ನವದೆಹಲಿ : ದೇಶದ ಲಕ್ಷಾಂತರ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಇಪಿಎಸ್ ಪಿಂಚಣಿದಾರರ ದೀರ್ಘಕಾಲದ ಬೇಡಿಕೆಯೊಂದು ಮುಂದಿನ ತಿಂಗಳು ಈಡೇರುವ ಸಾಧ್ಯತೆಯಿದೆ. ನೌಕರರ ಕನಿಷ್ಠ ಮಾಸಿಕ ಪಿಂಚಣಿಯನ್ನು ಪ್ರಸ್ತುತ ಇರುವ 1,000 ರೂಪಾಯಿಗಳಿಂದ ಬರೋಬ್ಬರಿ 7,500 ರೂಪಾಯಿಗಳಿಗೆ ಹೆಚ್ಚಿಸಲು ಇಪಿಎಫ್ಒ ಗಂಭೀರ ಚಿಂತನೆ ನಡೆಸಿದೆ.
ವರದಿಯ ಪ್ರಕಾರ, ಗುಜರಾತ್ನ ಗಿರ್ನಲ್ಲಿ ನವೆಂಬರ್ 19 ರಂದು ನಡೆಯಲಿರುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) 240ನೇ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.
ದಶಕದ ಬಳಿಕ ಪಿಂಚಣಿ ಏರಿಕೆ ನಿರೀಕ್ಷೆ

ಕೇಂದ್ರ ಸರ್ಕಾರವು 2014ರ ಸೆಪ್ಟೆಂಬರ್ನಲ್ಲಿ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು 1,000 ರೂಪಾಯಿ ಎಂದು ನಿಗದಿಪಡಿಸಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಹಣದುಬ್ಬರ ಗಣನೀಯವಾಗಿ ಹೆಚ್ಚಾಗಿದ್ದು, ಇಂದಿನ ದುಬಾರಿ ದಿನಗಳಲ್ಲಿ ಕೇವಲ 1,000 ರೂಪಾಯಿಗಳಲ್ಲಿ ಜೀವನ ಸಾಗಿಸುವುದು, ಅದರಲ್ಲೂ ವೈದ್ಯಕೀಯ ವೆಚ್ಚಗಳನ್ನು ಭರಿಸುವುದು ಅಸಾಧ್ಯವಾಗಿದೆ ಎಂದು ಪಿಂಚಣಿದಾರರ ಸಂಘಟನೆಗಳು ಮತ್ತು ಕಾರ್ಮಿಕ ಒಕ್ಕೂಟಗಳು ನಿರಂತರವಾಗಿ ಪ್ರತಿಭಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಪಿಂಚಣಿಯನ್ನು 7,500 ರೂಪಾಯಿಗೆ ಹೆಚ್ಚಿಸುವುದರ ಜೊತೆಗೆ ತುಟ್ಟಿಭತ್ಯೆ (ಡಿಎ) ನೀಡಬೇಕೆಂದು ಅವು ಒತ್ತಾಯಿಸುತ್ತಿವೆ.
ಸರ್ಕಾರದ ಸಕಾರಾತ್ಮಕ ನಡೆ ಮತ್ತು ಮಹತ್ವದ ಸಭೆ
ಇಪಿಎಫ್ಒ ವ್ಯಾಪ್ತಿಗೆ ಒಳಪಡುವ ನೌಕರರ ಕಡ್ಡಾಯ ವೇತನ ಮಿತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ 15,000 ರೂಪಾಯಿಗಳಿಂದ 25,000 ರೂಪಾಯಿಗಳಿಗೆ ಏರಿಸಿರುವುದರಿಂದ ಪಿಂಚಣಿ ಹೆಚ್ಚಳದ ನಿರೀಕ್ಷೆಗಳು ಗರಿಗೆದರಿವೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಕೂಡ ನಿಯಮಗಳ ಪರಿಶೀಲನೆ ನಡೆಯುತ್ತಿದ್ದು, ಪಿಂಚಣಿ ಹೆಚ್ಚಳದ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ಸುಳಿವು ನೀಡಿದ್ದಾರೆ. ದೆಹಲಿಯ ಕೇಂದ್ರ ಕಚೇರಿಯ ಹೊರಗೆ, ಗುಜರಾತ್ನಲ್ಲಿ ಹಲವು ವರ್ಷಗಳ ಬಳಿಕ ನಡೆಯುತ್ತಿರುವ ನವೆಂಬರ್ 19ರ ಈ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇನ್ಮುಂದೆ ಯುಪಿಐ ಮೂಲಕವೇ ಪಿಎಫ್ ಹಣ ವಿತ್ಡ್ರಾ
ಪಿಂಚಣಿದಾರರ ಜೊತೆಗೆ ಇಪಿಎಫ್ಒದ 7.5 ಕೋಟಿಗೂ ಅಧಿಕ ಸಕ್ರಿಯ ಚಂದಾದಾರರಿಗೂ ಮತ್ತೊಂದು ದೊಡ್ಡ ನೆಮ್ಮದಿಯ ಸುದ್ದಿ ಸಿಕ್ಕಿದೆ. ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣ ಪಡೆಯುವುದನ್ನು ಮತ್ತಷ್ಟು ಸರಳಗೊಳಿಸಲು, ಯುಪಿಐ (UPI) ಮೂಲಕವೇ ಹಣ ಹಿಂಪಡೆಯುವ ನೂತನ ವ್ಯವಸ್ಥೆಯನ್ನು ಇಪಿಎಫ್ಒ ಸಿದ್ಧಪಡಿಸುತ್ತಿದೆ. ಬ್ಯಾಂಕುಗಳ ಸಹಯೋಗದೊಂದಿಗೆ ಈಗಾಗಲೇ ಇದರ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಈ ಸೇವೆ ಅಧಿಕೃತವಾಗಿ ಚಂದಾದಾರರಿಗೆ ಲಭ್ಯವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹಣ ಹಿಂಪಡೆಯುವ ನಿಯಮಗಳು
ಹಾಲಿ ಇರುವ ನಿಯಮಾವಳಿಗಳ ಪ್ರಕಾರ, ಚಂದಾದಾರರು ತಮ್ಮ ಒಟ್ಟು ಇಪಿಎಫ್ ಮೊತ್ತದಲ್ಲಿ ಶೇಕಡ 25 ರಷ್ಟನ್ನು ಕಡ್ಡಾಯವಾಗಿ ಖಾತೆಯಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ. ಉಳಿದ ಶೇಕಡ 75 ರಷ್ಟು ಮೊತ್ತವನ್ನು ಶಿಕ್ಷಣ, ಮದುವೆ, ಗೃಹ ನಿರ್ಮಾಣ ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆಯಂತಹ ಅಲ್ಪಾವಧಿಯ ಅಗತ್ಯಗಳಿಗಾಗಿ ಸುಲಭವಾಗಿ ಹಿಂಪಡೆಯಲು ಅವಕಾಶ ಮುಂದುವರಿಯಲಿದೆ.












