ಸುದ್ದಿಒನ್, ಮೊಳಕಾಲ್ಮುರು, ಅಕ್ಟೋಬರ್. 18 : ನಗರ ಪ್ರದೇಶಗಳಲ್ಲಿರುವ ಅನೇಕ ಕಾಲೇಜುಗಳು ಪ್ರಸ್ತುತ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಆದರೆ ಕೊಂಡ್ಲಹಳ್ಳಿಯ ಸರ್ವೋದಯ ಮಹಾವಿದ್ಯಾಲಯವು ಸುಸಜ್ಜಿತ ಕಟ್ಟಡ, ಗ್ರಂಥಾಲಯ ಹಾಗೂ ಉತ್ತಮ ಪರಿಸರವನ್ನು ಹೊಂದಿರುವುದು ಸಂತಸ ತಂದಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ವಿ. ಉಮಾದೇವಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಕೊಂಡ್ಲಹಳ್ಳಿ ಸರ್ವೋದಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಹಾಗೂ ಸವಿನೆನಪುಗಳ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಶಕಗಳಿಂದಲೂ ಯಾವುದೇ ಸುಧಾರಣೆ ಕಾಣದ ಅನೇಕ ಕಾಲೇಜುಗಳನ್ನು ತಾವು ನೋಡಿದ್ದಾಗಿ ತಿಳಿಸಿದ ಅವರು, ಕಡಿಮೆ ಅವಧಿಯಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪರಿಚಯಿಸುತ್ತಿರುವ ಈ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ದ್ವಿತೀಯ ವರ್ಷದ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ, ಉನ್ನತ ಶಿಕ್ಷಣದತ್ತ ಗಮನಹರಿಸಬೇಕು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಕಾಲೇಜು ಈಗಾಗಲೇ ಎರಡು ಬಾರಿ ರ್ಯಾಂಕ್ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳು ಮತ್ತಷ್ಟು ರ್ಯಾಂಕ್ಗಳನ್ನು ಗಳಿಸುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪರಿಶ್ರಮಿಸಬೇಕು ಎಂದು ಕರೆ ನೀಡಿದರು.
ಶ್ರೀ ಬೀರಲಿಂಗೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ಸಂಸ್ಥೆಯ ಪ್ರಗತಿಯು ಕಾಲೇಜನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನೆರವಾಗಿದೆ. ಈ ವರ್ಷವೂ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಲು ಪ್ರಯತ್ನಿಸಬೇಕು. ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಚಾರ್ಯರ ನಿರಂತರ ಪರಿಶ್ರಮದಿಂದ ಉತ್ತಮ ಫಲಿತಾಂಶ ದೊರೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ. ಎಂ. ಶಿವಲಿಂಗಪ್ಪ, ಸಂಸ್ಥೆಯ ಅಧ್ಯಕ್ಷ ಕೆ.ಟಿ. ಕೇಶವರೆಡ್ಡಿ, ಕಾರ್ಯದರ್ಶಿ ಡಿ. ಷಡಾಕ್ಷರಪ್ಪ, ಖಜಾಂಚಿ ಆರ್. ರಾಮರೆಡ್ಡಿ, ಪ್ರಾಚಾರ್ಯ ಎಂ. ಗುರುಸ್ವಾಮಿ ಹಾಗೂ ಆಡಳಿತ ಮಂಡಳಿಯ ಬಿ. ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.











