ದೆಹಲಿ : ಜನನ ಮತ್ತು ಮರಣ ಪ್ರಮಾಣಪತ್ರಗಳ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆಯನ್ನು ಇಂದಿನಿಂದ ದೇಶಾದ್ಯಂತ ಜಾರಿಗೆ ತಂದಿದೆ.
1969ರ ಮೂಲ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ತರಲಾಗಿದ್ದು, ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು ಹಾಗೂ ನೋಂದಣಿಯಲ್ಲಿ ಆಗುವ ವಿಳಂಬವನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತ ಪಡೆದಿದ್ದ ಈ ನೂತನ ನಿಯಮಗಳು ಇಂದಿನಿಂದ ಎಲ್ಲಾ ಗ್ರಾಮ ಪಂಚಾಯಿತಿಗಳು, ನಗರ ಪಾಲಿಕೆಗಳು ಮತ್ತು ಪುರಸಭೆಗಳಲ್ಲಿ ಅನ್ವಯವಾಗಲಿವೆ.
ಹೊಸ ನಿಯಮಾವಳಿಗಳ ಪ್ರಕಾರ, ಜನನ ಅಥವಾ ಮರಣ ಸಂಭವಿಸಿದ 21 ದಿನಗಳ ಒಳಗಾಗಿ ನೋಂದಣಿ ಮಾಡಿಸಿದರೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಹಾಗೂ ಅತ್ಯಂತ ಸುಲಭವಾಗಿ ಪ್ರಮಾಣಪತ್ರ ಲಭ್ಯವಾಗಲಿದೆ. ಆದರೆ 21 ದಿನಗಳ ಗಡುವು ಮೀರಿದರೆ ಪ್ರಕ್ರಿಯೆ ಸಾಕಷ್ಟು ಕಠಿಣವಾಗಲಿದೆ. ಒಂದು ವರ್ಷದಿಂದ ಎರಡು ವರ್ಷಗಳ ಅವಧಿಯಲ್ಲಿ ಅರ್ಜಿ ಸಲ್ಲಿಸಿದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ಅನುಮತಿ ಪಡೆಯಬೇಕಾಗುತ್ತದೆ. ಒಂದು ವೇಳೆ ಎರಡು ವರ್ಷಗಳಿಗಿಂತ ಹೆಚ್ಚು ವಿಳಂಬವಾದರೆ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಆದೇಶ ಕಡ್ಡಾಯವಾಗಿದ್ದು, ಅವರ ಅನುಮೋದನೆಯ ನಂತರವಷ್ಟೇ ಪ್ರಮಾಣಪತ್ರ ನೀಡಲಾಗುತ್ತದೆ. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹೊಣೆಯನ್ನು ಸ್ಥಳೀಯ ರಿಜಿಸ್ಟ್ರಾರ್‌ಗಳಿಗೆ ವಹಿಸಲಾಗಿದೆ.
ಅದೇ ರೀತಿ, ವ್ಯಕ್ತಿಯೊಬ್ಬರು ತಮ್ಮ ಸ್ವಂತ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಯಲ್ಲಿ ಮೃತಪಟ್ಟರೆ ಮರಣ ಪ್ರಮಾಣಪತ್ರಕ್ಕಾಗಿ ಕುಟುಂಬಸ್ಥರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರಳ ಮಾರ್ಗವನ್ನು ರೂಪಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಆಸ್ಪತ್ರೆ ನೀಡುವ ಅಧಿಕೃತ ದಾಖಲೆಯನ್ನು ನಾಗರಿಕ ಸೇವಾ ಕೇಂದ್ರಗಳಲ್ಲಿ ಸಲ್ಲಿಸಿ ಸುಲಭವಾಗಿ ಮರಣ ಪ್ರಮಾಣಪತ್ರ ಪಡೆಯಬಹುದಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಜನನ ಪ್ರಮಾಣಪತ್ರ ಅತ್ಯಗತ್ಯ ದಾಖಲೆಯಾಗಿರುವುದರಿಂದ, ಮಕ್ಕಳು ಜನಿಸಿದ ತಕ್ಷಣವೇ 21 ದಿನಗಳೊಳಗೆ ಅರ್ಜಿ ಸಲ್ಲಿಸಿ ಪ್ರಮಾಣಪತ್ರ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಸೂಚಿಸಿದೆ.










