Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂಜಿನಿಯರಿಂಗ್ ಅಧ್ಯಯನಕ್ಕೆ ಎ.ಐ. ಅಳವಡಿಕೆ ಅನಿವಾರ್ಯ: ರೋ. ಶಶಿಧರ್ ರಾವ್ ಪ್ರತಿಪಾದನೆ

---Advertisement---

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 24 : ಇಂಜಿನಿಯರಿಂಗ್ ಅಧ್ಯಯನದ ಎಲ್ಲಾ ವಿಭಾಗಗಳ ಮೇಲೆಯೂ ಕೃತಕ ಬುದ್ಧಿಮತ್ತೆಯು ವಿಪುಲ ಪ್ರಭಾವವನ್ನು ಬೀರುತ್ತಿದ್ದು, ಇದರೊಂದಿಗೆ ವಿಶ್ವವಿದ್ಯಾಲಯಗಳು ಹಾಗೂ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು ಹೊಂದಿಕೊಳ್ಳಬೇಕಿರುವುದು ಅನಿವಾರ್ಯ ಎಂದು ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳ ಹಿರಿಯ ತಜ್ಞರೂ ಹಾಗೂ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರೂ ಆದ ರೋ. ಶಶಿಧರ್ ರಾವ್ ತಿಳಿಸಿದರು.

ಚಳ್ಳಕೆರೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಳ್ಳಕೆರೆ ರೋಟರಿ ಕ್ಲಬ್, ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಹಾಗೂ ಚಳ್ಳಕೆರೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಸಿಂಪೋಸಿಯಂ – ಕೃತಕ ಬುದ್ಧಿಮತ್ತೆ: ಜಾಗತಿಕ ಸಾಧ್ಯತೆಗಳು ಮತ್ತು ಸವಾಲುಗಳು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳು ಎಂಬ ವಿಷಯದ ಕುರಿತಾಗಿ ನಡೆದ ವಿಶೇಷ ವಿಚಾರ ಸಂಕಿರಣದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಎ.ಐ. ಪರಿಣಾಮಗಳ ಕುರಿತಾಗಿ ಭಯ ಅಥವಾ ಸಂಚಲನಕಾರಿ ಕಲ್ಪನೆಗಳಿಗಿಂತಾ, ವಾಸ್ತವದ ಅಂಶಗಳ ಅರಿವು ಮುಖ್ಯ.
ಸಾಧ್ಯತೆಗಳು ಹಾಗೂ ಸವಾಲುಗಳು ಎರಡೂ ಎ.ಐ. ಹೊತ್ತು ತಂದಿದ್ದು ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಅಭಿವೃದ್ಧಿ ಹಾಗೂ ಸದ್ಬಳಕೆ ಎಲ್ಲರ ಆದ್ಯತೆಯಾಗಬೇಕು.
ಇಂಜಿನಿಯರಿಂಗ್ ವಿಭಾಗಗಳೆಲ್ಲವೂ ಎ.ಐ. ನ ಪ್ರಭಾವಕ್ಕೆ ಒಳಪಟ್ಟಿದ್ದು, ಎ.ಐ. ಕೌಶಲ್ಯಗಳ ಕಲಿಕೆ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಳ್ಳಕೆರೆ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಎನ್.ಪಿ. ನಾಗರಾಜ ಅವರು ವಹಿಸಿ, ಇಂತಹ ವಿಚಾರ ಸಂಕಿರಣಗಳ ಮೂಲಕವಾಗಿ ವಿದ್ಯಾರ್ಥಿಗಳಿಗೆ ಜಾಗತಿಕ ಹೊಸಾ ಸಾಧ್ಯತೆಗಳ ಆಯಾಮಗಳನ್ನು ಪರಿಚಯಿಸುವ ಶ್ರಮ ಸಾರ್ಥಕವಾಗಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದರ ಅನ್ವಯಿಕ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಚಳ್ಳಕೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಪ್ರೊ. ಎಂ.ಎಂ. ಬೇನಾಲ್ ಅವರು, ಶೈಕ್ಷಣಿಕ ಕ್ಷೇತ್ರ ಹಾಗೂ ಉದ್ಯಮಗಳ ನಡುವಿನ ಸಂಪರ್ಕ ಸೇತುವಾಗಿ ಇಂತಹ ವಿಚಾರ ಸಂಕಿರಣಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗಳ ಮೇಲೆ ಅಪಾರ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ತಂತ್ರಜ್ಞಾನವು ಮೇಲಿಂದ ಮೇಲೆ ಉನ್ನತೀಕರಣಗೊಳ್ಳುತ್ತಾ ಸಾಗುತ್ತಿದ್ದು ಜಾಗತಿಕ ತಂತ್ರಜ್ಞಾನದ ಆಗುಹೋಗುಗಳನ್ನು ತಿಳಿಸುವ ಇಂತಹ ಸಂಪನ್ಮೂಲ ವ್ಯಕ್ತಿಗಳ ಉಪಸ್ಥಿತಿಯ ಸಂಪೂರ್ಣ ಲಾಭವನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಡೆಯಬೇಕೆಂದರು.

ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಭಾಗವಹಿಸಿದ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3160 ಚಿನ್ಮೂಲಾದ್ರಿ ಝೋನ್ ಅಸಿಸ್ಟೆಂಟ್ ಗವರ್ನರ್ ರೋ. ಎಲ್. ಸವಿತಾ ಶಿವಕುಮಾರ್ ರವರು ಭಾರತದ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಕೊಡುಗೆ ದೊಡ್ಡದು.
ತಂತ್ರಜ್ಞಾನ ಹಾಗೂ ನಾವೀನ್ಯತೆಯ ಆಳವಾದ ಪರಿಚಯವನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾಡಿಕೊಡುವ ರೋಟರಿ ಕ್ಲಬ್ ಚಳ್ಳಕೆರೆ, ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಮತ್ತು ಚಳ್ಳಕೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಈ ಮೂರೂ ಸಂಸ್ಥೆಗಳ ಶ್ರಮ ಶ್ಲಾಘನೀಯ ಎಂದರು.

ಚಳ್ಳಕೆರೆ ರೋಟರಿ ಕ್ಲಬ್ ಕಾರ್ಯದರ್ಶಿ ರೋ. ಕೆ.ಎಂ. ಪ್ರಕಾಶ್ ಸ್ವಾಗತಿಸಿದರು. ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಕಾರ್ಯದರ್ಶಿ ರೋ. ಮಂಜುನಾಥ್ ಭಾಗ್ವತ್ ವಂದನಾರ್ಪಣೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಚಳ್ಳಕೆರೆ ರೋಟರಿ ಕ್ಲಬ್, ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಸದಸ್ಯರುಗಳಾದ ರೋ. ಜಯಕುಮಾರ್, ರೋ. ಜಯಪ್ರಕಾಶ್, ರೋ. ತಿಪ್ಪೇಸ್ವಾಮಿ, ರೋ. ಶ್ರೀಧರ್, ರೋ. ಅಜಯ್, ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್ ನ ರೋ. ಶಿವಕುಮಾರ್, ಚಳ್ಳಕೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now