Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅನನ್ಯ: ದುಡಾ ಆಯುಕ್ತೆ ರೇಣುಕಾ

---Advertisement---

ದಾವಣಗೆರೆ : ರಾಜ್ಯ ಮತ್ತು ದೇಶದ ಆಂತರಿಕ ಭದ್ರತೆ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಹಿರಿದಾದದ್ದು. ಹಗಲಿರಳು, ಚಳಿ-ಮಳೆ ಎನ್ನದೆ, ಹಗಲು-ರಾತ್ರಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗದಿದ್ದರೂ ಅತ್ಯಂತ ಸಮರ್ಪಣಾಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ದಾವಣಗೆರೆ ಹರಿಹರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರೇಣುಕಾ ಅವರು ತಿಳಿಸಿದರು.

ಅವರು ಬುಧವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಛ ಸಲ್ಲಿಸಿ ಮಾತನಾಡಿದರು.

ದಾವಣಗೆರೆ ಜಿಲ್ಲೆಯ ಪೊಲೀಸ್ ಇಲಾಖೆಯು ಜಿಲ್ಲೆಯ ಜನತೆ ಹಾಗೂ ಸಾರ್ವಜನಿಕರೊಂದಿಗೆ ಅತ್ಯುತ್ತಮ ಒಡನಾಟವನ್ನು ಹೊಂದಿದ್ದು, ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ರಿಂಗ್ ರೋಡ್ ಸೇರಿದಂತೆ ನಗರದ ಸಂಚಾರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆ ಕೈಜೋಡಿಸಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ದೇಶದ ರಕ್ಷಣೆಗಾಗಿ ಪ್ರಾಣತೆತ್ತ ವೀರ ಯೋಧರನ್ನು ಸ್ಮರಿಸುವ ದಿನ ಇದಾಗಿದ್ದು, ದೇಶದಲ್ಲಿ 154 ಹಾಗೂ ಕರ್ನಾಟಕದಲ್ಲಿ 5 ವೀರ ಯೋಧರು ಮರಣ ಹೊಂದಿದ್ದಾರೆ  ಎಂದರು.

ದುರ್ಗಮ್ಮ ಜಾತ್ರೆ, ಗಣೇಶ ಮೂರ್ತಿ ವಿಸರ್ಜನೆ, ಈದ್ ಮಿಲಾದ್ ಹಾಗೂ ಇತರ ಪ್ರಮುಖ ಹಬ್ಬಗಳು ಮತ್ತು ಸಾರ್ವಜನಿಕ ಸಭೆ-ಸಮಾರಂಭಗಳನ್ನು ಯಾವುದೇ ಅಡಚಣೆಯಿಲ್ಲದೆ, ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುವಲ್ಲಿ ಪೊಲೀಸರ ಪಾತ್ರ ಹಿರಿಯದು. ಬೀದಿಬದಿ ವ್ಯಾಪಾರಿಗಳ ಸಂಘ, ಆಟೋ ಚಾಲಕರ ಸಂಘ ಹಾಗೂ ಕಾಲೋನಿಗಳಲ್ಲಿ ಕಾನೂನು-ಸುವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯು ಕೇವಲ ಕಾನೂನು ರಕ್ಷಣೆ ಮಾತ್ರವಲ್ಲದೆ, ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ ಬರೆದಿದೆ. ಪೊಲೀಸ್ ಇಲಾಖೆಯು 24 ಗಂಟೆಯೂ ಸಾರ್ವಜನಿಕರ ರಕ್ಷಣೆಗೆ ಸದಾ ಸಿದ್ಧವಿದ್ದು, ಸಾರ್ವಜನಿಕರು ಸಹ ಇಲಾಖೆಯೊಂದಿಗೆ ಸಹಕರಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಎನ್ ಸತೀಶ್ ಕುಮಾರ್ ಅವರು ಮಾತನಾಡಿ ಸುರಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಪೊಲೀಸರ ಪಾತ್ರ ಹಿರಿದಾಗಿದ್ದು, ಕರ್ತವ್ಯದ ವೇಳೆ ಜೀವತ್ಯಾಗ ಮಾಡಿದ ಹಾಗೂ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಯ ತ್ಯಾಗ-ಬಲಿದಾನಗಳು ಸ್ಮರಣೀಯ ಎಂದು ಅಭಿಪ್ರಾಯಪಟ್ಟರು.

ಪೊಲೀಸರು ತಮ್ಮ ಜೀವವನ್ನೇ ತ್ಯಾಗ ಮಾಡುವುದರ ಜೊತೆಗೆ, ಬದುಕಿರುವಾಗಲೂ ಸಮಾಜಕ್ಕಾಗಿ ಅಪಾರ ತ್ಯಾಗಗಳನ್ನು ಮಾಡುತ್ತಾ ಬಂದಿದ್ದಾರೆ. “ಸರ್ವಿಸ್ ಬಿಫೋರ್ ಸೆಲ್ಫ್” (ಸ್ವಾರ್ಥಕ್ಕೂ ಮುನ್ನ ಸೇವೆ) ಎನ್ನುವ ತತ್ವವೇ ಪೊಲೀಸ್ ಪಡೆಯ ಮೂಲ ಮಂತ್ರವಾಗಿದೆ.  ಹಿಂದಿನ ದಶಕಗಳಲ್ಲಿ ಇದ್ದಂತಹ ಆಂತರಿಕ ಗೊಂದಲಗಳು, ನಕ್ಸಲಿಸಂ, ಭಯೋತ್ಪಾದನೆ ಹಾಗೂ ಕೋಮುಗಲಭೆಗಳಂತಹ ಸವಾಲುಗಳನ್ನು ಎದುರಿಸಿ ಇಂದು ದೇಶವನ್ನು ಒಂದು ಸುರಕ್ಷಿತ ಮತ್ತು ಅಭಿವೃದ್ಧಿ ಹೊಂದಿದ ಸ್ಥಿತಿಗೆ ತರಲು ಪೊಲೀಸ್ ಸಿಬ್ಬಂದಿಯ ತ್ಯಾಗ ಕಾರಣವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್. ಟಿ ಅವರು ಮಾತನಾಡಿ 1953  ಅಕ್ಟೋಬರ್ 21 ರಂದು ಸಿ.ಆರ್.ಪಿ.ಎಫ್  ಡಿ.ಎಸ್.ಪಿ ಕರಣ್ ಸಿಂಗ್ ಇವರ ನೇತೃತ್ವದಲ್ಲಿ ಸಿ.ಆರ್.ಪಿ.ಎಫ್. ತುಕುಡಿಯು ಲಡಾಖ್ ಪ್ರದೇಶದಲ್ಲಿರುವ ಹಾಟ್ ಸ್ಪ್ರಿಂಗ್ ಹತ್ತಿರ ಗಸ್ತು ಮಾಡುತ್ತಿರುವಾಗ, ಅವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಚೀನಾ ದೇಶದ ಸೈನಿಕರು ಸದರಿ ಸಿ.ಆರ್.ಪಿ.ಎಫ್.ನ ತುಕುಡಿಯ ಮೇಲೆ ದಾಳಿ ಮಾಡಿರುತ್ತಾರೆ.  ತಮ್ಮ ಸಿ.ಆರ್.ಪಿ.ಎಫ್. ಜವಾನರ ಹತ್ತಿರ ಕೇವಲ ಸಾಮಾನ್ಯ ರೀತಿಯ ಬಂದೂಕುಗಳನ್ನು ಹೊಂದಿದ್ದು, ಶತ್ರು ಸೈನಿಕರು ಅವರಿಗಿಂತಲೂ ಸುಸಜ್ಜಿತ ಮದ್ದುಗುಂಡುಗಳು ಮತ್ತು ಆಯುಧಗಳನ್ನು ಹೊಂದಿದ್ದರೂ ಸಹ, ಭಾರತದ ಜವಾನರು ಧೈರ್ಯ ಮತ್ತು ಸಾಹಸದಿಂದ ಚೀನಾ ದೇಶದ ಸೈನಿಕರೊಂದಿಗೆ ವೀರಾವೇಶದಿಂದ ಹೋರಾಡಿರುತ್ತಾರೆ.

ಈ ಹೋರಾಟದಲ್ಲಿ 10 ಸಿ.ಆರ್.ಪಿ.ಎಫ್. ಜವಾನರು ವೀರಮರಣವನ್ನು ಹೊಂದಿದ್ದು, 9 ಜವಾನರನ್ನು ಚೀನಾ ದೇಶದ ಸೈನಿಕರು ದಸ್ತಗಿರಿ ಮಾಡಿರುತ್ತಾರೆ. ನಮ್ಮ ಸಿ.ಆರ್.ಪಿ.ಎಫ್. ಜವಾನರ ಧೈರ್ಯ ಮತ್ತು ಸಾಹಸವನ್ನು ಹಾಗೂ ಆತ್ಮಸಂಪರ್ಪಣೆಯನ್ನು ಭಾರತ ದೇಶದ ಎಲ್ಲಾ ಪ್ರಜೆಗಳು ಸ್ಮರಿಸುತ್ತಾರೆ. ದೇಶಕ್ಕಾಗಿ ಹೋರಾಡುತ್ತಾ ವೀರಸ್ವರ್ಗ ಪಡೆದ ಈ ಶೂರರ ಸ್ಮರಣೆಗಾಗಿ ಸ್ಮಾರಕವನ್ನು ಲಡಾಖ್ನಲ್ಲಿ ಅಬಾಸಿಚಿನ್ ಭಾಗದಲ್ಲಿ ಹದಿನೆಂಟು ಸಾವಿರ ಅಡಿ ಅಡಿ ಎತ್ತರದ ಮೇಲೆ ನಿರ್ಮಿಸಲಾಗಿದೆ ಎಂದರು.

ತಮ್ಮ ಕರ್ತವ್ಯ ಪಾಲನೆಯಲ್ಲಿ ಪ್ರತಿವರ್ಷ ದೇಶದಲ್ಲಿ ಅನೇಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತಹವರ ಸ್ಮರಣೆಗಾಗಿ ಪ್ರತಿವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಈ ವರ್ಷ ಅಂದರೆ 2025 ಸೆಪ್ಟೆಂಬರ್ 1 ರಿಂದ 2026 ಆಗಸ್ಟ್ 31 ರವರೆಗೆ ಭಾರತ ದೇಶದಲ್ಲಿ ಕರ್ತವ್ಯ ಪಾಲನೆಯಲ್ಲಿ ವೀರಮರಣ ಹೊಂದಿದ ಒಟ್ಟು 154 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿವರಿದ್ದು,  ರಾಜ್ಯದ ಪೊಲೀಸ್ ನಿರೀಕ್ಷಕ ಪಚ್ಚಯ್ಯ ವೀರಯ್ಯ ಸಾಲಿಮಠ ಉಪ ನಿರೀಕ್ಷಕ ಬಸವರಾಜ ಎಂ ಎಲ್ ಮುಖ್ಯ ಪೇದೆಗಳಾದ ಬೀರಲಿಂಗ,  ಎ ಎಂ ಸಾಲಿಮಠ ಹಾಗೂ ಇಸ್ಮಾಯಿಲ್ 5 ಜನ ಹುತಾತ್ಮರಾಗಿರುತ್ತಾರೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಡಿವೈಎಸ್ಪಿ ತಿಪ್ಪೇಸ್ವಾಮಿ, ಬಸವರಾಜ,ಕೃಷ್ಣಮೂರ್ತಿ ಹಾಗೂ ಶರಣ ಬಸವೇಶ್ವರ ಬಿ ಪೊಲೀಸ್ ನಿರೀಕ್ಷಕರು ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now