Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮದ್ಯಮುಕ್ತ ಕರ್ನಾಟಕದಿಂದ ಮಾತ್ರ ಸರ್ವೋದಯ ಸಾಧ್ಯ: ದುಂಡುಮೇಜಿನ ಪರಿಷತ್‌ನಲ್ಲಿ ಸಾಣೇಹಳ್ಳಿ ಶ್ರೀ ಪ್ರತಿಪಾದನೆ

---Advertisement---

ಚಿತ್ರದುರ್ಗ, ಅಕ್ಟೋಬರ್ 18: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮದ್ಯಪಾನ ಪಿಡುಗನ್ನು ನಿಯಂತ್ರಿಸಿ ಮದ್ಯಮುಕ್ತ ಕರ್ನಾಟಕ ನಿರ್ಮಿಸುವುದು ಪ್ರತಿಯೊಬ್ಬರ ಆಶಯವಾಗಬೇಕು. ಮದ್ಯಪಾನ ಮುಕ್ತ ಸಮಾಜದಿಂದ ಮಾತ್ರ ಸರ್ವೋದಯ ಸಾಧ್ಯ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಮುರುಘಾ ರಾಜೇಂದ್ರ ಬೃಹನ್ಮಠದಲ್ಲಿ ಭಾನುವಾರ ಶರಣ ಸಂಸ್ಕøತಿ ಉತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಸಹಯೋಗದಲ್ಲಿ ನಾಡಿನ ಸರ್ವಧರ್ಮ ಗುರುಗಳು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ದಲಿತ ಮತ್ತು ಹಿಂದುಳಿದ ಮಠಾಧೀಶರ ಒಕ್ಕೂಟ ಹಾಗೂ ಚಿಂತಕರ ಸಮನ್ವಯದೊಂದಿಗೆ “ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನಾ ದುಂಡುಮೇಜಿನ ಪರಿಷತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಮದ್ಯಪಾನದ ದುಷ್ಪಾರಿಣಾಮಗಳಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಅನಾಹುತದಿಂದ ಜನರನ್ನು ಮುಕ್ತಗೊಳಿಸದಿದ್ದರೆ ನಮ್ಮ ನಾಡು ಕಲ್ಯಾಣ ನಾಡು ಆಗದೆ ಕುಡುಕರ ನಾಡು ಆಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ಸಮಸ್ಯೆ ಕುರಿತು ಶೀಘ್ರದಲ್ಲೇ ಮಠಾಧೀಶರು ಹಾಗೂ ಸಾರ್ವಜನಿಕರ ನಿಯೋಗವು ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಿ ಸಮಾಲೋಚನೆ ನಡೆಸಲಿದೆ ಎಂದು ಹೇಳಿದರು.

ಮಹಾತ್ಮ ಗಾಂಧೀಜಿಯವರ ಕಂಡ ಸುಖಿ ಸಮಾಜದ ಕನಸು ನನಸಾಗಬೇಕಾದರೆ ಕರ್ನಾಟಕವನ್ನು ಸಂಪೂರ್ಣ ಮದ್ಯಮುಕ್ತ ರಾಜ್ಯವನ್ನಾಗಿ ಘೋಷಿಸಬೇಕು. ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲು ಮದ್ಯಪಾನ ನಿಷೇಧ, ನಿಯಂತ್ರಣ ಅತ್ಯಗತ್ಯ ಎಂದರು.

ಗದಗದ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಮದ್ಯ ವ್ಯಸನಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ಹಳ್ಳಿಗಳಲ್ಲಿ ಜನರು ಮದ್ಯವ್ಯಸನಕ್ಕೆ ಹಾಗೂ ಮೋಜು ಮಸ್ತಿಗೆ ಒಳಗಾಗಿ ಕುಟುಂಬಗಳನ್ನು ಬೀದಿಗೆ ತಳ್ಳುತ್ತಾರೆ. ಹಳ್ಳಿಗಳಲ್ಲಿ ಮದ್ಯದ ಅಂಗಡಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಕಾನೂನು ಚೌಕಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡು ಸಮಾಜದ ಸುಧಾರಣೆಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲ ಮಠಾಧೀಶರುಗಳು ಸರ್ಕಾರಕ್ಕೆ ಮದ್ಯಪಾನ ಸೇವನೆಯಿಂದ ಆಗುವ ತೊಂದರೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಪ್ರಮುಖ ಪಾತ್ರ ವಹಿಸಬೇಕು. ಜೊತೆಗೆ ಸರ್ಕಾರವು ಇದರಿಂದ ಆಗುವ ತೊಂದರೆಗಳನ್ನು ಅರಿತುಕೊಳ್ಳಬೇಕು. ಜನರಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವುದರ ಮೂಲಕ ಸಮಾಜವನ್ನು ಉತ್ತಮ ರೀತಿಯಲ್ಲಿ ನಿರ್ಮಾಣವಾಗುವಂತೆ ಮಾಡಬೇಕು. ಸ್ವಾಮೀಜಿಗಳು ಜನರಿಗೆ ರೀತಿ ನೀತಿಗಳನ್ನು ತಿಳಿಸುವುದು ಮುಖ್ಯ ಆ ಮುಖಾಂತರ ಜನರ ಮನ ಪರಿವರ್ತನೆ ಮಾಡಬೇಕು ಎಂದರು.

ಇಳಕಲ್ಲಿನ ವಿಜಯ ಮಹಾಂತೇಶ್ವರ ಸಂಸ್ಥಾನದ ಗುರು ಮಹಾಂತ ಮಹಾಸ್ವಾಮಿಗಳು ಮಾತನಾಡಿ, ದೇಶದ ಯುವ ಜನತೆಯಲ್ಲಿ ಶೇ.40ರಷ್ಟು ಯುವಕರು ಮದ್ಯಪಾನದ ಚಟಕ್ಕೆ ಒಳಗಾರುವುರುವುದು. ಅಘಾತಕಾರಿ ಸಂಗತಿ. ಕುಡಿತದ ದುರಾಭ್ಯಾಸದಿಂದಾಗಿ ಕುಟುಂಬಗಳು ಬೀದಿಗೆ ಬಂದಿವೆ. ಶೇ.100ರಷ್ಟು ಜನರಲ್ಲಿ ಕೇವಲ ಶೇ.5ರಷ್ಟು ಜನರು ಮಾತ್ರ ಮದ್ಯಪಾನ ನಿಷೇಧ ವಿರೋಧಿಸಬಹುದು. ಇನ್ನುಳಿದ ಶೇ.95ರಷ್ಟು ಜನರು ಮದ್ಯಮುಕ್ತ ಸಮಾಜ ಬಯಸುತ್ತಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿ, ಮದ್ಯ ಮಾರಾಟ ಬೇಡ ಎಂದು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದರೆ, ಆ ನಿರ್ಣಯವೇ ಅಂತಿಮವಾಗಬೇಕು. ಅದನ್ನು ರದ್ದುಗೊಳಿಸುವ ಅಧಿಕಾರ ಮುಖ್ಯಮಂತ್ರಿಗಳಿಗೂ ಇರಬಾರದು. ಅಂತಹ ಕಾನೂನು ಬದ್ಧ ಅಧಿಕಾರವನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು.

ಮದ್ಯಪಾನ ನಿಷೇಧಕ್ಕೆ ಎಲ್ಲಾ ಜನರು, ಸಂಸ್ಥೆಗಳು ಸಮಾಜ ಮುಖಂಡರು ಕೈಜೋಡಿಸಬೇಕು. ಶಾಲಾ-ಕಾಲೇಜುಗಳು ಹಾಗೂ ಜನರು ವಾಸಿಸುವಂತಹ ಪ್ರದೇಶಗಳಲ್ಲಿ ಮದ್ಯಪಾನ ಅಂಗಡಿಗಳ ಸ್ಥಳಾಂತರಗೊಳಿಸುವ ಕೆಲಸ ಮಾಡಬೇಕು. ಕುಟುಂಬಗಳು ಉತ್ತಮ ರೀತಿಯಲ್ಲಿ ಬದುಕಬೇಕು ಎಂದರೆ ಎಲ್ಲಾ ಸಮಾಜದ ವರ್ಗದವರು ಈ ಕಾರ್ಯಕ್ಕೆ ಬದ್ಧರಾಗಬೇಕು ಎಂದು ತಿಳಿಸಿದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪರಮಪೂಜ್ಯ ಡಾ. ನಿಶ್ಚಲಾನಂದನಾಥ ಮಹಾಸ್ವಾಮಿಗಳು ಮಾತನಾಡಿ, ಮದ್ಯಪಾನ ನಿಷೇಧ ಮಾಡುವ ಕೆಲಸದಲ್ಲಿ ಸಮಾಜದ ಮುಖಂಡರು ಪೂಜ್ಯರು ಮಹತ್ವ ವಹಿಸುತ್ತಿದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಈ ಸಮಾಜದಲ್ಲಿ ಏನನ್ನು ಬೇಕಾದರೂ ಬದಲಾಯಿಸಬಹುದು. ಮದ್ಯ ನಿಷೇಧಿಸುವುದರಿಂದ ಸರ್ಕಾರಕ್ಕೆ ಆದಾಯ ಬರುವುದು ಕಡಿಮೆಯಾಗುತ್ತದೆ. ಸರ್ಕಾರ ನಡೆಸುವುದು ಕಷ್ಟ ಎಂದು ಸರ್ಕಾರ ಇದನ್ನು ನಿಷೇಧಿಸುತ್ತಿಲ್ಲ. ಜನರು ಮತ್ತು ಪೂಜ್ಯರು ಈ ನಿಟ್ಟಿನಲ್ಲಿ ಜಾಗೃತರಾಗಬೇಕು. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಸಂಘ ಸಂಸ್ಥೆಗಳು, ರಾಜಕಾರಣಿಗಳು, ಸಮಾಜದ ಮುಖಂಡರುಗಳು ಸರ್ವಧರ್ಮದ ಗುರುಗಳು, ಈ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಜನರ ಯೋಗಕ್ಷೇಮ, ಕಲ್ಯಾಣ, ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಬೇಕು, ಇದೇ ರೀತಿ ಸಮಾಜ ಮುಂದುವರೆದರೆ ತುಂಬಾ ಕಷ್ಟವಾಗುತ್ತದೆ, ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
ಭೋವಿ ಗುರುಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಮಾತನಾಡಿ, ರಾಜ್ಯದಲ್ಲಿ ಮದ್ಯಪಾನ ನಿಯಂತ್ರಣ ಹಾಗೂ ನಿಷೇಧ ಜಾರಿಯಾಗಬೇಕಾದರೆ ಸರ್ಕಾರದ ದ್ವಂದ್ವ ನೀತಿ ಮತ್ತು ಆದಾಯದ ಮೇಲಿನ ವ್ಯಾಮೋಹ ತೊಲಗಬೇಕು ಎಂದರು.

ಮದ್ಯಪಾನ ಸಂಯಮ ಮಂಡಳಿಗೆ ನೀಡುವ ಅನುದಾನ ಕೈಗೊಳ್ಳುವ ಚಟುವಟಿಕೆಗಳು ತೀರಾ ಕನಿಷ್ಠಮಟ್ಟದಲ್ಲಿವೆ. ಒಂದು ಕಡೆ ಜಾಗೃತಿ ಮೂಡಿಸುವ ನಾಟಕವಾಡುತ್ತಾ, ಇನ್ನೊಂದೆಡೆ ಖಜಾನೆ ತುಂಬಿಸಿಕೊಳ್ಳಲು ಹೆಚ್ಚು ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಗೆ ಗುರಿ ನಿಗಧಿಪಡಿಸುವ ನಡೆ ವಿರೋಧಾಭಾಸದಿಂದ ಕೂಡಿದೆ. ನಮ್ಮ ರಾಜ್ಯ ಕಲ್ಯಾಣ ರಾಜ್ಯವಾಗಬೇಕಾದರೆ ನಮ್ಮ ಸಮಾಜ ಮದ್ಯಪಾನದಿಂದ ಯಾವಾಗ ಮುಕ್ತವಾಗುತ್ತದೆ ಆಗ ಮಾತ್ರ ನಮ್ಮ ರಾಜ್ಯ ಕಲ್ಯಾಣ ರಾಜ್ಯವಾಗಲಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲದಾಪುರ ಮಾತನಾಡಿ, ಮದ್ಯಪಾನ ವರ್ಜನಗೆ ಮನಪರಿವರ್ತನೆ ಒಂದು ಶಾಶ್ವತ ಪರಿಹಾರ. ಗ್ರಾಹಕರೇ ಮದ್ಯದ ಅಂಗಡಿಗೆ ಹೋಗದಂತೆ ಜಾಗೃತಿ ಮೂಡಿಸಿದಾಗ ಬದಲಾವಣೆ ಸಾಧ್ಯ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 13ಕ್ಕೂ ಹೆಚ್ಚು ಗ್ರಾಮಗಳನ್ನು ಗ್ರಾಮಸ್ಥರೇ ಮದ್ಯಮುಕ್ತ ಹಾಗೂ ವ್ಯಸನಮುಕ್ತ ಗ್ರಾಮಗಳನ್ನಾಗಿ ಪರಿವರ್ತಿಸಿಕೊಂಡಿರುವುದು ಶ್ಲಾಘನೀಯ. ಇದೇ ಮಾದರಿಯಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮದ್ಯಮುಕ್ತ ಗ್ರಾಮಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ದಾವಣಗೆರೆಯ ಬ್ರಹ್ಮಕುಮಾರಿ ಆಶ್ರಮದ ಲೀಲಕ್ಕ ಮಾತನಾಡಿ, ನಾವು ಎಲ್ಲಾ ಶಾಲಾ ಕಾಲೇಜುಗಳು ಭೇಟಿ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ಆಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದರು ಹೇಳಿದರು.

ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ್ ಮಾತನಾಡಿ, ಸಾಣೇಹಳ್ಳಿ ಶ್ರೀಗಳು ಹೇಳಿದ ಹಾಗೆ ಎಲ್ಲಾ ಧರ್ಮದವರು ಹಾಗೂ ಸರ್ಕಾರ ಈ ಕಾರ್ಯಕ್ಕೆ ಕೈ ಜೋಡಿಸಬೇಕು. ಮುಂದೆ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಚುನಾವಣಾಗಳು ಬರುತ್ತಿದ್ದು, ಈ ಸಮಯದಲ್ಲಿ ಈ ಒಂದು ಸಭೆಯನ್ನು ಕರೆದಿರುವುದು ತುಂಬಾ ಮಹತ್ವವಾಗಿದೆ. ಈ ಸಭೆಯ ಮೂಲಕ ಸರ್ಕಾರಕ್ಕೆ ಮದ್ಯಪಾನ ನಿಷೇಧದ ಕಾರ್ಯಕ್ಕೆ ನಾವುಗಳು ಕೈಜೋಡಿಸಬೇಕು ಎಂದರು.

ಮದ್ಯನಿಷೇಧ ಆಂದೋಲನದ ಕಾರ್ಯಕರ್ತೆ ಸ್ವರ್ಣಭಟ್ ಮಾತನಾಡಿ, ಕಲ್ಯಾಣ ರಾಜ್ಯದ ಕಲ್ಪನೆ ಯಶಸ್ವಿಯಾಗಬೇಕಾದರೆ ಸಮಾಜದ ಎಲ್ಲಾ ಜನರ ಭಾವನೆಗಳು ಸಹ ಮುಖ್ಯ. ಸಮಾಜವು ಆದರ್ಶಪ್ರಾಯವಾಗಿ ನಿರ್ಮಾಣವಾಗಬೇಕಾದರೆ ಸರ್ಕಾರದ ನಿರ್ಧಾರಗಳ ಮೇಲೆ ನಿಂತಿದೆ. ಎಲ್ಲಾ ಧರ್ಮದ ಗುರುಗಳು, ಸ್ವಾಮೀಜಿಗಳು ಮದ್ಯಪಾನ ನಿಷೇಧದ ಸಂಘಟನೆಗಳ ಜೊತೆ ಕೈಜೋಡಿಸುವ ಮೂಲಕ ಸರ್ಕಾರಕ್ಕೆ ಹಾಗೂ ಜನರಿಗೆ ಮದ್ಯಪಾನದಿಂದ ಆಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಮದ್ಯಪಾನವನ್ನು ಕಾನೂನಾತ್ಮಕವಾಗಿ ನಿಷೇಧಿಸಲು ಸಾಧ್ಯ. ಸರ್ಕಾರ ಈ ಮಧ್ಯಪಾನ ಸೇವನೆಯಿಂದ ಆಗುವ ಅನಾಹುತಗಳನ್ನು ಅರಿತು ಕೆಲಸ ಮಾಡುವಂತೆ ಆಗಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ, 2012ರಲ್ಲಿ ಇದೇ ರೀತಿಯ ದುಂಡು ಮೇಜಿನ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಎಲ್ಲಾ ಧರ್ಮಗುರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಮೂಲಕ ಸರ್ಕಾರಕ್ಕೆ ಮದ್ಯಪಾನ ನಿಷೇಧಿಸಲು ಒಮ್ಮತದಿಂದ ಹೋರಾಡಬೇಕು. ಅಸ್ಪøಶ್ಯತೆ, ಕೋಮುಗಲಭೆ, ಮದ್ಯಪಾನ ಈ ಮೂರು ಸಮಾಜಕ್ಕೆ ಕಂಟಕ. ಮದ್ಯಪಾನದಿಂದ ಬಡ ಕುಟುಂಬಗಳು ಬೀದಿಗೆ ಬರುತ್ತವೆ. ಗಾಂಧೀಜಿಯವರ ಆಶಯಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ಮಠಾಧೀಶರ ಸಮ್ಮೇಳನದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಕುರಿತು ನಿರ್ಣಯಗನ್ನು ವಿವರಿಸಿದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವನ್ನು ಹಂತ ಹಂತವಾಗಿ ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸುವುದು ಮತ್ತು ಪ್ರಸಕ್ತ ಜಾರಿಯಲ್ಲಿರುವ ಅಬಕಾರಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು. ಮಠಗಳಲ್ಲಿ ನಡೆಯುವ ದೈನಂದಿನ ಪ್ರವಚನ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರಿಗೆ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪಾರಿಣಾಮ ಕುರಿತು ಅರಿವು ಮೂಡಿಸುವುದು ಮತ್ತು ಶಾಲಾ-ಕಾಲೇಜು ಪಠ್ಯಪುಸ್ತಕಗಳಲ್ಲಿ ಮಾದಕ ವಸ್ತುಗಳ ಸೇವೆನಯಿಂದ ಭವಿಷ್ಯದ ಮೇಲಾಗುವ ಭೀಕರ ಪರಿಣಾಮಗಳ ಪಾಠಗಳ್ನು ಅಳವಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಆರ್ಥಿಕವಾಗಿ ಸಬಲವಾಗಿರುವ ಮಠಗಳ ವತಿಯಿಂದ ಉಚಿತ ಅಥವಾ ಕೈಗಟುಕುವ ದರದಲ್ಲಿ ವ್ಯಸನ ಮುಕ್ತ ಕೇಂದ್ರಗಳನ್ನು ಮತ್ತು ನುರಿತ ವೈದ್ಯರಿಂದ ಕೌನ್ಸಿಲಿಂಗ್ ವ್ಯವಸ್ಥೆ ಕಲ್ಪಿಸುವುದು. ವ್ಯಸನದಿಂದ ಹೊರಬಂದ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ನೆರವಾಗುವುದು. ಮದುವೆ, ಜಾತ್ರೆ ಮತ್ತು ಶುಭ ಸಮಾರಂಭಗಳಲ್ಲಿ ಮದ್ಯ ಬಳಕೆಯನ್ನು ಕಟ್ಟುನಿಟ್ಟಾಗಿ ವಿರೋಧಿಸುವುದು. ಪ್ರತಿಯೊಂದು ಹಳ್ಳಿಗಳಲ್ಲೂ ಮಠದ ಭಕ್ತರ ಮತ್ತು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ದುಶ್ಚಟ ಮುಕ್ತ ಗ್ರಾಮ ಸಮಿತಿಗಳನ್ನು ರಚಿಸಿ, ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಜಾಗೃತಿ ಮೂಡಿಸಲು ಕಾರ್ಯಪಡೆಗಳನ್ನು ಸೃಷ್ಠಿಸುವುದು. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಮದ್ಯ ಹಂಚುವ ರಾಜಕೀಯ ನಾಯಕರನ್ನು ಬಹಿಷ್ಕರಿಸುವಂತೆ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಕರೆ ನೀಡುವುದು. ಇಂದಿನ ಯುವ ಜನತೆ ಸಕ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಮಠಾಧೀಶರ ಸಣ್ಣ ಸಂದೇಶಗಳ ಮೂಲಕ ಆಕರ್ಷಕ ಡಿಜಿಟಲ್ ಕ್ಯಾಂಪೇನ್ ಆರಂಭಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಬಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಹುಣಸೂರಿನ ಗುರುಬಸವೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು, ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ವಚನಾನಂದ ಮಹಾಸ್ವಾಮಿಗಳು, ಗುರುಮಠಕಲ್ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ವಕೀಲರಾದ ಹೆಚ್.ಬಿ.ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ ಆರ್. ಸಿದ್ದೇಗೌಡ ಚಿಕ್ಕಾಡೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ನರಸಿಂಹಮುರ್ತಿ, ಚಾಮರಾಜನಗರದ ದೀನಬಂಧು ಸಂಸ್ಥೆಯ ಜಿ.ಎಸ್. ಜಯದೇವ್, ಕವಯತ್ರಿ ಸವಿತಾ ನಾಗಭೂಷಣ್, ಚಿತ್ರನಟ ಅಶೋಕ್, ಹೆಗ್ಗೋಡು ರಂಗಕರ್ಮಿ ಪ್ರಸನ್ನ ಚರಕ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಸಾಹಿತಿಗಳಾದ ಡಾ. ಲೋಕೇಶ್ ಅಗಸನಕಟ್ಟೆ, ಚಂದ್ರಶೇಖರ್ ತಾಳ್ಯ, ಮಂಗಳೂರಿನ ಮೊಹಮ್ಮದ್ ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now