ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಿವೆಆಗರ್ ಕಡಲತೀರದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಸಮುದ್ರದ ಬಲವಾದ ಅಲೆಗಳಿಗೆ ಸಿಲುಕಿ ಪುಣೆಯ ಎಂಟು ಮಂದಿ ಅಪ್ರಾಪ್ತ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ 16 ವರ್ಷದವರಾಗಿದ್ದು, ಎಲ್ಲ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯ ಆಳಂದಿಯಲ್ಲಿರುವ ‘ವಿನ್ನರ್ಸ್ ಅಕಾಡೆಮಿ’ ಎಂಬ ಖಾಸಗಿ ಕೋಚಿಂಗ್ ಸೆಂಟರ್‌ನಿಂದ ಸುಮಾರು 170 ಕಿ.ಮೀ ದೂರದ ಈ ಕಡಲತೀರಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿತ್ತು. 25 ಹುಡುಗರು, 17 ಹುಡುಗಿಯರು ಹಾಗೂ 6 ಮಂದಿ ಶಿಕ್ಷಕರು ಸೇರಿದಂತೆ ಒಟ್ಟು 48 ಜನರ ತಂಡ ಸಂಜೆ 5:30ರ ಸುಮಾರಿಗೆ ಬೀಚ್‌ಗೆ ತೆರಳಿತ್ತು. ಈ ವೇಳೆ ಎಂಟು ವಿದ್ಯಾರ್ಥಿಗಳು ನೀರಿನ ಆಳ ಮತ್ತು ಅಲೆಗಳ ರಭಸವನ್ನು ಅಂದಾಜಿಸದೆ ಸಮುದ್ರಕ್ಕಿಳಿದಿದ್ದು, ಬಲವಾದ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ದಿವೆಆಗರ್‌ನ ‘ಭಾವು ಮಾರುತಿ ಸಾಳುಂಖೆ ಮಹಾಕಾಳಿ ವಾಟರ್ ಸ್ಪೋರ್ಟ್ಸ್’ ಮಾಲೀಕ ಭಾವು ಸಾಳುಂಖೆ ಹಾಗೂ ಅವರ ತಂಡ ಜೀವದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆ ನಡೆಸಿತು. ನೀರಿನಲ್ಲಿ ಮುಳುಗಿದ್ದ ಎಂಟೂ ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯುವಲ್ಲಿ ಅವರು ಯಶಸ್ವಿಯಾದರು.
ಮಾಹಿತಿ ತಿಳಿದ ದಿಘಿ ಸಾಗರಿ ಬೋರ್ಲಿ ಪಂಚತನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ಸಂತೋಷ್ ಅವತಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು. ಸ್ಥಳೀಯರ ನೆರವಿನೊಂದಿಗೆ ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು, ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಬೋರ್ಲಿ ಪಂಚತನ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.
ಮೃತರನ್ನು ತನ್ಮಯ್ ದತ್ತಾತ್ರೇಯ ವಹಿಲೆ, ಸುಮಿತ್ ಭಾರತ್ ಅಹಿರೆ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಸಂಕರ್, ರಾಜವೀರ್ ಯುವರಾಜ್ ವಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಮ್ ತುಕಾರಾಮ್ ಭಾಂಡ್ವಲ್ಕರ್ ಹಾಗೂ ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ.
ಮುಖ್ಯಮಂತ್ರಿ ಸಂತಾಪ, ತನಿಖೆಗೆ ಆದೇಶ:

ಈ ದುರಂತದ ಕುರಿತು ‘ಎಕ್ಸ್’ ಖಾತೆಯಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಇದು ಅತ್ಯಂತ ದುರದೃಷ್ಟಕರ ಹಾಗೂ ಹೃದಯವಿದ್ರಾವಕ ಘಟನೆ. ಮೃತದೇಹಗಳನ್ನು ಆಳಂದಿಗೆ ತರಲು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ದುರಂತದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿರುವ ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್, ಅಕಾಡೆಮಿಯ ಹೊಣೆಗಾರಿಕೆಯ ಕುರಿತು ಪರಿಶೀಲಿಸಲಾಗುವುದು ಎಂದಿದ್ದಾರೆ. ಅಲ್ಲದೆ, ಶಾಲಾ-ಕಾಲೇಜು ಪ್ರವಾಸಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.










