Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇಂದ್ರದ ಮೂರು ಪಿಂಚಣಿ ಯೋಜನೆಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ

---Advertisement---

ನವದೆಹಲಿ: ಕೇಂದ್ರ ಸರ್ಕಾರವು ಜಾರಿಯಲ್ಲಿರುವ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು (ಎನ್‌ಎಸ್‌ಎಪಿ) ಮುಂದಿನ ಐದು ವರ್ಷಗಳ ಕಾಲ ಮುಂದುವರಿಸಲು ನಿರ್ಧರಿಸಿದ್ದು, ಇದರ ಜೊತೆಗೆ ಈ ಕಾರ್ಯಕ್ರಮ ಹಾಗೂ ಅದರ ಅಡಿಯಲ್ಲಿ ಬರುವ ಉಪ ಯೋಜನೆಗಳ ಹೆಸರನ್ನು ಬದಲಾಯಿಸಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನು ಕೈಬಿಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಸಂಪುಟ ಸಭೆಯು ಅನುಮೋದನೆ ನೀಡಿದ್ದು, 2026-27ರಿಂದ 2030-31ರವರೆಗಿನ ಐದು ವರ್ಷಗಳ ಅವಧಿಗೆ ಒಟ್ಟು 53,428 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದೆ. ಇದೇ ವೇಳೆ ದಿವ್ಯಾಂಗರ ಪಿಂಚಣಿಗೆ ಸಂಬಂಧಿಸಿದಂತೆ ಅರ್ಹತಾ ಮಾನದಂಡ, ವ್ಯಾಪ್ತಿ ಹಾಗೂ ಸಹಾಯಧನದ ಮೊತ್ತವನ್ನು ಪರಿಷ್ಕರಿಸಲಾಗಿದ್ದು, ವೃದ್ಧಾಪ್ಯ, ವಿಧವಾ ಹಾಗೂ ಕುಟುಂಬ ನೆರವು ಯೋಜನೆಗಳು ಹಿಂದಿನಂತೆಯೇ ಮುಂದುವರಿಯಲಿವೆ.

1995ರಲ್ಲಿ ಆರಂಭವಾದ ಈ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಯ ಅಡಿಯಲ್ಲಿ ವೃದ್ಧರು, ವಿಧವೆಯರು ಮತ್ತು ವಿಕಲಚೇತನರಿಗೆ ಪಿಂಚಣಿ ನೀಡಲಾಗುತ್ತಿತ್ತು. ಇನ್ನು ಮುಂದೆ ‘ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ’ವನ್ನು ‘ಪ್ರಧಾನಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ. ಹಾಗೆಯೇ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು ‘ಪ್ರಧಾನಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ’ ಎಂದೂ, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆಯನ್ನು ‘ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ’ ಎಂದೂ, ಇಂದಿರಾ ಗಾಂಧಿ ರಾಷ್ಟ್ರೀಯ ವಿಕಲಚೇತನರ ಪಿಂಚಣಿ ಯೋಜನೆಯನ್ನು ‘ಪ್ರಧಾನಮಂತ್ರಿ ದಿವ್ಯಾಂಗಜನ್ ಪಿಂಚಣಿ ಯೋಜನೆ’ ಎಂದೂ ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯನ್ನು ‘ಪ್ರಧಾನಮಂತ್ರಿ ಪರಿವಾರ ಲಾಭ ಯೋಜನೆ’ ಎಂದೂ ಬದಲಾಯಿಸಲಾಗಿದೆ.

ಕೇಂದ್ರ ಸರ್ಕಾರವು ಕೇವಲ ಪ್ರಧಾನಮಂತ್ರಿ ದಿವ್ಯಾಂಗಜನ್ ಪಿಂಚಣಿ ಯೋಜನೆಯ ಸಹಾಯಧನವನ್ನು ಮಾತ್ರ ಹೆಚ್ಚಿಸಿದ್ದು, ವೃದ್ಧಾಪ್ಯ ಹಾಗೂ ವಿಧವಾ ಪಿಂಚಣಿ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪರಿಷ್ಕೃತ ನಿಯಮದ ಪ್ರಕಾರ, 0 ದಿಂದ 79 ವರ್ಷದೊಳಗಿನ ದಿವ್ಯಾಂಗ ಫಲಾನುಭವಿಗಳಿಗೆ ಈಗಿರುವ 300 ರೂಪಾಯಿ ಬದಲಿಗೆ 375 ರೂಪಾಯಿ ಸಿಗಲಿದ್ದು, 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಪ್ರಸ್ತುತ ಇರುವ 500 ರೂಪಾಯಿ ಬದಲಿಗೆ 625 ರೂಪಾಯಿ ನೆರವು ದೊರೆಯಲಿದೆ. ಇದಲ್ಲದೆ ದಿವ್ಯಾಂಗ ಪಿಂಚಣಿ ಪಡೆಯಲು ನಿಗದಿಪಡಿಸಲಾಗಿದ್ದ ಕನಿಷ್ಠ ಅಂಗವೈಕಲ್ಯದ ಮಿತಿಯನ್ನು ಶೇಕಡ 80 ರಿಂದ ಶೇಕಡ 40ಕ್ಕೆ ಇಳಿಸಲಾಗಿದ್ದು, ಜನನದಿಂದಲೇ ಕನಿಷ್ಠ ವಯಸ್ಸಿನ ಅರ್ಹತೆ ಅನ್ವಯವಾಗುವಂತೆ ನಿಯಮಗಳನ್ನು ಸಡಿಲಿಸಲಾಗಿದೆ.

Join WhatsApp

Join Now

Join Telegram

Join Now