ನವದೆಹಲಿ : ವಿಶ್ವ ಪೋಲಿಯೋ ದಿನವನ್ನು ಪ್ರತಿವರ್ಷ ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಪೋಲಿಯೋ ವಿರುದ್ಧ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ ಜೋನಸ್ ಸಾಲ್ಕ್ ಅವರ ಜನ್ಮದಿನದ ಸ್ಮರಣಾರ್ಥ ರೋಟರಿ ಇಂಟರ್ನ್ಯಾಷನಲ್ ಈ ದಿನವನ್ನು ಆರಂಭಿಸಿತು.
1988 ರಲ್ಲಿ ಆರಂಭವಾದ ಜಾಗತಿಕ ಪೋಲಿಯೋ ನಿರ್ಮೂಲನೆ ಉಪಕ್ರಮದ (GPEI) ಪಾಲುದಾರರೊಂದಿಗೆ ಇದನ್ನು ಆಚರಿಸಲಾಗುತ್ತಿದೆ. ಈ ವರ್ಷ ರೋಟರಿಯು “ಒಂದು ದಿನ, ಒಂದೇ ಗುರಿ: ಪೋಲಿಯೋ ಮುಕ್ತ ಜಗತ್ತು” (One Day. One Focus: Ending Polio) ಎಂಬ ಧ್ಯೇಯವಾಕ್ಯವನ್ನು ನೀಡಿದ್ದು, ಇದುವರೆಗೆ ಸಾಧಿಸಿದ ಪ್ರಗತಿಯನ್ನು ಗುರುತಿಸಲು ಹಾಗೂ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯವಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಕರೆ ನೀಡಿದೆ.
ಪೋಲಿಯೋ ಯಾರಿಗೆ ಅಪಾಯಕಾರಿ ಮತ್ತು ಅದರ ದುಷ್ಪರಿಣಾಮಗಳೇನು?
ಪೋಲಿಯೋ ವೈರಸ್ ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳ ಮೇಲೆ ದಾಳಿ ಮಾಡುತ್ತದೆ. ದೇಹವನ್ನು ಪ್ರವೇಶಿಸುವ ವೈರಸ್ ನರಮಂಡಲಕ್ಕೆ ಹಾನಿ ಉಂಟುಮಾಡಿ ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಸೋಂಕು ತಗುಲಿದ ಪ್ರತಿ 200 ಮಕ್ಕಳಲ್ಲಿ ಒಬ್ಬರು ಶಾಶ್ವತ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವಿರುತ್ತದೆ. ಉಸಿರಾಟದ ಸ್ನಾಯುಗಳು ನಿಷ್ಕ್ರಿಯಗೊಂಡಾಗ ಶೇಕಡಾ 5 ರಿಂದ 10 ರಷ್ಟು ರೋಗಿಗಳು ಸಾವನ್ನಪ್ಪುತ್ತಾರೆ. ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ, ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದು ಮಾತ್ರವೇ ಏಕೈಕ ಪರಿಹಾರವಾಗಿದೆ.
ಜಾಗತಿಕ ಪ್ರಗತಿ ಮತ್ತು ಕೊನೆಯ ಹಂತದ ಅಡೆತಡೆಗಳು
1988 ರಿಂದೀಚೆಗೆ ಜಾಗತಿಕ ಮಟ್ಟದಲ್ಲಿ ಪೋಲಿಯೋ ಪ್ರಕರಣಗಳು ಶೇಕಡಾ 99 ಕ್ಕಿಂತ ಹೆಚ್ಚು ಕಡಿಮೆಯಾಗಿವೆ. ಹಿಂದೆ 125 ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಪ್ರಕರಣಗಳಿದ್ದ ಪರಿಸ್ಥಿತಿ ಬದಲಾಗಿ, ಇಂದು ಕೇವಲ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಮಾತ್ರ ವೈಲ್ಡ್ ಪೋಲಿಯೋವೈರಸ್ ಅಸ್ತಿತ್ವದಲ್ಲಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಮನೆ-ಮನೆಗೆ ತೆರಳಿ ಲಸಿಕೆ ಹಾಕುವ ಅಭಿಯಾನಗಳು ಕಡಿಮೆಯಾದ ಕಾರಣ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಪ್ರಕರಣಗಳು ನಿಯಂತ್ರಣದಲ್ಲಿದ್ದರೂ, ಒಳಚರಂಡಿ ನೀರಿನಲ್ಲಿ ವೈರಸ್ ಪತ್ತೆಯಾಗುತ್ತಿರುವುದು ಆತಂಕ ತಂದಿದೆ. ಜತೆಗೆ, ಲಸಿಕಾಕರಣ ಸರಿಯಾಗಿ ನಡೆಯದ ಪ್ರದೇಶಗಳಲ್ಲಿ ಲಸಿಕೆಯಿಂದ ರೂಪಾಂತರಗೊಳ್ಳುವ ವೈರಸ್ಗಳ (cVDPV) ಬೆದರಿಕೆ ಹಾಗೂ ಜಾಗತಿಕ ಮಟ್ಟದಲ್ಲಿ ಲಸಿಕಾ ಅಭಿಯಾನಕ್ಕೆ ಎದುರಾಗಿರುವ ಆರ್ಥಿಕ ಅನುದಾನದ ಕೊರತೆಯು ಕೊನೆಯ ಹಂತದ ಹೋರಾಟವನ್ನು ಕಷ್ಟಕರವಾಗಿಸಿದೆ.
ಭಾರತ ಪೋಲಿಯೋ ಮುಕ್ತವಾಗಿದ್ದರೂ ಹನಿ ಲಸಿಕೆ ಏಕೆ ಮುಂದುವರಿಯಬೇಕು?
ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣವು 2011 ರ ಜನವರಿ 13 ರಂದು ಪಶ್ಚಿಮ ಬಂಗಾಳದ ಹೌರಾದಲ್ಲಿ ವರದಿಯಾಗಿತ್ತು. ತರುವಾಯ 2014 ರ ಮಾರ್ಚ್ 27 ರಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಒಳಗೊಂಡ ಆಗ್ನೇಯ ಏಷ್ಯಾ ವಲಯವನ್ನು ಪೋಲಿಯೋ ಮುಕ್ತ ಎಂದು ಘೋಷಿಸಿತು. ಆದರೆ, ನೆರೆಹೊರೆಯ ದೇಶಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ವೈರಸ್ ಇನ್ನೂ ಸಕ್ರಿಯವಾಗಿರುವುದರಿಂದ ಭಾರತಕ್ಕೆ ಅಪಾಯ ಸಂಪೂರ್ಣವಾಗಿ ತಪ್ಪಿಲ್ಲ. ನೆರೆಯ ದೇಶಗಳಿಂದ ಸೋಂಕು ಮತ್ತೆ ಹರಡದಂತೆ ತಡೆಯಲು ಭಾರತವು ಗಡಿ ಪ್ರದೇಶಗಳಲ್ಲಿ ನಿರಂತರ ನಿಗಾ ಇರಿಸಿದೆ ಮತ್ತು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಹನಿ ಲಸಿಕೆ ನೀಡುವ ಅಭಿಯಾನಗಳನ್ನು ಮುಂದುವರಿಸಿದೆ.
ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು
ಮಕ್ಕಳ ಲಸಿಕಾ ಕಾರ್ಡ್ ಅನ್ನು ನಿಯಮಿತವಾಗಿ ಪರಿಶೀಲಿಸಿ, ವೈದ್ಯರು ಅಥವಾ ಆರೋಗ್ಯ ಕೇಂದ್ರದ ಮಾರ್ಗದರ್ಶನದಂತೆ ಎಲ್ಲಾ ಡೋಸ್ಗಳನ್ನು ತಪ್ಪದೇ ಪೂರ್ಣಗೊಳಿಸಬೇಕು. ಸರ್ಕಾರ ನಡೆಸುವ ಪಲ್ಸ್ ಪೋಲಿಯೋ ಅಭಿಯಾನಗಳ ಸಂದರ್ಭದಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸಬೇಕು. ಮಗುವಿನ ಕೈ ಅಥವಾ ಕಾಲುಗಳಲ್ಲಿ ಯಾವುದೇ ಹಠಾತ್ ದೌರ್ಬಲ್ಯ ಅಥವಾ ಪಾರ್ಶ್ವವಾಯುವಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸುವುದು ಅತ್ಯಗತ್ಯ.










