Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಮಕ-ಮಾಸಿಕ: ದ್ರೌಪದಿ-ಪ್ರಾತಿಕಾಮಿ ಸಂವಾದ ಕಾರ್ಯಕ್ರಮ ಸಂಪನ್ನ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆ. 29:  ನಗರದ ಗಮಕ ಸಂಘವು ತನ್ನ 40ನೇ ವಾರ್ಷಿಕೋತ್ಸವದ ನಿಮಿತ್ತ ನಡೆಸುತ್ತಿರುವ ಸರಣಿ ಕಾರ್ಯಕ್ರಮದ 38ನೇ ಅಧಿವೇಶನವು ತಾರೀಕು 27/9/2026ರ ಭಾನುವಾರ ಸಂಜೆ ನಗರದ ಜೆಸಿಆರ್ ಬಡಾವಣೆಯ ಶ್ರೀಗಣಪತಿ ದೇವಾಲಯದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರದ ಜ್ಞಾನದೀಪ ವಿದ್ಯಾ ಮಂದಿರದ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಅವರು ಮಾತನಾಡುತ್ತಾ, ಗಮಕ ಕಲೆಯು ಕೇವಲ ಪುರಾಣೇತಿಹಾಸದ ವಿಚಾರವನ್ನು ತಿಳಿಸುವುದಷ್ಟೇ ಅಲ್ಲದೆ, ಮೌಲ್ಯಯುತ ಬದುಕನ್ನು ಕಟ್ಟಿಕೊಡುವ ಮಾರ್ಗದರ್ಶನ ನೀಡುತ್ತದೆ. ಪ್ರಸ್ತುತ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿರುವ ನೈತಿಕತೆಯನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದ ಅವರು, ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಂಡು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದ ಸಭಾಪರ್ವದಿಂದ ಆಯ್ದ ಚಿತ್ತವೇಧಕ ಪ್ರಸಂಗ ದ್ರೌಪದಿ ಪ್ರಾತಿಕಾಮಿ ಸಂವಾದದ ವಾಚನವನ್ನು ಬೆಂಗಳೂರಿನ ಗಮಕಿ ಮಂಜುಳಾ ದತ್ತಾತ್ರಿ ಅವರು ನಡೆಸಿಕೊಟ್ಟರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಆಭೇರಿ, ಕಲ್ಯಾಣಿ, ರೇವತಿ, ವಿಜಯನಾಗರಿ, ಅಮೃತವರ್ಷಿಣಿ ಮುಂತಾದ ರಾಗಗಳಲ್ಲಿ ಪದ್ಯಗಳನ್ನು ಪ್ರಸ್ತುತಪಡಿಸಿದ ರೀತಿ ಮನಸೂರೆಗೊಂಡಿತು. ಅದಕ್ಕೆ ತಕ್ಕುದಾದ ವ್ಯಾಖ್ಯಾನವನ್ನು ಗಮಕಿ ಅನಂತಕೃಷ್ಣ ಅವರು ನೀಡುವುದರ ಜೊತೆಗೆ ಸಂಸ್ಕಾರವಂತರಾದವರ ಮಾತುಗಳ ವಿಶೇಷತೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸರಾಫರಾದ ಶ್ರೀ ವೆಂಕಟೇಶ ಹಾಗೂ ಸರಸ್ವತಿ ದಂಪತಿಗಳು ಹಾಗೂ ಜ್ಞಾನದೀಪ ವಿದ್ಯಾಮಂದಿರದ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಬದ್ರೀಪ್ರಸಾದ್ ಅವರು ತಮ್ಮ ಉದಾರ ದೇಣಿಗೆಯ ಮೂಲಕ ಕಲೆಯನ್ನು ಪ್ರೋತ್ಸಾಹಿಸಿದರು.

ಸಂಗೀತ ಶಿಕ್ಷಕಿ ಶ್ರೀಮತಿ ಅಂಜಲಿ ಕಾರ್ತಿಕ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮೀನಾಕ್ಷಿ ಭಟ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತ ಕೋರಿದರು. ನಿರ್ದೇಶಕಿ ಬಿ. ಎಲ್. ಉಮಾ ನಿರೂಪಿಸಿ ವಂದಿಸಿದರು. ಸಂಘದ ಅಧ್ಯಕ್ಷೆ ಕೆ. ಆರ್. ರಮಾದೇವಿ ವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಹಾಗೂ ಕಲಾವಿದರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆರಂಭದಲ್ಲಿ ಗಮಕ ಕಲೆಗೆ, ಗಮಕ ಸಂಘಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದ, ಇತ್ತೀಚೆಗಷ್ಟೇ ಕೈಲಾಸವಾಸಿಗಳಾದ ಡಾ. ಕೆ. ಎಮ್. ವೀರೇಶ್ ಅವರಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಮರ್ಪಿಸಿ ಗೌರವ ನಮನ ಸಲ್ಲಿಸಲಾಯಿತು.

ಮುಂದಿನ ಕಾರ್ಯಕ್ರಮ ನಗರದ ವಾಸವಿ ದೇವಾಲಯದ ಸಭಾಂಗಣದಲ್ಲಿ ದಿನಾಂಕ 30/10/2026ರಂದು ಸಂಘದ ನಿರ್ದೇಶಕಿ ಶ್ರೀಮತಿ ಲಕ್ಷ್ಮಿ ವಾಸುದೇವ ಶ್ರೇಷ್ಠಿ ಅವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಕುಮಾರವ್ಯಾಸ ಭಾರತದಿಂದ ಆಯ್ದ ಪದ್ಯ ಭಾಗವನ್ನು ಗಮಕಿ ಚಂಪಕಾ ಶ್ರೀಧರ್ ವಾಚಿಸುವರು, ಕೆ. ಆರ್. ರಮಾದೇವಿ ವ್ಯಾಖ್ಯಾನಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now