ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 01 :: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾದ ಕೇವಲ 9 ಗಂಟೆಗಳ ಒಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೇಳುಗುಡ್ಡ ಗ್ರಾಮದ ನಿವಾಸಿ ಜನಾರ್ಧನ (ತಂದೆ ಪರಶುರಾಮ) ಬಂಧಿತ ಆರೋಪಿಯಾಗಿದ್ದು, ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಕರಿಯಪ್ಪ ಅವರ ಪುತ್ರ ರಂಗಸ್ವಾಮಿ (26) ಕೊಲೆಯಾದ ದುರ್ದೈವಿ.
ಸೆಪ್ಟೆಂಬರ್ 26ರಂದು ಮಧ್ಯಾಹ್ನ ರಂಗಸ್ವಾಮಿ ಜಾನುಕೊಂಡಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದರು. ಈ ಹಿಂದೆ ಶಿವಗಂಗಾ ಗ್ರಾಮದ ಬಳಿ ರಂಗಸ್ವಾಮಿ ಹಾಗೂ ಜನಾರ್ದನ ನಡುವೆ ಜಗಳ ನಡೆದು ವೈಮನಸ್ಸು ಉಂಟಾಗಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಜನಾರ್ದನ, ಅಂದು ಸಂಜೆ ರಂಗಸ್ವಾಮಿಯನ್ನು ಜಾನುಕೊಂಡ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರೀತಿಯಿಂದ ಮಾತನಾಡಿಸಿ ಕರೆಸಿಕೊಂಡಿದ್ದಾನೆ. ನಂತರ ಆತನಿಗೆ ಮದ್ಯಪಾನ ಮಾಡಿಸಿ, ಈರಜ್ಜನಹಟ್ಟಿ ಗೇಟ್ ಸಮೀಪದ ಚಂದ್ರಣ್ಣ ಎಂಬುವವರ ಕ್ರಷರ್ ಪಕ್ಕದ ಗುಡ್ಡದ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ರಾತ್ರಿ ಸುಮಾರು 7:15ರ ವೇಳೆಗೆ ರಂಗಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದು, ಆತ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ನೆಲಕ್ಕೆ ಕೆಡವಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕೃತ್ಯವೆಸಗಿದ ಬಳಿಕ ಜನಾರ್ದನ ಈ ವಿಷಯವನ್ನು ತನ್ನ ಸ್ನೇಹಿತ ಗುರುಕಿರಣ್ ಬಳಿ ಹೇಳಿಕೊಂಡಿದ್ದಾನೆ. ಕೂಡಲೇ ಎಚ್ಚೆತ್ತ ಗುರುಕಿರಣ್ ತನ್ನ ಮನೆಯವರಿಗೆ ವಿಷಯ ತಿಳಿಸಿ, ಮಾವ ವಿಜಯ್ ಕುಮಾರ್ ಅವರೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಪೊಲೀಸರು ಗುರುಕಿರಣ್‌ನನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಿದಾಗ ರಂಗಸ್ವಾಮಿಯ ಶವ ಪತ್ತೆಯಾಗಿದೆ. ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 103(1), 238ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದರು.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಲ್ ಚೌಕ್ಷೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಚಿತ್ರದುರ್ಗ ಉಪವಿಭಾಗದ ಡಿವೈಎಸ್‌ಪಿ ಅರುಣ್ ನಾಗೇಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಗ್ರಾಮಾಂತರ ಪೊಲೀಸ್ ನಿರೀಕ್ಷಕ ಬಾಲಚಂದ್ರನಾಯ್ಕ, ಪಿಎಸ್‌ಐ ಸುರೇಶ್, ಮಹಿಳಾ ಪಿಎಸ್‌ಐ ರುಕ್ಕಮ್ಮ ಹಾಗೂ ಸಿಬ್ಬಂದಿಗಳಾದ ಮಾರುತಿರಾಂ, ಜಿ.ಕೆ. ಶಿವಣ್ಣ, ಯತಿರಾಜ್, ರಮೇಶ್, ನಾಗರಾಜ, ವೀರಭದ್ರಪ್ಪ ಮತ್ತು ಪ್ರಸನ್ನ ಅವರನ್ನೊಳಗೊಂಡ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ ಕೇವಲ 9 ಗಂಟೆಗಳಲ್ಲೇ ಆರೋಪಿ ಜನಾರ್ದನನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಅತ್ಯಂತ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಷೆ ಶ್ಲಾಘಿಸಿದ್ದಾರೆ.










