ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿವೆ. ನಮಗೆ ತಿಳಿಯದಂತೆ ವಿವಿಧ ಮಾರ್ಗಗಳ ಮೂಲಕ ವಂಚಕರು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಸ್ಪ್ಯಾಮ್ ಲಿಂಕ್ಗಳು ಹಾಗೂ ಮಾಲ್ವೇರ್ಗಳ ಮೂಲಕ ಒಟಿಪಿ (OTP) ಪಡೆದು ಖಾಲಿ ಮಾಡುತ್ತಿದ್ದಾರೆ. ಮೊಬೈಲ್ಗೆ ಹಣ ಕಡಿತವಾದ (ಡೆಬಿಟ್) ಸಂದೇಶ ಬಂದ ಮೇಲೆಯೇ ವಂಚನೆ ನಡೆದಿರುವುದು ಹಲವರ ಗಮನಕ್ಕೆ ಬರುತ್ತದೆ. ನಿಮ್ಮ ಯಾವುದೇ ಪಾತ್ರವಿಲ್ಲದೆ ಖಾತೆಯಿಂದ ಹಣ ಕಡಿತವಾದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಕೆಲವು ನಿಯಮಗಳನ್ನು ಪಾಲಿಸಿದರೆ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ.
ಗ್ರಾಹಕರ ಸ್ವಯಂಕೃತ ಅಪರಾಧ ಅಥವಾ ನಿರ್ಲಕ್ಷ್ಯದಿಂದ ವಂಚನೆ ನಡೆದರೆ ಬ್ಯಾಂಕ್ಗಳು ಹೊಣೆಯಾಗುವುದಿಲ್ಲ. ಆದರೆ ಬ್ಯಾಂಕ್ ವ್ಯವಸ್ಥೆಯ ಲೋಪ ಅಥವಾ ಥರ್ಡ್ ಪಾರ್ಟಿ ಭದ್ರತಾ ಉಲ್ಲಂಘನೆಯಿಂದ ಹಣ ನಷ್ಟವಾದರೆ, ಗ್ರಾಹಕರಿಗೆ ಸಂಪೂರ್ಣ ಪರಿಹಾರ ಸಿಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳನ್ನು ರೂಪಿಸಿದೆ.
ಹಣ ಕಳೆದುಕೊಂಡ ತಕ್ಷಣ ಗ್ರಾಹಕರು ಏನು ಮಾಡಬೇಕು?
ಖಾತೆ ಬ್ಲಾಕ್ ಮಾಡಿಸಿ: ಹಣ ಕಡಿತವಾದ ತಕ್ಷಣ ಬ್ಯಾಂಕ್ ಶಾಖೆ ಅಥವಾ ಕಸ್ಟಮರ್ ಕೇರ್ ಸಂಪರ್ಕಿಸಿ, ಯುಪಿಐ (UPI) ಹಾಗೂ ಇತರ ವಹಿವಾಟುಗಳನ್ನು ತಕ್ಷಣವೇ ಸ್ಥಗಿತಗೊಳಿಸಲು (Block) ವಿನಂತಿಸಿ.
ದಾಖಲೆಗಳನ್ನು ಸಂಗ್ರಹಿಸಿ: ವಹಿವಾಟಿನ ಐಡಿ (Transaction ID), ಹಣ ಕಡಿತವಾದ ದಿನಾಂಕ, ಸಮಯ ಹಾಗೂ ಸಂಬಂಧಿತ ಸಂದೇಶಗಳನ್ನು (SMS) ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಸೈಬರ್ ಹೆಲ್ಪ್ಲೈನ್ಗೆ ದೂರು: ತಕ್ಷಣವೇ ಕೇಂದ್ರ ಸರ್ಕಾರದ ಸೈಬರ್ ಕ್ರೈಮ್ ಹೆಲ್ಪ್ಲೈನ್ ಸಂಖ್ಯೆ 1930 ಗೆ ಕರೆ ಮಾಡಿ ಅಥವಾ ಸೈಬರ್ ಕ್ರೈಮ್ ಪೋರ್ಟಲ್ನಲ್ಲಿ ದೂರು ದಾಖಲಿಸಿ.
ಬ್ಯಾಂಕ್ನಲ್ಲಿ ಲಿಖಿತ ದೂರು: ವಂಚನೆ ನಡೆದ ಬಗ್ಗೆ ಬ್ಯಾಂಕ್ಗೆ ಅಧಿಕೃತವಾಗಿ ಲಿಖಿತ ರೂಪದಲ್ಲಿ ದೂರು ನೀಡಿ ಸ್ವೀಕೃತಿ ಪತ್ರ ಪಡೆಯಿರಿ.
ಮರುಪಾವತಿ (Refund) ನಿಯಮಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
ಬ್ಯಾಂಕ್ ಲೋಪ: ಬ್ಯಾಂಕಿನ ತಾಂತ್ರಿಕ ದೋಷ ಅಥವಾ ಆಂತರಿಕ ವ್ಯವಸ್ಥೆಯ ಲೋಪದಿಂದ ಹಣ ಕಡಿತವಾಗಿದ್ದರೆ, ಬ್ಯಾಂಕ್ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ 10 ದಿನಗಳ ಒಳಗೆ ‘ಶ್ಯಾಡೋ ರಿವರ್ಸಲ್’ (Shadow Reversal) ವಿಧಾನದ ಮೂಲಕ ಹಣವನ್ನು ಗ್ರಾಹಕರ ಖಾತೆಗೆ ಜಮೆ ಮಾಡಬೇಕು.
3 ದಿನಗಳ ಒಳಗಿನ ದೂರು: ಮೂರನೇ ವ್ಯಕ್ತಿಗಳ (Third Party) ಭದ್ರತಾ ಉಲ್ಲಂಘನೆಯಿಂದ ನಷ್ಟ ಸಂಭವಿಸಿದರೆ, ಘಟನೆ ನಡೆದ 3 ದಿನಗಳ ಒಳಗೆ ಬ್ಯಾಂಕ್ಗೆ ಮಾಹಿತಿ ನೀಡಿದರೆ ಗ್ರಾಹಕರಿಗೆ ಶೂನ್ಯ ಹೊಣೆಗಾರಿಕೆ (Zero Liability) ಅನ್ವಯವಾಗಿ ಪೂರ್ಣ ಹಣ ಮರುಪಾವತಿಯಾಗುತ್ತದೆ.
4 ರಿಂದ 7 ದಿನಗಳ ಒಳಗೆ ದೂರು: ವಂಚನೆ ನಡೆದು 4 ರಿಂದ 7 ಕೆಲಸದ ದಿನಗಳ ಒಳಗೆ ದೂರು ನೀಡಿದರೆ, ಆರ್ಬಿಐ ನಿಗದಿಪಡಿಸಿದ ಮಿತಿಗಳ ಅನ್ವಯ ಭಾಗಶಃ ಅಥವಾ ನಿರ್ದಿಷ್ಟ ಮೊತ್ತ ಮರುಪಾವತಿಯಾಗುತ್ತದೆ.
7 ದಿನಗಳ ನಂತರ: 7 ದಿನಗಳ ನಂತರ ದೂರು ನೀಡಿದರೆ, ಮರುಪಾವತಿ ಪ್ರಕ್ರಿಯೆಯು ಸಂಪೂರ್ಣವಾಗಿ ಆಯಾ ಬ್ಯಾಂಕಿನ ಆಂತರಿಕ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ.
ಹಣ ಕಳೆದುಕೊಂಡಾಗ ಆತಂಕಪಡದೆ, ಆದಷ್ಟು ಬೇಗ ಬ್ಯಾಂಕ್ ಹಾಗೂ ಸೈಬರ್ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಗತ್ಯ. ದೂರು ನೀಡಲು ವಿಳಂಬ ಮಾಡಿದಷ್ಟೂ ಹಣ ಮರಳಿ ಪಡೆಯುವ ಸಾಧ್ಯತೆ ಕ್ಷೀಣಿಸುತ್ತದೆ.














