ಸುದ್ದಿಒನ್, ಶಿವಮೊಗ್ಗ, ಅಕ್ಟೋಬರ್. 29 : ರೇಡಿಯೋ ಶಿವಮೊಗ್ಗ 90.8ಎಫ್.ಎಂ ವತಿಯಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದ್ದು ಕನ್ನಡ ಮಾಧ್ಯಮಲೋಕದಲ್ಲಿ ಪ್ರಪ್ರಥಮ ಬಾರಿಗೆ ದಿನದ 24 ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಕನ್ನಡ ನಾಡು, ನುಡಿ, ಕಲೆ-ವಾಸ್ತುಶಿಲ್ಪ, ಸಾಹಿತ್ಯ ಹೀಗೆ ಕನ್ನಡದ ವಿಚಾರಗಳ ಬಗ್ಗೆ ನಿಲಯದ ಆರ್.ಜೆ ಗಳು ಮಾತನಾಡಲಿದ್ದಾರೆ. ನವಂಬರ್ 1 ರ ಬೆಳಗ್ಗೆ 6.00 ರಿಂದ ಮರುದಿನ ಬೆಳಗ್ಗೆ 6.00 ರ ವರೆಗೆ ನಿರಂತರ ನೇರಪ್ರಸಾರ ನಡೆಯಲಿದೆ. ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಿಂದಲೂ ಈ ಕಾರ್ಯಕ್ರಮಕ್ಕೆ ಕೇಳುಗರು ಕಾಲ್ ಮಾಡಿ ರಾಜ್ಯೋತ್ಸವದ ಕುರಿತು ಮಾತನಾಡಬಹುದು.
24 ಗಂಟೆಗಳ ಕಾಲ ಸಿ.ಚೇತನ್ ಕುಮಾರ್ ಇವರು ನೇರಪ್ರಸಾರದಲ್ಲಿ ಇರಲಿದ್ದಾರೆ. ಇವರು ಚಿತ್ರದುರ್ಗದ ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೊತೆಗೆ ನಿಲಯದ ಆರ್.ಜೆ ಗಳಾದ ಶ್ವೇತಾ, ಮಹಾಲಕ್ಷ್ಮಿ, ಪವಿತ್ರದಿನೇಶ್, ಅರ್ಪಿತ, ರಕ್ಷಿತಾ, ಶ್ರೀಧರ್ ಇವರೆಲ್ಲರೂ ಕನ್ನಡ ರಾಜಮನೆತನಗಳ ಬಗ್ಗೆ, ಭಾಷೆ ಬೆಳೆದು ಬಂದ ಬಗೆ, ಕನ್ನಡ ಸಾಹಿತ್ಯ, ಕವಿಗಳು, ಕನ್ನಡ ನಾಡಿನ ಪರಿಸರ, ಪ್ರೇಕ್ಷಣೀಯ ಸ್ಥಳಗಳು, ಕ್ರೀಡೆ, ರಂಗಭೂಮಿ, ಸಿನಿಮಾ, ಕಲೆ-ವಾಸ್ತುಶಿಲ್ಪ, ಸಮೂಹ ಮಾಧ್ಯಮ, ಕನ್ನಡದ ಸಾಧಕರು ಹೀಗೆ ಕನ್ನಡದ ಬಗೆಗೆ, ಕನ್ನಡಿಗರ ಬಗ್ಗೆ ಮಾತನಾಡಲಿದ್ದಾರೆ.
ಕನ್ನಡದ ಬಗೆಗೆ ಪ್ರತೀ 1 ಗಂಟೆಗೆ ಕೇಳುವ ಪ್ರಶ್ನೆಗೆ ಉತ್ತರ ನೀಡಿ ಬಹುಮಾನ ಗೆಲ್ಲಬಹುದು. ದಿನದ ಎಲ್ಲಾ ಪ್ರಶ್ನೆಗಳಿಗೂ ಹೆಚ್ಚು ಉತ್ತರ ನೀಡುವವರಿಗೆ ವಿಶೇಷ ಬಹುಮಾನ ಸಿಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಲು 9686096279 ಗೆ ಕರೆ ಮಾಡಬಹುದು. ಸಾಮಾನ್ಯ ಎಫ್.ಎಂ ಜೊತೆಗೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಸಿಗುವ ರೇಡಿಯೋ ಶಿವಮೊಗ್ಗ 90.8 ಎಫ್.ಎಂ ಆಪ್ ಮೂಲಕವೂ ಕಾರ್ಯಕ್ರಮ ಆಲಿಸಬಹುದು.
ಈ ಎಲ್ಲಾ ಕಾರ್ಯಕ್ರಮಗಳಿಗೂ ನಿಲಯದ ನಿರ್ದೇಶಕರಾದ ಜನಾರ್ಧನ್.ಜಿ.ಎಲ್, ರಾಜ್ಯ ಸಮುದಾಯ ಬಾನುಲಿಗಳ ಸಂಘದ ರಾಜ್ಯಾಧ್ಯಕ್ಷ ಗುರುಪ್ರಸಾದ್, ನಿಲಯದ ಕಾರ್ಯಕ್ರಮ ಅಧಿಕಾರಿ ಮಂಜುನಾಥ್, ಪತ್ರಕರ್ತ ಹಾಲಸ್ವಾಮಿ.ಆರ್.ಎಸ್ ಇವರ ಮಾರ್ಗದರ್ಶನದಲ್ಲಿ ಮೂಡಿಬರಲಿದೆ. ಎಂದು ಪ್ರಕಟಣೆ ತಿಳಿಸಿದೆ.











