Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ದಲಿತ ಮುಖಂಡ ಎಂ. ಜಯಣ್ಣ ಸ್ಮಾರಕ ನಿರ್ಮಾಣಕ್ಕೆ ವಿವಿಧ ಸಂಘಟನೆಗಳ ಒತ್ತಾಯ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 30 : ದಲಿತ ಮುಖಂಡ ಎಂ.ಜಯಣ್ಣನವರ ಹೋರಾಟ ಗುರುತಿಸಿ ಅವರ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡಲು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ದಲಿತ ಮುಖಂಡ ಬಿ.ರಾಜಪ್ಪ ಜೆಜೆ.ಹಟ್ಟಿ ತಿಳಿಸಿದರು.

ಆರು ವರ್ಷಗಳ ಹಿಂದೆ ನಿಧನರಾದ ಎಂ.ಜಯಣ್ಣನವರ ಸ್ಮಾರಕ ಭವನ ನಿರ್ಮಾಣ ಕುರಿತು ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

1977-78 ದಶಕದಲ್ಲಿ ಐದು ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದಾಗ ಅವರ ಪರ ಹೋರಾಟಕ್ಕೆ ಇಳಿದ ಎಂ.ಜಯಣ್ಣನವರು ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಗಾಗಿ ಸಾಕಷ್ಟು ಚಳುವಳಿ ನಡೆಸಿದರು. ಬಿ.ಕೃಷ್ಣಪ್ಪನವರ ಅನುಯಾಯಿಯಾಗಿದ್ದ ಎಂ.ಜಯಣ್ಣ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಎಲ್ಲಿಯೇ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದಾಗ ನಿಸ್ವಾರ್ಥವಾಗಿ ಹೋರಾಟ ಮಾಡುತ್ತಿದ್ದರು. ನಗರದಿಂದ ಎಂಟು ಕಿ.ಮೀ. ದೂರದಲ್ಲಿರುವ ಕ್ಯಾದಿಗೆರೆ ಹತ್ತಿರ ಜೈಹಿಂದ್ ಹೋಟೆಲ್ ಹಿಂಭಾಗವಿರುವ ಅವರ ಸಮಾಧಿಯನ್ನು ಸ್ಮಾರಕ ಭವನವಾಗಿ ನಿರ್ಮಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಈ.ಮಹೇಶ್‍ಬಾಬು ಮಾತನಾಡಿ ಎಂ.ಜಯಣ್ಣನವರ ಸಮಾಧಿಯನ್ನು ಸ್ಮಾರಕ ಮಾಡಲು ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಮೊದಲು ಅದನ್ನು ನಿವಾರಿಸಿಕೊಳ್ಳಬೇಕಾದರೆ ಟ್ರಸ್ಟ್ ಆಗಬೇಕು. ಆಗ ಸರ್ಕಾರದಿಂದ ಟ್ರಸ್ಟ್‍ಗೆ ಹಣ ಬರುತ್ತದೆ. ಟಿಪ್ಪುಸುಲ್ತಾನ್ ಬಗ್ಗೆ ಎಂ.ಜಯಣ್ಣ ಹಾಗೂ ಮುರುಘರಾಜೇಂದ್ರ ಒಡೆಯರ್‍ರವರಿಗೆ ಅಪಾರ ಅಭಿಮಾನವಿತ್ತು. ಈಗ ಅವರಿಬ್ಬರು ಜೀವಂತವಾಗಿಲ್ಲ. ಸಮಾಧಿಯಿರುವ ಜಮೀನಿನ ಸಮಸ್ಯೆ ಬಗೆಹರಿಸಿಕೊಳ್ಳುವತ್ತ ಗಮನ ಕೊಡಬೇಕೆಂದು ಸಲಹೆ ನೀಡಿದರು.

ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿದ್ದ ಎಂ.ಜಯಣ್ಣವರ ಹೋರಾಟವನ್ನು ರಾಜ್ಯಾದ್ಯಂತ ಗುರುತಿಸಲಾಗಿತ್ತು. ಇವರ ಜೊತೆ ಮುರುಘರಾಜೇಂದ್ರ ಒಡೆಯರ್ ಕೈಜೋಡಿಸುತ್ತಿದ್ದುದರಿಂದ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತಿತ್ತು. ಹಾಸ್ಟೆಲ್ ನೌಕರರು, ವಿದ್ಯಾರ್ಥಿಗಳು, ಪೌರ ಕಾರ್ಮಿಕರ ಸಮಸ್ಯೆಗಳ ವಿರುದ್ದ ಹೋರಾಡಿ ರಾಜ್ಯ ಸರ್ಕಾರದ ಗಮನ ಸೆಳೆಯುತ್ತಿದ್ದ ಎಂ.ಜಯಣ್ಣನವರ ಸಮಾಧಿ ಸ್ಮಾರಕ ಭವನವಾಗಿ ನಿರ್ಮಾಣವಾಗಲೇಬೇಕು. ಅಲ್ಲಿ ವಿಚಾರ ಸಂಕಿರಣ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದರು.

ಕಾರ್ಮಿಕರ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ನಾಗರಾಜ್ ಮಾತನಾಡುತ್ತ ಎಂ.ಜಯಣ್ಣ ಕೇವಲ ದಲಿತರಿಗಷ್ಟೆ ಸೀಮಿತವಾಗಿರಲಿಲ್ಲ. ಎಲ್ಲಾ ಜಾತಿ ಧರ್ಮಗಳ ಪ್ರೀತಿ ವಿಶ್ವಾಸ ಗಳಿಸಿದ್ದರು. ಪರಿಶಿಷ್ಟರ ಮೇಲೆ ಎಲ್ಲಿಯೇ ದೌರ್ಜನ್ಯ ನಡೆದರೆ ಹೋರಾಟಕ್ಕೆ ಮುಂಚೂಣಿಯಲ್ಲಿರುತ್ತಿದ್ದರು. ಬಿ.ಕೃಷ್ಣಪ್ಪನವರ ಸಮಕಾಲೀನರಾಗಿದ್ದ ಜಯಣ್ಣನವರ ಸಮಾಧಿ ಸ್ಮಾರಕ ಭವನವಾದರೆ ನಿಜವಾಗಿಯೂ ಅವರ ಹೋರಾಟವನ್ನು ಗೌರವಿಸಿದಂತಾಗುತ್ತದೆಂದು ಹೇಳಿದರು.

ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ ಮಾತನಾಡಿ ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಬೇಕೆಂದು ತಮ್ಮ ಜೀವನವನ್ನೇ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ಅಂತಹ ಮಹಾನ್ ಹೋರಾಟಗಾರನ ಸಮಾಧಿಯನ್ನು ಸ್ಮಾರಕವಾಗಿ ನಿರ್ಮಿಸುವತ್ತ ಸರ್ಕಾರ ಕಾಳಜಿ ವಹಿಸುವಂತೆ ಒತ್ತಾಯಿಸಿದರು.

ಜಾನಪದ ಜಾಗೃತಿ ಪರಿಷತ್ ರಾಜ್ಯಾಧ್ಯಕ್ಷ ಹೆಚ್.ಪ್ಯಾರೆಜಾನ್ ಮಾತನಾಡುತ್ತ ಎಂ.ಜಯಣ್ಣನವರ ಹೋರಾಟವನ್ನು ಎಲ್ಲರೂ ಗಮನಿಸಿದ್ದಾರೆ. ರಾಜಕೀಯದಲ್ಲಿ ಅವರಿಗೆ ಎಂದೋ ಅಧಿಕಾರ ಸಿಗಬೇಕಿತ್ತು. ದುರಾದೃಷ್ಟವಶಾತ್ ಅಧಿಕಾರ ಕೈಹಿಡಿಯಲಿಲ್ಲ. ಅದೊಂದು ಕೊರಗು ಅವರಲ್ಲಿತ್ತು. ಕ್ಯಾದಿಗೆರೆ ಸಮೀಪವಿರುವ ಅವರ ಸಮಾಧಿಯನ್ನು ಸ್ಮಾರಕವನ್ನಾಗಿಸಿದರೆ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆಂದು ನುಡಿದರು.

ಕಾರ್ಮಿಕರ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಹನುಮಂತಪ್ಪ, ವಿ.ಪ್ರಕಾಶ್, ದಲಿತ ಮುಖಂಡ ಕೆ.ರುದ್ರಮುನಿ, ವಾಲ್ಮೀಕಿ ಸಮಾಜದ ಪಿ.ಸುರೇಶ್, ಜಾನಪದ ಜಾಗೃತಿ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ಕೃಷ್ಣಪ್ಪ, ಟಿ.ಆರ್.ತಿಪ್ಪೇಸ್ವಾಮಿ, ಮೋಹನ್, ಕೆಂಚಣ್ಣ, ಹೊನ್ನೂರಪ್ಪ ಇನ್ನು ಅನೇಕರು ಸಭೆಯಲ್ಲಿ ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now