Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ‘ಕರ್ತವ್ಯ ಆ್ಯಪ್’ ಹಾಜರಾತಿ : ಸರ್ಕಾರದ ಮಹತ್ವದ ಆದೇಶ

---Advertisement---

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು ಹಾಗೂ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ‘ಕರ್ತವ್ಯ ಆ್ಯಪ್‌’ನಲ್ಲಿ ದಾಖಲಿಸುವುದನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಪ್ರಸ್ತುತ ಕಾಯಂ ನೌಕರರ ಹಾಜರಾತಿಯನ್ನು ಮಾತ್ರ ಕರ್ತವ್ಯ ಆ್ಯಪ್ ಮೂಲಕ ದಾಖಲಿಸಲಾಗುತ್ತಿದ್ದು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ಕೈಬರಹ ಅಥವಾ ಪ್ರತ್ಯೇಕ ವ್ಯವಸ್ಥೆಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಈ ನೌಕರರ ವೇತನವನ್ನು ಸರ್ಕಾರದ ಅನುದಾನದಿಂದಲೇ ಭರಿಸಲಾಗುತ್ತಿರುವುದರಿಂದ, ಹಾಜರಾತಿಯಲ್ಲಿ ಪಾರದರ್ಶಕತೆ, ಏಕರೂಪತೆ ಮತ್ತು ವಿಶ್ವಾಸಾರ್ಹತೆ ತರಲು ಈ ಹೊಸ ಕ್ರಮ ಕೈಗೊಳ್ಳಲಾಗಿದೆ.

ನವೆಂಬರ್ 25, 2026: ಸಂಬಂಧಪಟ್ಟ ಇಲಾಖೆಗಳು ಮತ್ತು ಕಚೇರಿಗಳಲ್ಲಿರುವ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ನವೆಂಬರ್ 25ರೊಳಗೆ ಕರ್ತವ್ಯ ಆ್ಯಪ್‌ನಲ್ಲಿ ನೋಂದಾಯಿಸಬೇಕು.

ಡಿಸೆಂಬರ್ 01, 2026: ಡಿಸೆಂಬರ್ 1ರಿಂದ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ಕಡ್ಡಾಯವಾಗಿ ಕರ್ತವ್ಯ ಆ್ಯಪ್‌ನಲ್ಲೇ ದಾಖಲಿಸಬೇಕು.

ಜನವರಿ 01, 2027 ರಿಂದ ವೇತನ ನಿಯಮ: ಜನವರಿ 1ರ ನಂತರ ಗುತ್ತಿಗೆ ನೌಕರರ ವೇತನವನ್ನು ಕರ್ತವ್ಯ ಆ್ಯಪ್‌ನಲ್ಲಿ ದಾಖಲಾದ ಹಾಜರಾತಿ ಆಧಾರದ ಮೇಲಷ್ಟೇ ಬಿಡುಗಡೆ ಮಾಡಲಾಗುತ್ತದೆ. ಹೊರಗುತ್ತಿಗೆ ಸಂಸ್ಥೆಗಳ ಬಿಲ್‌ಗಳನ್ನು ಕೂಡ ಆ್ಯಪ್ ಮೂಲಕ ಸೃಜಿಸಲಾದ ಹಾಜರಾತಿ ವರದಿಯೊಂದಿಗೆ ಮಾತ್ರ ಪಾವತಿಗೆ ಅಂಗೀಕರಿಸಲಾಗುತ್ತದೆ. ಕರ್ತವ್ಯ ಆ್ಯಪ್‌ನಲ್ಲಿ ದಾಖಲಾಗದ ಹಾಜರಾತಿಗೆ ಯಾವುದೇ ವೇತನ ಪಾವತಿ ಮಾಡಬಾರದು ಎಂದು ಆದೇಶಿಸಲಾಗಿದೆ.

ಸರ್ಕಾರದ ಅಧೀನದಲ್ಲಿರುವ ಎಲ್ಲಾ ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಅನುದಾನಿತ ಸಂಸ್ಥೆಗಳಿಗೂ ಈ ನಿಯಮ ಅನ್ವಯಿಸಲಿದೆ. ನಿಯಮ ಉಲ್ಲಂಘನೆ ಅಥವಾ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಹಾಗೂ ಡಿಡಿಒ (DDO) ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. ತಾಂತ್ರಿಕ ನೆರವಿಗಾಗಿ ಕರ್ತವ್ಯ ಆ್ಯಪ್‌ನ ಯೋಜನಾ ನಿರ್ವಹಣಾ ಘಟಕವನ್ನು (PMU) ಸಂಪರ್ಕಿಸಲು ತಿಳಿಸಲಾಗಿದೆ.

Join WhatsApp

Join Now

Join Telegram

Join Now