ಸುದ್ದಿಒನ್, ಚಿತ್ರದುರ್ಗ, ನವೆಂಬರ್. 01 : ಜಿಲ್ಲೆಯ ಜನಸಾಮಾನ್ಯರಿಗೆ ಸ್ಥಳೀಯ ಮಟ್ಟದಲ್ಲೇ ಸುಧಾರಿತ ಹಾಗೂ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯು (CMCRI) ವಿವಿಧ ವಿಭಾಗಗಳ ಅತಿ ವಿಶೇಷಜ್ಞ (Super-Specialty) ಸಲಹೆಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಂಸ್ಥೆಯ 5ನೇ ಹಣಕಾಸು ಸಮಿತಿ ಸಭೆಯ ನಡವಳಿಗಳು ಮತ್ತು ಅನುಮೋದನೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಸಾರ್ವಜನಿಕರು ಗಂಭೀರ ಕಾಯಿಲೆಗಳ ಉನ್ನತ ಚಿಕಿತ್ಸೆಗಾಗಿ ಬೆಂಗಳೂರು, ಮಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆಯಿದೆ. ಇದರಿಂದ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಪ್ರಯಾಣ ಹಾಗೂ ಚಿಕಿತ್ಸಾ ವೆಚ್ಚ ಭರಿಸುವುದು ಭಾರೀ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಈ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ರೋಗಿ-ಕೇಂದ್ರಿತ ಆರೋಗ್ಯ ಸೇವೆಯನ್ನು ಸುಧಾರಿಸಲು ಸಂಸ್ಥೆಯು ಪ್ರಮುಖ ವಿಭಾಗಗಳ ಸೇವೆಗಳನ್ನು ವಿಸ್ತರಿಸಲು ಮುಂದಾಗಿದೆ.
ಈ ಉಪಕ್ರಮದ ಭಾಗವಾಗಿ ಹೃದ್ರೋಗ ತಜ್ಞರು, ನರವಿಜ್ಞಾನಿ, ನರಶಸ್ತ್ರಚಿಕಿತ್ಸಕ, ಮೂತ್ರಪಿಂಡಶಾಸ್ತ್ರಜ್ಞ, ನವಜಾತ ಶಿಶು ತಜ್ಞರು, ಕ್ಯಾನ್ಸರ್ ತಜ್ಞರು, ಕ್ಯಾನ್ಸರ್ ಶಸ್ತ್ರಚಿಕಿತ್ಸಕರು ಹಾಗೂ ಮನೋವೈದ್ಯರ ಸಲಹೆಗಾರರ ಹುದ್ದೆಗಳನ್ನು ಭೇಟಿ ಅಥವಾ ಸಮಾಲೋಚನೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾಗುವ ಸಲಹೆಗಾರರಿಗೆ ಪ್ರತಿ ದಿನದ ಭೇಟಿಗೆ ರೂ. 10,000/- ಗೌರವಧನ ನಿಗದಿಪಡಿಸಲಾಗಿದ್ದು, ತಿಂಗಳಿಗೆ ಕನಿಷ್ಠ 4 ಭೇಟಿಗಳು ಕಡ್ಡಾಯವಾಗಿರುತ್ತವೆ. ಇದರೊಂದಿಗೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನವೂ ದೊರೆಯಲಿದೆ.
ಅರ್ಜಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ವಿವರವಾದ ಬಯೋಡಾಟಾ, ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಪ್ರಮಾಣಪತ್ರಗಳನ್ನು deancmcri@gmail.com ಅಥವಾ ms.cmcri@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.











