ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಕೋಟ್ಯಂತರ ಖಾతాದಾರರಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಲು ಸಜ್ಜಾಗಿದೆ. ಇತ್ತೀಚೆಗಷ್ಟೇ ವಾಟ್ಸಾಪ್ ಸೇವೆಗಳನ್ನು ಪರಿಚಯಿಸಿದ್ದ ಇಪಿಎಫ್ಒ, ಈಗ ಯುಪಿಐ (UPI) ಮೂಲಕ ಪಿಎಫ್ ಹಣವನ್ನು ಕ್ಷಣಾರ್ಧದಲ್ಲಿ ಹಿಂಪಡೆಯುವ (Withdraw) ಹೊಸ ಸೌಲಭ್ಯವನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಡಿಸೆಂಬರ್ನಿಂದ ಆರಂಭವಾಗುವ ನಿರೀಕ್ಷೆ:ಮೂಲಗಳ ಪ್ರಕಾರ, ಇದೇ ಡಿಸೆಂಬರ್ (2026) ಅಂತ್ಯದ ವೇಳೆಗೆ ಯುಪಿಐ ಮೂಲಕ ಪಿಎಫ್ ಹಣ ವಿತ್ಡ್ರಾ ಮಾಡುವ ಸೌಲಭ್ಯ ಆರಂಭವಾಗುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಈ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ (Trials) ನಡೆಯುತ್ತಿದ್ದು, ತಾಂತ್ರಿಕ ದೋಷಗಳನ್ನು ಸರಿಪಡಿಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಅಲ್ಲದೆ, ಇಪಿಎಫ್ಒ 3.0 (EPFO 3.0) ವ್ಯವಸ್ಥೆಯ ಭಾಗವಾಗಿ 2027ರ ಫೆಬ್ರವರಿ ವೇಳೆಗೆ ಈ ಎಲ್ಲಾ ಡಿಜಿಟಲ್ ಸುಧಾರಣೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ ಎಂದು ತಿಳಿದುಬಂದಿದೆ.
ಹೇಗೆ ಕೆಲಸ ಮಾಡುತ್ತದೆ? ಏನೆಲ್ಲಾ ಲಾಭ?

ತಕ್ಷಣದ ಹಣ ವರ್ಗಾವಣೆ: ಹೊಸ ವ್ಯವಸ್ಥೆ ಜಾರಿಯಾದರೆ, ಪಿಎಫ್ ಕ್ಲೈಮ್ಗಾಗಿ ದಿನಗಟ್ಟಲೆ ಕಾಯುವ ಮತ್ತು ಕಾಗದಪತ್ರಗಳ ಅಲೆದಾಟ ತಪ್ಪಲಿದೆ. ಯುಪಿಐ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಪಿಎಫ್ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು, ಎಟಿಎಂ (ATM) ಮೂಲಕ ತಕ್ಷಣವೇ ನಗದು ಪಡೆಯಬಹುದು.
ಭೀಮ್ (BHIM) ಆ್ಯಪ್ ಬಳಕೆ: ಸದಸ್ಯರ ಯುಎಎನ್ (UAN) ಸಂಖ್ಯೆಯನ್ನು ಯುಪಿಐ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಭೀಮ್ ಆ್ಯಪ್ ಮೂಲಕವೇ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಮತ್ತು ಅರ್ಹ ಮೊತ್ತವನ್ನು ವಿತ್ಡ್ರಾ ಮಾಡುವುದು ಸುಲಭವಾಗಲಿದೆ.
ಎಷ್ಟು ಹಣ ವಿತ್ಡ್ರಾ ಮಾಡಬಹುದು?
ಯುಪಿಐ ಮೂಲಕ ಗರಿಷ್ಠ ಎಷ್ಟು ಪ್ರಮಾಣದ ಹಣವನ್ನು ಹಿಂಪಡೆಯಬಹುದು ಎಂಬುದರ ಕುರಿತು ಇಪಿಎಫ್ಒ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಈ ಹಿಂದೆ ಪಿಎಫ್ ಖಾತೆಯಲ್ಲಿ ಶೇ. 75ರಷ್ಟು ಹಣವನ್ನು ಮಾತ್ರ ಭಾಗಶಃ ವಿತ್ಡ್ರಾ ಮಾಡಲು ಅವಕಾಶವಿತ್ತು. ಆದರೆ ಇತ್ತೀಚೆಗೆ ನಡೆದ ಮಂಡಳಿಯ ಸಭೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿಯನ್ನು ಶೇ. 25ರಿಂದ ಶೇ. 10ಕ್ಕೆ ಇಳಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ವಿತ್ಡ್ರಾ ಮಿತಿಯನ್ನು ಶೇ. 90ಕ್ಕೆ ಏರಿಸಲಾಗಿದೆ. ಹೀಗಾಗಿ ಯುಪಿಐ ಮೂಲಕವೂ ಶೇ. 90ರಷ್ಟು ಹಣ ಪಡೆಯಲು ಅವಕಾಶ ಸಿಗಲಿದೆಯೇ ಎಂಬುದು ಸೌಲಭ್ಯ ಆರಂಭವಾದ ಬಳಿಕ ಸ್ಪಷ್ಟವಾಗಲಿದೆ.
ವಾಟ್ಸಾಪ್ ಸೇವೆಯೂ ಲಭ್ಯ:
ಇಪಿಎಫ್ಒ ಇತ್ತೀಚೆಗಷ್ಟೇ ವಾಟ್ಸಾಪ್ ಚಾಟ್ಬಾಟ್ ಹಾಗೂ ವಾಟ್ಸಾಪ್ ಚಾನೆಲ್ ಅನ್ನು ಆರಂಭಿಸಿದೆ. ಇದರ ಮೂಲಕ ಖಾತೆದಾರರು ತಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ, ಪಾಸ್ಬುಕ್ ಡೌನ್ಲೋಡ್ ಹಾಗೂ ಕೊನೆಯ ಐದು ವಹಿವಾಟುಗಳ ವಿವರವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.









