Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾರ್ವಜನಿಕರೇ ಗಮನಿಸಿ : ಹಾವು ಕಡಿದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ

---Advertisement---

ಕೊಪ್ಪಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಹಾಗೂ ಕಿನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕಿನ್ನಾಳ ಗ್ರಾಮದಲ್ಲಿ ಮಂಗಳವಾರ “ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಹಾಗೂ ನಿಯಂತ್ರಣ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕೊಪ್ಪಳ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ. ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಹಾವು ಕಡಿತದಿಂದ ಸಂಭವಿಸುವ ಸಾವುಗಳನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಸೂಕ್ತ ಅರಿವು ಅತ್ಯಗತ್ಯ ಎಂದು ತಿಳಿಸಿದರು.

ಭಾರತದಲ್ಲಿ ನಾಗರಹಾವು, ಕಟ್ಟಾವು, ಕೊಳಕುಮಂಡಲ ಮತ್ತು ಗರಗಸ ಮಂಡಲ ಎಂಬ ನಾಲ್ಕು ಪ್ರಮುಖ ವಿಷಕಾರಿ ಹಾವುಗಳಿಂದ ಶೇ. 90ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ. ನಾಗರಹಾವನ್ನು ಹೊರತುಪಡಿಸಿ ಉಳಿದ ಮೂರು ಹಾವುಗಳು ರಾತ್ರಿ ವೇಳೆಯಲ್ಲಿ ಹೆಚ್ಚು ಚುರುಕಾಗಿರುತ್ತವೆ. ಆದ್ದರಿಂದ ರಾತ್ರಿ ಹೊತ್ತು ಹೊರಹೋಗುವಾಗ ಕಡ್ಡಾಯವಾಗಿ ಟಾರ್ಚ್ ಬಳಸಬೇಕು ಎಂದು ಸಲಹೆ ನೀಡಿದರು.

ಹಾವುಗಳು ಆಕರ್ಷಿತವಾಗದಂತೆ ಮನೆ ಮತ್ತು ಅಂಗಳವನ್ನು ಇಲಿ, ಹೆಗ್ಗಣಗಳಿಂದ ಮುಕ್ತವಾಗಿಡಬೇಕು. ಕೃಷಿ ಜಮೀನು ಹಾಗೂ ಮನೆಯ ಸುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳುವುದು, ಹೊಲದಲ್ಲಿ ಕೆಲಸ ಮಾಡುವಾಗ ಪಾದರಕ್ಷೆಗಳನ್ನು (ಶೂ) ಧರಿಸುವುದು ಹಾಗೂ ಜಾನುವಾರುಗಳಿಗೆ ಹುಲ್ಲು ಕೊಯ್ಯುವಾಗ ಕುಡುಗೋಲು ಬಳಸುವುದು ಸುರಕ್ಷಿತ ಎಂದು ತಿಳಿಸಿದರು. ರಾತ್ರಿ ವೇಳೆ ಜಮೀನು ಅಥವಾ ಹೊರಗೆ ಮಲಗುವ ಸಂದರ್ಭ ಬಂದರೆ ನೆಲದ ಬದಲು ಮಂಚ ಬಳಸಬೇಕು, ನೆಲದಲ್ಲಿ ಮಲಗಲೇಬೇಕಾದಲ್ಲಿ ಸೊಳ್ಳೆಪರದೆ ಕಡ್ಡಾಯವಾಗಿ ಬಳಸಬೇಕು ಎಂದು ಮನವಿ ಮಾಡಿದರು.

ಹಾವು ಕಚ್ಚಿದ ತಕ್ಷಣ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ವಿವರಿಸುತ್ತಾ, ಹಾವು ಕಚ್ಚಿದ ವ್ಯಕ್ತಿಯನ್ನು ಗಾಬರಿಗೊಳಿಸದೆ ಸಮಾಧಾನಪಡಿಸಬೇಕು. ರಕ್ತಬಂಧಕ ಪಟ್ಟಿ (ಟೂರ್ನಿಕೆಟ್) ಕಟ್ಟುವುದು, ಗಾಯವನ್ನು ಬ್ಲೇಡ್‌ನಿಂದ ಕತ್ತರಿಸುವುದು ಅಥವಾ ನಾಟಿ ಔಷಧ ಮಾಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕಚ್ಚಿದ ಜಾಗವನ್ನು ಅಲುಗಾಡಿಸದೆ, ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ, 40 ನಿಮಿಷಗಳ ಒಳಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪರಶುರಾಮ್, ಕಾಂತರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್ ಗಾಳಿ, ಆಶಾ ಕಾರ್ಯಕರ್ತೆಯರು, ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now