Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಹಿರಿಯ ಸಾಹಿತಿ ಬಿ. ತಿಪ್ಪಣ್ಣ ಮರಿಕುಂಟೆ ಅವರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಶ್ರೀ ವಾಲ್ಮೀಕಿ ಪ್ರಶಸ್ತಿ’ ಗರಿ

---Advertisement---

 

ಸುದ್ದಿಒನ್, ​ಚಳ್ಳಕೆರೆ, ಅಕ್ಟೋಬರ್. 25: ಕನ್ನಡ ಸಾರಸ್ವತ ಲೋಕದ ಹಿರಿಯ ಕಥೆಗಾರ, ಚಳ್ಳಕೆರೆ ತಾಲೂಕಿನ ಹೆಮ್ಮೆಯ ಸಾಹಿತಿ ಬಿ. ತಿಪ್ಪಣ್ಣ ಮರಿಕುಂಟೆ ಅವರು ಕರ್ನಾಟಕ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ‘ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಜರುಗಲಿರುವ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.

​ರಾಜ್ಯ ಸರ್ಕಾರ ನೀಡುವ ಈ ಮಹೋನ್ನತ ಪ್ರಶಸ್ತಿಯು ಅತ್ಯಂತ ಮೌಲ್ಯಯುತವಾಗಿದ್ದು, ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ತಲಾ ₹5 ಲಕ್ಷ ನಗದು ಬಹುಮಾನ, 25 ಗ್ರಾಂ ತೂಕದ ಚಿನ್ನದ ಪದಕ ಹಾಗೂ ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗುತ್ತದೆ. ಸಮಾಜ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ ಸರ್ಕಾರ ಈ ಉನ್ನತ ಪುರಸ್ಕಾರವನ್ನು ಅರ್ಪಿಸುತ್ತಿದೆ.

​ದೇವರ ಮರಿಕುಂಟೆ ಗ್ರಾಮದ ಭೋಜಣ್ಣ ಮತ್ತು ರಾಜಮ್ಮ ದಂಪತಿಯ ಏಳನೇ ಪುತ್ರನಾಗಿ ಜನಿಸಿದ ತಿಪ್ಪಣ್ಣ ಮರಿಕುಂಟೆ ಅವರು ಗ್ರಾಮೀಣ ಪರಿಸರದಲ್ಲೇ ಬೆಳೆದು ಜ್ಞಾನಾರ್ಜನೆ ಮಾಡಿದವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಹಾಗೂ ಅಂಬೇಡ್ಕರ್ ಅಧ್ಯಯನ ವಿಷಯದಲ್ಲಿ ಡಿಪ್ಲೊಮಾ ಪಡೆದುಕೊಂಡ ಇವರು, ತಮ್ಮ ಅಧ್ಯಯನಶೀಲತೆಯನ್ನು ಬರವಣಿಗೆಯ ಮೂಲಕ ವಿಸ್ತರಿಸಿಕೊಂಡರು.

​ಬಯಲುಸೀಮೆಯ ಮಣ್ಣಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಸದಾ ಜೀವಂತವಾಗಿಡುವ ಸಂಕಲ್ಪದೊಂದಿಗೆ ತಮ್ಮ ಹುಟ್ಟೂರಿನಲ್ಲೇ ‘ಗ್ರಾಮೀಣ ಸಾಹಿತ್ಯ ಪರಿಷತ್ತು’ ಹುಟ್ಟುಹಾಕಿದರು. ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ಬೆಳೆಗೆರೆ ಕೃಷ್ಣಶಾಸ್ತ್ರಿ, ಡಾ. ಎಚ್.ಎಸ್. ವೆಂಕಟೇಶಮೂರ್ತಿ ಹಾಗೂ ಹನೂರು ಕೃಷ್ಣಮೂರ್ತಿ ಸೇರಿದಂತೆ ನಾಡಿನ ಖ್ಯಾತ ದಿಗ್ಗಜ ಸಾಹಿತಿಗಳನ್ನು ಹಳ್ಳಿಯ ಹೊಸ್ತಿಲಿಗೆ ಕರೆತಂದು, ಗ್ರಾಮೀಣ ಆಸಕ್ತರಿಗೆ ನಿರಂತರ ಸಾಹಿತ್ಯದ ರಸದೌತಣ ಉಣಬಡಿಸಿದ ಹೆಗ್ಗಳಿಕೆ ಇವರ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ.

​ಹಳ್ಳಿಗಾಡಿನ ಬದುಕಿನ ನೈಜ ನೋವು-ನಲಿವು ಹಾಗೂ ಪರಂಪರೆಯನ್ನು ಸೊಗಸಾಗಿ ಕಟ್ಟಿಕೊಟ್ಟಿರುವ ಇವರು, ‘ತಂತ್ರಗಳು’, ‘ಜಾತ್ರೆ’ ಕಥಾಸಂಕಲನಗಳು ಹಾಗೂ ‘ಸುತ್ತು’ ಕಾದಂಬರಿಯ ಮೂಲಕ ಓದುಗರ ಗಮನ ಸೆಳೆದಿದ್ದಾರೆ. ಇದಲ್ಲದೆ ‘ಒಂದು ಊರಿನ ಕತೆ’, ‘ಮಹಾಮೌನಿ’, ‘ದಶರಥ’, ‘ಸ್ವರ್ಗಸುಖ’, ‘ಮಾತು ನನ್ನೋವ್ ಎಲ್ಡೆ’ ಮೊದಲಾದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ತಾವೊಬ್ಬರೇ ಬೆಳೆಯದೆ, ಹಳ್ಳಿಯ ನೂರಾರು ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ವಿಶಾಲ ಮನೋಭಾವ ಇವರ ಸಾಹಿತ್ಯ ಯಾತ್ರೆಯ ವಿಶಿಷ್ಟ ಹೆಗ್ಗುರುತು.

​ಅಕ್ಷರ ಲೋಕದ ಗಣನೀಯ ಸೇವೆಗಾಗಿ ಜಿಲ್ಲಾಡಳಿತದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ. ಅಲ್ಲದೆ, ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ನಾಯಕನಹಟ್ಟಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅತ್ಯುನ್ನತ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಹಿತಿ ಬಿ. ತಿಪ್ಪಣ್ಣ ಮರಿಕುಂಟೆ ಅವರಿಗೆ ಅವರ ಅಭಿಮಾನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗ ಜಿಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ವಿನಯ್. ಎಸ್ ನೇಮಕ

ಚಿತ್ರದುರ್ಗ : ವೀರ ರಾಣಿ ಚೆನ್ನಮ್ಮ ಮಹಿಳಾ ಸಂಘದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಒಂದು ಪಕ್ಷಿಯ ನೋವಿನಿಂದ ಹುಟ್ಟಿದ ಮಹಾಕಾವ್ಯ; ವಾಲ್ಮೀಕಿ ರಾಮಾಯಣದ ರೋಚಕ ಕಥೆ ಇಲ್ಲಿದೆ

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆಂತರಿಕ ಕಿತ್ತಾಟ ಮತ್ತೆ ಮುನ್ನೆಲೆಗೆ: ವೈದ್ಯರ ನಡುವಿನ ಸಮನ್ವಯ ಕೊರತೆಗೆ ಶಾಸಕ ವೀರೇಂದ್ರ ಪಪ್ಪಿ ಕ್ಲಾಸ್

ಬಡ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ತರಬೇಡಿ: ಚಿತ್ರದುರ್ಗ ಆಸ್ಪತ್ರೆಯಲ್ಲಿ ಅಕ್ರಮ ಹಣ ವಸೂಲಿ ಆರೋಪಕ್ಕೆ ಶಾಸಕ ವೀರೇಂದ್ರ ಪಪ್ಪಿ ಗರಂ

ಬಡ ರೋಗಿಗಳಿಂದ ಹಣ ವಸೂಲಿ, ಕಳಪೆ ಊಟದ ದೂರು: ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶಾಸಕ ವೀರೇಂದ್ರ ಪಪ್ಪಿ ಸರ್ಪ್ರೈಸ್ ವಿಸಿಟ್!