Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

SHOCKING : ಚಿನ್ನಾಭರಣಕ್ಕಾಗಿ ಅಜ್ಜಿಯನ್ನೇ ಉಸಿರುಗಟ್ಟಿಸಿ ಕೊಂದ ಮೊಮ್ಮಗ: ಮನೆ ಇಎಂಐ ಕಟ್ಟಲು ಕೃತ್ಯ

---Advertisement---

ಯಾದಾದ್ರಿ ಭುವನಗಿರಿ : ಸಂಬಂಧಗಳು ಕಳಚಿಬಿದ್ದು, ಹಣದಾಸೆ ಮನುಷ್ಯತ್ವವನ್ನೇ ಕಸಿದುಕೊಳ್ಳುತ್ತಿದೆ ಎಂಬುದಕ್ಕೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ವೃದ್ಧಾಪ್ಯದಲ್ಲಿ ತನಗೆ ಆಸರೆಯಾಗುತ್ತಾನೆ ಎಂದು ನಂಬಿದ್ದ ವ್ಯಕ್ತಿಯೇ ಮನೆ ಇಎಂಐ ಕಟ್ಟುವ ಸಲುವಾಗಿ, ಪ್ರೀತಿಯಿಂದ ಸಲಹಿದ ಅಜ್ಜಿಯ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೀವ್ರ ಆಘಾತ ಮೂಡಿಸಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯ ಚೌಟುಪ್ಪಲ್ ಮಂಡಲದ ತೂಪ್ರಾನ್ಪೇಟೆ ಗ್ರಾಮದ ಯಾದಮ್ಮ (70) ಎಂಬ ವೃದ್ಧೆ, ವಿವಾಹವಾದ ಕೆಲವೇ ತಿಂಗಳುಗಳಲ್ಲಿ ಪತಿಯಿಂದ ದೂರವಾಗಿ ತಮ್ಮ ತವರು ಮನೆಯಲ್ಲೇ ಏಕಾಂಗಿಯಾಗಿ ಜೀವಿಸುತ್ತಿದ್ದರು. ಇವರ ಸಂಬಂಧಿಯಾದ ರಾಜು ಎಂಬ ಯುವಕ ಆಗಾಗ ಬಂದು ಆಕೆಯ ಯೋಗಕ್ಷೇಮ ವಿಚಾರಿಸುತ್ತಿದ್ದರಿಂದ, ಆತನ ಮೇಲೆ ಯಾದಮ್ಮನಿಗೆ ಅಪಾರ ಪ್ರೀತಿ ಮತ್ತು ವಿಶ್ವಾಸವಿತ್ತು.

ಹಾಲಿನ ವ್ಯಾಪಾರ ಮಾಡುತ್ತಿದ್ದ ರಾಜು, ಇತ್ತೀಚೆಗೆ ತೂಪ್ರಾನ್ಪೇಟೆಯ ಬ್ಯಾಂಕ್ ಕಾಲೋನಿಯಲ್ಲಿ ಬರೋಬ್ಬರಿ 36 ಲಕ್ಷ ರೂಪಾಯಿ ಸಾಲ ಪಡೆದು ಮನೆಯೊಂದನ್ನು ಖರೀದಿಸಿದ್ದನು. ಆದರೆ, ಪ್ರತಿ ತಿಂಗಳು ಬ್ಯಾಂಕ್ ಇಎಂಐ ಪಾವತಿಸಲು ಹಣ ಹೊಂದಿಸಲಾಗದೆ ಆತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನು. ಬ್ಯಾಂಕ್ ಸಿಬ್ಬಂದಿಯಿಂದ ಕಂತು ಕಟ್ಟುವಂತೆ ಒತ್ತಡ ಹೆಚ್ಚಾದಾಗ, ಯಾದಮ್ಮನ ಬಳಿ ಇರುವ ಚಿನ್ನ ಮತ್ತು ಬೆಳ್ಳಿ ಆಭರಣಗಳ ಮೇಲೆ ರಾಜುವಿನ ಕಣ್ಣು ಬಿದ್ದಿದೆ. ಆ ಒಡವೆಗಳನ್ನು ಅಡವಿಟ್ಟು ಇಎಂಐ ಕಟ್ಟಲು ನೀಡುವಂತೆ ಆಕೆಯ ಬಳಿ ದುಂಬಾಲು ಬಿದ್ದಿದ್ದಾನೆ. ಆದರೆ, ಇದು ಕುಟುಂಬದ ಒಡವೆಯಾಗಿದ್ದು, ಕೊಡಲು ಸಾಧ್ಯವಿಲ್ಲ ಎಂದು ಯಾದಮ್ಮ ಸ್ಪಷ್ಟವಾಗಿ ನಿರಾಕರಿಸಿದ್ದರು.

ಒಡವೆ ನೀಡಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ರಾಜು, ಹೇಗಾದರೂ ಮಾಡಿ ಆಭರಣಗಳನ್ನು ದೋಚಲು ಸಂಚು ರೂಪಿಸಿದ್ದನು. ಕಳೆದ ತಿಂಗಳ 27ರಂದು ಯಾದಮ್ಮ ಅವರ ಮನೆಗೆ ತೆರಳಿ ಹಗ್ಗದಿಂದ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಆರಂಭದಲ್ಲಿ ಯಾದಮ್ಮನ ಸಾವು ಅನುಮಾನಾಸ್ಪದ ಎಂದು ಭಾವಿಸಲಾಗಿತ್ತಾದರೂ, ಮೃತದೇಹದ ಮೇಲಿದ್ದ ಚಿನ್ನದ ಒಡವೆಗಳು ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಶವಪರೀಕ್ಷೆಯ ವರದಿಯಲ್ಲಿ ಇದು ಉಸಿರುಗಟ್ಟಿಸಿ ಮಾಡಿದ ಕೊಲೆ ಎಂಬುದು ದೃಢಪಟ್ಟಿತ್ತು.

ಘಟನೆಯ ಬಳಿಕ ಯಾವಾಗಲೂ ಯಾದಮ್ಮನ ಜೊತೆಗಿರುತ್ತಿದ್ದ ರಾಜು, ದಿಢೀರನೆ ಯಾರಿಗೂ ಕಾಣಿಸಿಕೊಳ್ಳದೆ ದೂರ ಉಳಿದಿದ್ದರಿಂದ ಪೊಲೀಸರಿಗೆ ಆತನ ಮೇಲೆ ಶಂಕೆ ವ್ಯಕ್ತವಾಗಿದೆ. ಆತನ ಮೊಬೈಲ್ ಕರೆಗಳ ವಿವರ (ಸಿಡಿಆರ್) ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಅನುಮಾನ ಮತ್ತಷ್ಟು ಬಲಗೊಂಡಿತು. ತಕ್ಷಣ ರಾಜುವನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆತ ಚಿನ್ನಾಭರಣಕ್ಕಾಗಿ ಅಜ್ಜಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯಿಂದ 5.6 ತೊಲ ಚಿನ್ನ, ಬೆಳ್ಳಿ ಆಭರಣಗಳು, ಒಂದು ಬೈಕ್ ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ಚೌಟುಪ್ಪಲ್ ಡಿಎಸ್ಪಿ ಮಧುಸೂದನ್ ರೆಡ್ಡಿ ತಿಳಿಸಿದ್ದಾರೆ. ಕೊನೆಗಾಲದಲ್ಲಿ ನೆರಳಾಗಬೇಕಿದ್ದ ಮೊಮ್ಮಗನೇ ಚಿನ್ನದಾಸೆಗೆ ಜೀವ ತೆಗೆದಿರುವುದು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಹಾಗೂ ವಿಷಾದವನ್ನು ಹುಟ್ಟುಹಾಕಿದೆ.

Join WhatsApp

Join Now

Join Telegram

Join Now