Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಗುಡುಗು ಸಹಿತ ಬಿರುಸಿನ ಮಳೆ: ರಸ್ತೆಗಳು ಜಲಾವೃತ, ಅನ್ನದಾತನ ಮೊಗದಲ್ಲಿ ಮಂದಹಾಸ!

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 23 : ಕೋಟೆನಾಡು ಚಿತ್ರದುರ್ಗ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ ದಿಢೀರನೆ ಗುಡುಗು, ಮಿಂಚು ಸಹಿತ ಮಳೆ ಸುರಿದು ಇಡೀ ನಗರಕ್ಕೆ ತಂಪೆರೆದಿದೆ. ಮಧ್ಯಾಹ್ನದಿಂದಲೇ ದಟ್ಟ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸಂಜೆ ಸುಮಾರು 6:45 ರ ಹೊತ್ತಿಗೆ ಮಳೆ ಸುರಿದಿದೆ. ಅಲ್ಪಾವಧಿಯಲ್ಲೇ ರಸ್ತೆಗಳೆಲ್ಲ ಹೊಳೆಯಂತಾಗಿ ಹರಿದ ಪರಿಣಾಮ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸಬೇಕಾಯಿತು.

​

ರಸ್ತೆಗಳಲ್ಲಿ ನಿಂತ ನೀರು: ವಾಹನ ಸವಾರರು, ವ್ಯಾಪಾರಿಗಳ ಪರದಾಟ ಬಿಡಿ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಯಿತು. ನಗರದ ಸಂತೇಪೇಟೆಯಲ್ಲಿ ರಸ್ತೆ ಬದಿಯ ವ್ಯಾಪಾರಿಗಳು ಯಾವುದೇ ಮುನ್ಸೂಚನೆ ಇಲ್ಲದೆ ಬಂದ ಮಳೆಗೆ ಸಿಲುಕಿ ತಮ್ಮ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟರು. ಇನ್ನು ನಗರದ ಪ್ರಮುಖ ತಗ್ಗು ಪ್ರದೇಶಗಳಾದ ಆರ್‌ಟಿಒ ಕಚೇರಿ ಬಳಿಯ ಹೈವೇ ಬ್ರಿಡ್ಜ್, ಮೆದೇಹಳ್ಳಿ ಬ್ರಿಡ್ಜ್ ಹಾಗೂ ತುರುವನೂರು ರಸ್ತೆಯ ರೈಲ್ವೆ ಅಂಡರ್‌ಪಾಸ್ ಸೇತುವೆ ಕೆಳಗೆ ನೀರು ನಿಂತು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು.

​ರೈತ ಸಮುದಾಯದಲ್ಲಿ ಚಿಗುರಿದ ಭರವಸೆ :
ಅಕ್ಟೋಬರ್ 10 ರಂದು ಪ್ರವೇಶಿಸಿದ್ದ ಚಿತ್ತೆ ಮಳೆ ಇಂದಿಗೆ ಮುಕ್ತಾಯಗೊಳ್ಳಲಿದ್ದು, ಶನಿವಾರದಿಂದ ಸ್ವಾತಿ ಮಳೆ ಪ್ರವೇಶಿಸಲಿದೆ. ಈ ಬಾರಿ ಹಿಂಗಾರು ಮಳೆಯ ಆಗಮನ ತಡವಾಗಿದ್ದು, ಮಳೆಯನ್ನೇ ನಂಬಿ ಕುಳಿತಿದ್ದ ಜಿಲ್ಲೆಯ ರೈತರಲ್ಲಿ ಆತಂಕ ಮನೆಮಾಡಿತ್ತು. ಆದರೆ ಇಂದು ಹಲವೆಡೆ ಸುರಿದ ಮಳೆಯು ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಲು ಕಾರಣವಾಗಿದೆ. ಈ ಮಳೆಯಿಂದಾಗಿ ಕಡಲೆ, ಬಿಳಿ ಜೋಳ, ಬಿಳಿ ಕುಸುಮೆ ಹಾಗೂ ಧನಿಯಾ ಮುಂತಾದ ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯಕ್ಕೆ ವೇಗ ಸಿಗಲಿದೆ.

​ರಾಜ್ಯಾದ್ಯಂತ ಮಳೆ ಮುನ್ಸೂಚನೆ: ಎಚ್ಚರಿಕೆ ವಹಿಸಲು ಕರೆ
ಅಕ್ಟೋಬರ್ 25ರ ಭಾನುವಾರದವರೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದರೊಂದಿಗೆ ಉತ್ತರ ಒಳನಾಡಿನ ಹಲವೆಡೆ ಗುಡುಗು-ಮಿಂಚಿನ ಮುನ್ಸೂಚನೆ ನೀಡಲಾಗಿದ್ದು, ಕರಾವಳಿ ಭಾಗದಲ್ಲೂ ಮಳೆಯಾಗುವ ನಿರೀಕ್ಷೆಯಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now