Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾರ್ವಜನಿಕರೇ ಗಮನಿಸಿ : ನವೆಂಬರ್ 1ರಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು

---Advertisement---

ನವದೆಹಲಿ : ಅಕ್ಟೋಬರ್ ಮುಗಿದು ನವೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಹಲವು ಮಹತ್ವದ ನಿಯಮಗಳು ಬದಲಾಗಲಿವೆ. ಈ ಬದಲಾವಣೆಗಳು ಪ್ರತಿಯೊಬ್ಬ ನಾಗರಿಕನ ದಿನನಿತ್ಯದ ಬದುಕು ಮತ್ತು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿವೆ. ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ, ಜಿಎಸ್‌ಟಿ ಸುಧಾರಣೆಗಳು, ಹೆದ್ದಾರಿ ಸಂಚಾರ ನಿರ್ಬಂಧ ಹಾಗೂ ಮೊಬೈಲ್ ಕರೆಗಳ ಹೊಸ ನಿಯಮಗಳು ಸೇರಿದಂತೆ ನವೆಂಬರ್ 1 ರಿಂದ ಜಾರಿಗೆ ಬರಲಿರುವ 5 ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ.

ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ:

ಪ್ರತಿ ತಿಂಗಳ ಮೊದಲ ದಿನದಂತೆ, ನವೆಂಬರ್ 1 ರಂದು ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಲಿವೆ. ಕಳೆದ ಅಕ್ಟೋಬರ್‌ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 62.50 ರೂ. ಹೆಚ್ಚಿಸಲಾಗಿತ್ತು, ಆದರೆ 14 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಈ ಬಾರಿಯೂ ವಾಣಿಜ್ಯ ಹಾಗೂ ಗೃಹಬಳಕೆಯ ಸಿಲಿಂಡರ್ ದರಗಳ ಜೊತೆಗೆ ವಿಮಾನ ಇಂಧನ (ATF) ದರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

ಜಿಎಸ್‌ಟಿ (GST) ಸಲ್ಲಿಕೆ ನಿಯಮಗಳ ಸರಳೀಕರಣ:

ನವೆಂಬರ್ 1 ರಿಂದ ಜಿಎಸ್‌ಟಿ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳು ಜಾರಿಯಾಗಲಿದ್ದು, ಇದು ವ್ಯಾಪಾರಿಗಳಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಅನುಕೂಲವಾಗಲಿದೆ. ತೆರಿಗೆ ಮರುಪಾವತಿ (Refund) ವಿಳಂಬವನ್ನು ತಪ್ಪಿಸಲು ಆಟೋಮ್ಯಾಟಿಕ್ ರೀಫಂಡ್ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲದೆ, ದಾಖಲೆಗಳ ಹೊರೆ ತಗ್ಗಿಸಲು, ಗ್ರಾಹಕರಿಗೆ ನೇರ ಸೇವೆ ಅಥವಾ ಸರಕುಗಳನ್ನು ಒದಗಿಸುವ 5 ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ವ್ಯಾಪಾರಗಳಿಗೆ ಹೊಸ ರಿಟರ್ನ್ ಸಲ್ಲಿಕೆ ವಿಧಾನ ಜಾರಿಗೆ ಬರಲಿದೆ.

ಮದ್ಯ ಖರೀದಿಗೆ ಡಿಜಿಟಲ್ ಪಾವತಿ ಕಡ್ಡಾಯ (ತಮಿಳುನಾಡು):

ತಮಿಳುನಾಡಿನಲ್ಲಿ ಮದ್ಯ ಪ್ರಿಯರಿಗೆ ಹೊಸ ನಿಯಮ ಎದುರಾಗಲಿದೆ. ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ (TASMAC) ಜಾರಿಗೆ ತಂದಿರುವ ಆದೇಶದಂತೆ, ನವೆಂಬರ್ 1 ರಿಂದ 1,000 ರೂ.ಗಿಂತ ಹೆಚ್ಚಿನ ಮೌಲ್ಯದ ಮದ್ಯ ಖರೀದಿಗೆ ನಗದು ಸ್ವೀಕರಿಸಲಾಗುವುದಿಲ್ಲ. 1,000 ರೂ. ದಾಟಿದರೆ ಕಡ್ಡಾಯವಾಗಿ ಆನ್‌ಲೈನ್ ಅಥವಾ ಡಿಜಿಟಲ್ ಪಾವತಿಯನ್ನೇ ಮಾಡಬೇಕಾಗುತ್ತದೆ.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸರಕು ವಾಹನಗಳಿಗೆ ನಿರ್ಬಂಧ:

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಹೊಸ ಲಿಂಕ್ ರಸ್ತೆಯಲ್ಲಿ ಸಾರಿಗೆ ದಟ್ಟಣೆ ನಿಯಂತ್ರಿಸಲು ಮಹಾರಾಷ್ಟ್ರ ಹೆದ್ದಾರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನವೆಂಬರ್ 1 ರಿಂದ ಈ ಮಾರ್ಗದಲ್ಲಿ ಸರಕು ಸಾಗಣೆ ವಾಹನಗಳು, ಪಿಕಪ್ ವ್ಯಾನ್‌ಗಳು ಹಾಗೂ ಟಾಟಾ ಏಸ್‌ನಂತಹ ಸಣ್ಣ ವಾಣಿಜ್ಯ ವಾಹನಗಳ ಸಂಚಾರವನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ. ಆದರೆ, ಖಾಸಗಿ ಕಾರುಗಳು ಹಾಗೂ ಪ್ರಯಾಣಿಕರ ಬಸ್‌ಗಳಿಗೆ ಸಂಚರಿಸಲು ಅನುಮತಿ ಮುಂದುವರಿಯಲಿದೆ.

ಮೊಬೈಲ್ ಕರೆಗಳಲ್ಲಿ ಕಾಲರ್ ಹೆಸರು ಪ್ರದರ್ಶನ (CNAP):

ಅಪರಿಚಿತ ಕರೆಗಳನ್ನು ಗುರುತಿಸಲು ಟ್ರೂಕಾಲರ್‌ನಂತಹ ಆ್ಯಪ್‌ಗಳ ಮೇಲಿನ ಅವಲಂಬನೆಯನ್ನು ತಪ್ಪಿಸಲು ಕೇಂದ್ರ ದೂರಸಂಪರ್ಕ ಇಲಾಖೆ (DoT) ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಇದರ ಅನ್ವಯ, ನವೆಂಬರ್ 1 ರಿಂದ ಟೆಲಿಕಾಂ ಆಪರೇಟರ್‌ಗಳು ‘ಕಾಲಿಂಗ್ ನೇಮ್ ಪ್ರೆಸೆಂಟೇಶನ್’ (CNAP) ಸೇವೆಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇನ್ಮುಂದೆ ಕರೆ ಸ್ವೀಕರಿಸುವ ಮೊಬೈಲ್ ಪರದೆಯ ಮೇಲೆ ಕರೆ ಮಾಡಿದವರ ಅಧಿಕೃತ ಹೆಸರು ನೇರವಾಗಿ ಪ್ರದರ್ಶನಗೊಳ್ಳಲಿದೆ.

Join WhatsApp

Join Now

Join Telegram

Join Now