ಚಿತ್ರದುರ್ಗ.ಅ.23: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ ಯೋಜನೆಯ ಸೌಲಭ್ಯ ಪಡೆಯಲು ನೋಂದಾಯಿಸಿಕೊಂಡಿರುವ ಗ್ರಾಹಕರ ಸ್ಥಾವರಗಳ ಮರುಪರಿಶೀಲನಾ ಪ್ರಕ್ರಿಯೆಯಲ್ಲಿ, ಚಿತ್ರದುರ್ಗ ಬೆಸ್ಕಾಂ ವಿಭಾಗ ವ್ಯಾಪ್ತಿಯಲ್ಲಿ ಸುಮಾರು 10,000 ಮನೆಗಳಿಗೆ ಬೀಗ ಹಾಕಿರುವುದು ಹಾಗೂ ಮನೆಗಳು ಖಾಲಿ ಇರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಸ್ಥಾವರಗಳ ಮರುಪರಿಶೀಲನಾ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿರುವುದಿಲ್ಲ. ಮರುಪರಿಶೀಲನೆ ವೇಳೆ ಬೀಗ ಹಾಗೂ ಮನೆ ಖಾಲಿ ಇರುವ ಸ್ಥಾವರಗಳ ಗ್ರಾಹಕರು ಅಕ್ಟೋಬರ್ 31ರ ಒಳಗಾಗಿ ಸಂಬಂಧಪಟ್ಟ ಬೆಸ್ಕಾಂ ಉಪವಿಭಾಗ ಕಚೇರಿಗಳಿಗೆ ಖುದ್ದು ಭೇಟಿ ನೀಡಿ, ಯೋಜನೆಯ ಮರು ಪರಿಶೀಲನಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.










