ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 29 : ಕಡಿಮೆ ದಾಖಲಾತಿ ನೆಪವೊಡ್ಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ವರ್ಗಾವಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್ಓ ಚಿತ್ರದುರ್ಗ ಜಿಲ್ಲಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳಿಕೆ ನೀಡುತ್ತಲೇ ಕಡಿಮೆ ದಾಖಲಾತಿ ಇರುವ ಶಾಲೆಯ ಮಕ್ಕಳನ್ನು ಕೆಪಿಎಸ್ ಶಾಲೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ನಾಡಿನ ಜನತೆಯನ್ನು ವಂಚಿಸಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಸರ್ಕಾರವು ಯಾವ ರೀತಿ ಪಿತೂರಿ ನಡೆಸುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ. ಸರ್ಕಾರದ ಈ ವಿದ್ಯಾರ್ಥಿ- ಬಡಜನ ವಿರೋಧಿ ನಯವಂಚಕ ನಡೆಯನ್ನು ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ತೀವ್ರವಾಗಿ ಖಂಡಿಸುತ್ತವೆ.
“ಯಾವುದೇ ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ” ಎಂದು ಹೇಳುತ್ತಲೇ, ಕಡಿಮೆ ದಾಖಲಾತಿಯ ನೆಪವೊಡ್ಡಿ ಹಳ್ಳಿಗಾಡಿನ ಶಾಲೆಗಳ ಮಕ್ಕಳನ್ನು ಕೆಪಿಎಸ್ ಶಾಲೆಗಳಿಗೆ ಸ್ಥಳಾಂತರಿಸುವ ಈ ತೀರ್ಮಾನವು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರವಾಗಿದೆ. ಇಲ್ಲಿ ಕಡಿಮೆ ದಾಖಲಾತಿಗೆ ಯಾವುದೇ ನಿರ್ದಿಷ್ಟ ಮಾನದಂಡವಿಲ್ಲ. ಇದು ಬಡ, ರೈತ, ಕೂಲಿಕಾರರ ಮತ್ತು ಶೋಷಿತ ವರ್ಗಗಳ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಸರ್ಕಾರದ ಜನವಿರೋಧಿ ಧೋರಣೆಯಾಗಿದೆ.
ಪ್ರತಿಯೊಂದು ಹಳ್ಳಿಯಲ್ಲೂ ಸರ್ಕಾರಿ ಶಾಲೆ ಇರಬೇಕೆಂಬುದು ಸಂವಿಧಾನಬದ್ಧ ಹಕ್ಕು. ಮಕ್ಕಳನ್ನು ದೂರದ ಶಾಲೆಗಳಿಗೆ ಸಾಗಿಸುವ ಬದಲು, ಕಡಿಮೆ ದಾಖಲಾತಿ ಇರುವ ಶಾಲೆಗಳಿಗೆ ಮೂಲಸೌಕರ್ಯ, ಅಗತ್ಯ ಶಿಕ್ಷಕರು ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕು. ಮಕ್ಕಳಿಗೆ ಬಸ್ ಸೌಲಭ್ಯ ಕಲ್ಪಿಸುತ್ತೇವೆ ಎಂಬ ಆಮಿಷವೊಡ್ಡಿ ಶಾಲೆಗಳನ್ನು ಮುಚ್ಚುವುದು ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರವಾಗಿದೆ. ಇಂದಿಗೂ ಎಷ್ಟೋ ಹಳ್ಳಿಗಳಿಗೆ ಬಸ್ ಸೌಕರ್ಯವಿಲ್ಲ. ಸಾರಿಗೆ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ, ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೇ ಕೆಪಿಎಸ್ ಶಾಲೆಗಳಿಗೆ ತೆರಳುತ್ತಿರುವ 25,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸರ್ಕಾರ ಬಸ್ ಸೌಕರ್ಯ ಒದಗಿಸಿಲ್ಲ.
ಕೆಪಿಎಸ್ ಶಾಲೆಗಳ ಆರಂಭವನ್ನು ನೆಪ ಮಾಡಿಕೊಂಡು ನೆರೆಹೊರೆಯ ಶಾಲೆಗಳನ್ನು ದುರ್ಬಲಗೊಳಿಸಬಾರದು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸುಸಜ್ಜಿತ ಕಟ್ಟಡ, ಲ್ಯಾಬ್, ಗ್ರಂಥಾಲಯ ಹಾಗೂ ಖಾಲಿ ಇರುವ ಬೋಧಕ ಹುದ್ದೆಗಳ ನೇಮಕಾತಿ ಮಾಡಿ ಸಾರ್ವಜನಿಕ ಶಿಕ್ಷಣವನ್ನು ಉಳಿಸಿ-ಬೆಳೆಸಬೇಕು. ಸರ್ಕಾರ ತಕ್ಷಣವೇ ಈ ಅವೈಜ್ಞಾನಿಕ ತೀರ್ಮಾನವನ್ನು ಕೈಬಿಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರನ್ನು ಒಗ್ಗೂಡಿಸಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಪುನರ್ ಆರಂಭಿಸಲಾಗುವುದು ಸಮಿತಿ ಎಚ್ಚರಿಕೆ ನೀಡಿದೆ.









