Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಬರದಿಂದ 62,481 ಕೋಟಿ ರೂ. ಆರ್ಥಿಕ ನಷ್ಟ : ಡಿಸಿಎಂ ಡಾ.ಜಿ.ಪರಮೇಶ್ವರ್ ಮಾಹಿತಿ

ಸಚಿವ ಪರಮೇಶ್ವರ್
---Advertisement---

ಬೆಂಗಳೂರು : ರಾಜ್ಯ ಸರ್ಕಾರವು 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ. ಕೃಷಿ ವೆಚ್ಚದ ಆಧಾರದ ಮೇಲೆ ಲೆಕ್ಕಹಾಕಲಾದ ಒಟ್ಟು ಆರ್ಥಿಕ ನಷ್ಟ ₹62,481.88 ಕೋಟಿಯಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಬರದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಅಡಿಯಲ್ಲಿ ₹20,585.73 ಕೋಟಿ ಪರಿಹಾರವನ್ನು ತುರ್ತಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಕೋರಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.35ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿದ್ದು ಕೇವಲ 551 ಮಿ.ಮೀ. ಮಳೆಯಾಗಿದೆ. ಇದು 1956ರಿಂದೀಚೆಗೆ ದಾಖಲಾದ ಎರಡನೇ ಅತ್ಯಂತ ಕಡಿಮೆ ಹಾಗೂ 1901ರಿಂದೀಚೆಗೆ ದಾಖಲಾದ ಏಳನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ.

ರಾಜ್ಯ ಸರ್ಕಾರವು 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ. ಕೃಷಿ ವೆಚ್ಚದ ಆಧಾರದ ಮೇಲೆ ಲೆಕ್ಕಹಾಕಲಾದ ಒಟ್ಟು ಆರ್ಥಿಕ ನಷ್ಟ ₹62,481.88 ಕೋಟಿಯಾಗಿದೆ.

ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಒಟ್ಟು ₹20,585.73 ಕೋಟಿ ಕೇಂದ್ರದ ನೆರವು ಕೋರಿ ಸಮಗ್ರ ಮನವಿ ಪತ್ರವನ್ನು ಸಲ್ಲಿಸಿದೆ. ಇದರಲ್ಲಿ ಬೆಳೆ ಹಾನಿಯ ಪರಿಹಾರ ಸಹಾಯಧನಕ್ಕಾಗಿ (Input Subsidy) ₹6,128.70 ಕೋಟಿ, 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಜೀವನೋಪಾಯ ಪರಿಹಾರವಾಗಿ ₹12,146.99 ಕೋಟಿ, ಕುಡಿಯುವ ನೀರಿನ ಪೂರೈಕೆಗಾಗಿ ₹1,727 ಕೋಟಿ ಹಾಗೂ ಪಶುಸಂಗೋಪನೆ ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ ₹583.04 ಕೋಟಿ ನೆರವು ಕೋರಲಾಗಿದೆ.

ಬರದಿಂದ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಕ್ಷಣವೇ ಆರ್ಥಿಕ ನೆರವು ಒದಗಿಸುವ ಅಗತ್ಯವಿದೆ. ರೈತರಿಗೆ ದಿನಕ್ಕೆ ₹327ರಂತೆ 60 ದಿನಗಳ ಅವಧಿಗೆ ಜೀವನೋಪಾಯ ಪರಿಹಾರವನ್ನು ಲೆಕ್ಕಹಾಕಲಾಗಿದೆ. ಜಾನುವಾರುಗಳ ರಕ್ಷಣೆಗಾಗಿ 476 ಗೋಶಾಲೆಗಳು ಮತ್ತು 583 ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲು ಸಹ ಕೇಂದ್ರದ ನೆರವು ಬೇಕಾಗಿದೆ.

ಬೆಳೆ ಹಾನಿಯ ಪರಿಹಾರ ಸಹಾಯಧನವನ್ನು ನಿರ್ಧರಿಸಲು ಈಗಲೂ 2015–16ರ ಹಳೆಯ ಕೃಷಿ ಗಣತಿಯ ದತ್ತಾಂಶವನ್ನು ಆಧರಿಸಿ ಪರಿಹಾರ ಲೆಕ್ಕಹಾಕುವುದರಿಂದ ರಾಜ್ಯಕ್ಕೆ ಸುಮಾರು ₹1,669.50 ಕೋಟಿ ನೆರವಿನ ಕೊರತೆಯಾಗುವ ಸಾಧ್ಯತೆಯಿದೆ.

ಆದ್ದರಿಂದ, ಫಲಾನುಭವಿ ರೈತರನ್ನು ನಿಖರವಾಗಿ ಗುರುತಿಸಲು ಹಾಗೂ ಪರಿಹಾರದ ಅಗತ್ಯವನ್ನು ಸಮರ್ಪಕವಾಗಿ ಅಂದಾಜಿಸಲು ಕರ್ನಾಟಕ ಸರ್ಕಾರದ ನವೀಕೃತ ‘ಫ್ರೂಟ್ಸ್’ (FRUITS) ದತ್ತಾಂಶವನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು.

ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಅವಧಿಯಲ್ಲಿಯೂ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಪಿಎಂ ಪೋಷಣ್ (PM POSHAN) ಯೋಜನೆಯಡಿ ಹೆಚ್ಚುವರಿಯಾಗಿ ₹427.20 ಕೋಟಿ ನೆರವು ಬೇಕಾಗಿದೆ. ಅದೇ ರೀತಿ, ದುರ್ಬಲ ವರ್ಗದ ಫಲಾನುಭವಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಡಿ ₹70.96 ಕೋಟಿ ನೆರವು ಒದಗಿಸುವಂತೆ ಮನವಿ ಮಾಡಿದ್ದೇನೆ.

ಕೃಷಿ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ 16ನೇ ಹಣಕಾಸು ಆಯೋಗದ ಅವಧಿಯನ್ನು ಪರಿಗಣಿಸಿ, ಪ್ರಸ್ತುತ ಜಾರಿಯಲ್ಲಿರುವ ಬೆಳೆ ಹಾನಿಯ ಪರಿಹಾರ ಸಹಾಯಧನದ ಮಾನದಂಡಗಳನ್ನು ಪರಿಷ್ಕರಿಸುವ ಅಗತ್ಯವೂ ಇದೆ.

ಕೇಂದ್ರ ಅಂತರ ಸಚಿವಾಲಯಗಳ ಅಧ್ಯಯನ ತಂಡವು (IMCT) ಅಕ್ಟೋಬರ್ 3ರಿಂದ 6ರವರೆಗೆ  ಕರ್ನಾಟಕಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದೆ. ರಾಜ್ಯ ಸರ್ಕಾರ ಸಲ್ಲಿಸಿರುವ ಸಮಗ್ರ ಬರ ಪರಿಹಾರ ಮನವಿ ಪತ್ರದ ಪರಿಶೀಲನೆಯನ್ನು ತ್ವರಿತಗೊಳಿಸುವಂತೆ ಕೋರಿದ್ದೇನೆ.

ಕೇಂದ್ರ ಅಧ್ಯಯನ ತಂಡದ ಶಿಫಾರಸುಗಳನ್ನು ಉನ್ನತ ಮಟ್ಟದ ಸಮಿತಿಗೆ ಶೀಘ್ರ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಅಗತ್ಯ ಆರ್ಥಿಕ ನೆರವನ್ನು ವಿಳಂಬವಿಲ್ಲದೆ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೇನೆ.

ರೈತರ ಕಲ್ಯಾಣದ ವಿಚಾರವು ರಾಜಕೀಯ ಮತ್ತು ಆಡಳಿತಾತ್ಮಕ ಗಡಿಗಳನ್ನು ಮೀರಿದ ಮಹತ್ವವನ್ನು ಹೊಂದಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಆಶಯದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ.

ನಮ್ಮ ದೇಶ ಸದೃಢವಾಗಿರಬೇಕಾದರೆ ಈ ನಾಡಿನ ಅನ್ನದಾತರಾದ ರೈತರ ಶಕ್ತಿಯೇ ಬಹುಮುಖ್ಯ ಆಧಾರವಾಗಿದೆ. ಕೃಷಿ ಆಧಾರಿತ ಜೀವನೋಪಾಯವನ್ನು ರಕ್ಷಿಸಲು ಹಾಗೂ ಬರ ಸಂಕಷ್ಟದಿಂದ ರೈತರನ್ನು ಕಾಪಾಡಲು ಸಕಾಲದಲ್ಲಿ ಆರ್ಥಿಕ ನೆರವು ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Join WhatsApp

Join Now

Join Telegram

Join Now