಾಂಗಣ, ಅಲ್ಲಿಂದ ಸರ್ಕಾರಿ ವಿಜ್ಞಾನ ಕಾಲೇಜಿನ ವಿಶಾಲ ಮೈದಾನದವರೆಗೆ ಹಲವು ಸ್ಥಳಗಳು ಬದಲಾದವು. ಕಾಲದ ಪ್ರವಾಹದಲ್ಲಿ ರಾಜಕೀಯ ಮುಖಂಡರು, ಆಡಳಿತಾಧಿಕಾರಿಗಳು ಹಾಗೂ ಪ್ರೇಕ್ಷಕರ ತಲೆಮಾರುಗಳೇ ಬದಲಾದವು. ಆದರೆ ನಾಲ್ಕು ದಶಕಗಳ ಕಾಲ ಆ ಮೈದಾನಗಳಲ್ಲಿ ಅನುರಣಿಸಿದ ವೆಂಕಣ್ಣಾಚಾರ್ ಅವರ ಕಂಚಿನ ಕಂಠ, ಉತ್ಸಾಹದ ಚಿಲುಮೆ ಹಾಗೂ ಮಾತಿನ ಗತ್ತು ಮಾತ್ರ ಕಿಂಚಿತ್ತೂ ಬದಲಾಗಲಿಲ್ಲ. ಅವರು ಮೈದಾನಕ್ಕೆ ಬಂದು ಮೈಕ್ ಹಿಡಿದರೆ ಸಾಕು, ಇಡೀ ಆವರಣವೇ ಮಂತ್ರಮುಗ್ಧವಾಗಿ ಸ್ತಬ್ಧವಾಗುತ್ತಿತ್ತು.
ಕೆಲವು ಧ್ವನಿಗಳು ಕಿವಿಗೆ ಬಿದ್ದು ಗಾಳಿಯಲ್ಲಿ ತೇಲಿಹೋಗುತ್ತವೆ; ಆದರೆ ಕೆಲವೇ ಕೆಲವು ಧ್ವನಿಗಳು ಹೃದಯದ ಕದ ತಟ್ಟಿ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿಬಿಡುತ್ತವೆ. ಕೆ. ವೆಂಕಣ್ಣಾಚಾರ್ ಅವರ ಕಂಠಸಿರಿ ಅಂತಹ ಅಪರೂಪದ ಸಾಲಿಗೆ ಸೇರಿದ್ದು. ಅವರದ್ದು ಕೇವಲ ಒಬ್ಬ ನಿರೂಪಕನ ವೃತ್ತಿಜೀವನವಲ್ಲ; ಸಾರ್ವಜನಿಕ ಸಮಾರಂಭಗಳಲ್ಲಿ ಕನ್ನಡ ಭಾಷೆಯ ಗಾಂಭೀರ್ಯ, ಶ್ರೀಮಂತಿಕೆ ಮತ್ತು ಸೊಬಗನ್ನು ಜೀವಂತವಾಗಿರಿಸಿದ ನಿಸ್ವಾರ್ಥ ಸಾಂಸ್ಕೃತಿಕ ತಪಸ್ಸು. ಕೋಟೆನಾಡಿನ ಇತಿಹಾಸದಲ್ಲಿ ಅವರ ಹೆಸರು ಮತ್ತು ಧ್ವನಿ ಸದಾ ಕಾಲ ಹಸಿರಾಗಿರುತ್ತದೆ.













